ರಾಜ್ಯದ 5.86 ಲಕ್ಷ ವಿಶೇಷಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ: ಸಚಿವ ಡಾ.ಕೆ.ಸುಧಾಕರ್‌

ವಿಕಲಚೇತನರ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ, ವಿಶೇಷಚೇತನರಿಗೆ ನೀಡುವ ಯುನಿವರ್ಸಲ್ ಗುರುತು ಚೀಟಿ–ಯುಡಿಐಡಿಯಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಿದೆ.

ರಾಜ್ಯದ 5.86 ಲಕ್ಷ ವಿಶೇಷಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ: ಸಚಿವ ಡಾ.ಕೆ.ಸುಧಾಕರ್‌
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Nov 22, 2022 | 3:46 PM

ಬೆಂಗಳೂರು: ಸರ್ಕಾರದಿಂದ ವಿಶೇಷಚೇತನರಿಗೆ ನೀಡುವ ವಿಶಿಷ್ಟ ಗುರುತಿನ ಚೀಟಿ (UDID) ವಿತರಣೆಯಲ್ಲಿ ರಾಜ್ಯದಲ್ಲಿ ಗಮನಾರ್ಹ ಸಾಧನೆಯಾಗಿದೆ. ಈವರೆಗೆ 5.86 ಲಕ್ಷ ವಿಶೇಷಚೇತನರಿಗೆ ಕಾರ್ಡ್‌ ವಿತರಣೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ (Dr. K Sudhakar) ತಿಳಿಸಿದರು. ಯುಡಿಐಡಿ ಕಾರ್ಡ್‌ ವಿತರಣೆ ಪ್ರಕ್ರಿಯೆಯ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. ವಿಕಲಚೇತನರ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ, ವಿಶೇಷಚೇತನರಿಗೆ ನೀಡುವ ಯುನಿವರ್ಸಲ್ ಗುರುತು ಚೀಟಿ–ಯುಡಿಐಡಿಯಲ್ಲಿ ಕರ್ನಾಟಕ ಉತ್ತಮ ಸಾಧನೆ ತೋರಿದೆ. ರಾಮನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾರ್ಡ್‌ಗಳು ವಿತರಣೆಯಾಗಿವೆ. ಚಿಕ್ಕಮಗಳೂರು ಎರಡನೇ ಸ್ಥಾನದಲ್ಲಿದ್ದು, ಬಾಗಲಕೋಟೆ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ ಹಾಗೂ ಮಂಡ್ಯ ಜಿಲ್ಲೆಗಳು ನಂತರದ ಸ್ಥಾನಗಳಲ್ಲಿವೆ ಎಂದು ಸಚಿವರು ತಿಳಿಸಿದರು. ಜೊತೆಗೆ ಉತ್ತಮ ಸಾಧನೆ ಮಾಡಿದ ಜಿಲ್ಲೆಗಳ ಆರೋಗ್ಯಾಧಿಕಾರಿಗಳನ್ನು ಅಭಿನಂದಿಸಿದರು.

ವಿಶೇಷಚೇತನರು ಕಡ್ಡಾಯವಾಗಿ ಯುಡಿಐಡಿ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಒಮ್ಮೆ ಲಾಗಿನ್ ಆದ ನಂತರ ಯುಡಿಐಡಿ ಕಾರ್ಡ್ ಪಡೆಯುವುದು ಸುಲಭವಾಗಿದೆ. ಇದರ ಮೂಲಕ ಸರ್ಕಾರದಿಂದ ಹಲವಾರು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಲಿದೆ. ಯುಡಿಐಡಿ ಕಾರ್ಡ್‌ನಿಂದ ಬ್ಲಾಕ್ ಮತ್ತು ಜಿಲ್ಲಾ ಹಂತ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಎಲ್ಲಾ ಹಂತದ ಅನುಷ್ಠಾನ ಶ್ರೇಣಿಯಲ್ಲಿ ಫಲಾನುಭವಿಯ ಸೌಲಭ್ಯಗಳನ್ನು ಟ್ರ್ಯಾಕ್ ಮಾಡಲಾಗುವುದು. ಕಟ್ಟ ಕಡೆಯ ವಿಶೇಷಚೇತನರಿಗೂ ಯುಡಿಐಡಿ ಕಾರ್ಡ್‌ಗಳನ್ನು ವಿತರಿಸುವುದು ಸರ್ಕಾರದ ಗುರಿಯಾಗಿದ್ದು, ಇದಕ್ಕಾಗಿ ಎಲ್ಲಾ ವಲಯಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಅಂಗವೈಕಲ್ಯದಲ್ಲಿ ಈ ಹಿಂದೆ 7 ಬಗೆಯ ನ್ಯೂನತೆಗಳನ್ನು ಮಾತ್ರ ಪರಿಗಣಿಸಲಾಗುತ್ತಿತ್ತು. ಆದರೆ 2016 ರ ಆರ್.ಪಿ.ಡಬ್ಲ್ಯೂ.ಡಿ ಕಾಯ್ದೆಗೆ ತಿದ್ದುಪಡಿ ತಂದ ನಂತರ 21 ರೀತಿಯ ನ್ಯೂನತೆಗಳನ್ನು ಗುರುತಿಸಲಾಗಿದೆ. ವಿಶೇಷಚೇತನರ ವೈಯಕ್ತಿಕ ಮತ್ತು ದೈಹಿಕ ನ್ಯೂನತೆಗಳ ಬಗ್ಗೆ ದತ್ತಾಂಶ ಸಂಗ್ರಹಿಸಲಾಗುತ್ತಿದೆ. ಶೈಕ್ಷಣಿಕ, ಉದ್ಯೋಗ ವಿವರಗಳನ್ನು ಸಹ ಇದು ಒಳಗೊಂಡಿದೆ. ಶೇ.40 ರಷ್ಟು ದೈಹಿಕ ನ್ಯೂನತೆ ಹೊಂದಿರುವವರನ್ನು ವಿಶೇಷಚೇತನರು ಎಂದು ಗುರುತಿಸಲಾಗುತ್ತಿದೆ. 2011 ರ ಜನಗಣತಿ ವರದಿಯಂತೆ, ದೇಶದಲ್ಲಿ ಶೇ.2.21 ರಷ್ಟು ಮಂದಿ ಇಂತಹ ಸಮಸ್ಯೆಗಳನ್ನು ಹೊಂದಿದ್ದಾರೆ. ಇವರಿಗೆ ಸೌಲಭ್ಯಗಳನ್ನು ದೊರಕಿಸಿಕೊಡಲು ವಿಶೇಷ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.