ಬೆಂಗಳೂರು: ಕೆಲ ಘಟನೆಗಳಿಂದ ರಾಜ್ಯದ ಖ್ಯಾತಿ ಬದಲಾಗುವ ಆತಂಕ ಇದೆ. ಕಾನೂನು ಸುವ್ಯವಸ್ಥೆ ಸರಿಯಿದ್ರೆ ಆ ಪ್ರದೇಶ ಸರಿಯಾಗಿರುತ್ತೆ. ರಾಜ್ಯದಲ್ಲಿ ಯಾರಿಗೂ ನೆಮ್ಮದಿ, ಧೈರ್ಯದ ವಾತಾವರಣವಿಲ್ಲ ಎಂದು ವಿಧಾನಸಭೆಯಲ್ಲಿ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಇಂದು (ಮಾರ್ಚ್ 16) ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಶವಯಾತ್ರೆಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಭಾಗಿ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಯು.ಟಿ. ಖಾದರ್ ಮಾತಿಗೆ ಸಚಿವ ಜೆ.ಸಿ. ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದಿದ್ದಕ್ಕೆ ಆಕ್ರೋಶ ಕೇಳಿಬಂದಿದೆ. ಕಾಂಗ್ರೆಸ್ ಶಾಸಕ ಜಮೀರ್ ಪ್ರಸ್ತಾಪಕ್ಕೆ ಸದನದಲ್ಲಿ ಗದ್ದಲ ಉಂಟಾಗಿದೆ.
ಕರ್ನಾಟಕ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ವಿಚಾರವಾಗಿ ವಿಧಾನಸಭೆಯಲ್ಲಿ ನಿಲುವಳಿ ಸೂಚನಾ ಪ್ರಸ್ತಾವ ಮಂಡನೆ ಮಾಡಲಾಗಿದೆ. ನಿಯಮ 60ರ ಅಡಿಯಲ್ಲಿ ವಿಪಕ್ಷ ಕಾಂಗ್ರೆಸ್ ನಿಲುವಳಿ ಸೂಚನಾ ಪ್ರಸ್ತಾಪ ಮಂಡಿಸಿದೆ. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಹಿಜಾಬ್ ವಿವಾದ, ಹಿಂದೂ ಕಾರ್ಯಕರ್ತನ ಹತ್ಯೆ ಸೇರಿದಂತೆ ಕಾನೂನು, ಸುವ್ಯವಸ್ಥೆ ವಿಚಾರಗಳನ್ನೊಳಗೊಂಡ ನಿಲುವಳಿಯನ್ನು ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಮಂಡನೆ ಮಾಡಿದ್ದಾರೆ.
ಬಿ.ಎಸ್. ಯಡಿಯೂರಪ್ಪ ತಾಳ್ಮೆ, ಬದ್ಧತೆಯನ್ನ ಎಲ್ಲರೂ ಮೆಚ್ಚಿಕೊಳ್ಳುತ್ತೇವೆ. ಮಾಧುಸ್ವಾಮಿ ಈ ಗುಣಗಳನ್ನ ಅಳವಡಿಸಿಕೊಂಡ್ರೆ ಒಳ್ಳೆಯದು ಎಂದು ಮಾಜಿ ಸಿಎಂ ಯಡಿಯೂರಪ್ಪರನ್ನು ಯು.ಟಿ. ಖಾದರ್ ಹೊಗಳಿದ್ದಾರೆ. ಜವಾಬ್ದಾರಿ ಕೊಟ್ಟಿದ್ದಾರೆ, ಮಾತಾಡಲೇಬೇಕು. ರನ್ ಹೊಡೆದು ಎದುರಿದ್ದವನ ಜತೆ ಕೇಳಿಯೇ ಓಡಬೇಕು. ಎದುರಿದ್ದವನನ್ನ ಕೇಳದೇ ಓಡಿದರೆ ರನೌಟ್ ಆಗಿಬಿಡ್ತೀವಿ. ಸ್ವಲ್ಪ ನೋಡ್ಕೊಂಡು ಓಡಪ್ಪಾ, ನಾನು ಇದ್ದೇನೆ ಎಂದು ವಿಪಕ್ಷ ಉಪನಾಯಕ ಖಾದರ್ಗೆ ಮಾಧುಸ್ವಾಮಿ ಸಲಹೆ ನೀಡಿದ್ದಾರೆ.
ನಿಲುವಳಿ ಪ್ರಸ್ತಾಪ ತಿರಸ್ಕಾರ ಮಾಡಿದ್ದೇನೆ, ಈ ವಿಚಾರ ಚರ್ಚೆ ಮಾಡಬೇಕಿದ್ದರೆ ಬೇರೆ ರೂಪದಲ್ಲಿ ತನ್ನಿ ಎಂದು ಸ್ಪೀಕರ್ ನಿರ್ಧಾರ ತಿಳಿಸಿದ್ದಾರೆ. ಯಾವ ರೂಪದಲ್ಲಿ ಅವಕಾಶ ಎಂದು ನೀವೇ ಪೀಠದಿಂದ ಹೇಳಿದರೆ ಪೀಠದ ಗೌರವ ಹೆಚ್ಚುತ್ತದೆ ಎಂದು ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಹೇಳಿದ್ದಾರೆ. ನಿಯಮ 69 ರಡಿ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಸ್ಪೀಕರ್ ಹೇಳಿದ್ದಾರೆ. ನಿಯಮ 69ರ ಅಡಿ ಚರ್ಚೆ ನಡೆಯಲಿ, ಸರ್ಕಾರ ಚರ್ಚೆಗೆ ಸಿದ್ಧ ಇದೆ ಎಂದು ಸ್ಪೀಕರ್ ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಹೇಗೆ ನಿಭಾಯಿಸಿದ್ದೇವೆ ಅಂತಾ ಗೊತ್ತಿದೆ. ಹಿಂದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗಿತ್ತು ಅಂತ ಕೂಡಾ ಗೊತ್ತಿದೆ ಎಂದು ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ಕೂಡ ಸದನದಲ್ಲಿ ಚರ್ಚೆಗೆ ಅವಕಾಶ ಕೇಳಿದ್ದಾರೆ. ಶಾಲಾ ಕಾಲೇಜು, ಕಾನೂನು ಸುವ್ಯವಸ್ಥೆ ಬಗ್ಗೆ ಜೆಡಿಎಸ್ ಪಕ್ಷ ವಿವರವಾಗಿ ನಿಲುವಳಿ ಸೂಚನೆ ನೀಡಿದೆ. ಬಳಿಕ ಹೆಚ್.ಡಿ. ಕುಮಾರಸ್ವಾಮಿ ಸದನದಲ್ಲಿ ಚರ್ಚೆಗೆ ಅವಕಾಶ ಕೋರಿದ್ದಾರೆ.
ಇದನ್ನೂ ಓದಿ: ಬಜೆಟ್ ಮೇಲಿನ ಚರ್ಚೆಗೆ ಬೊಮ್ಮಾಯಿ ಉತ್ತರ: ಕಿರು ಉದ್ಯಮಿಗಳಿಗೆ ಸಹಾಯಧನ, ಬೆಂಗಳೂರು ಅಭಿವೃದ್ಧಿಗೆ 6000 ಕೋಟಿ
ಇದನ್ನೂ ಓದಿ: Hijab Verdict: ಹೈಕೋರ್ಟ್ ಆದೇಶ ಎಲ್ಲರೂ ಪಾಲಿಸಬೇಕು: ಸಿಎಂ ಬಸವರಾಜ ಬೊಮ್ಮಾಯಿ