ಕೊರೊನಾ ಬಿಕ್ಕಟ್ಟು ಕಾಡಿದ್ದು ನಿಜ, ಆರ್ಥಿಕ ಶಿಸ್ತು ಮೀರಿಲ್ಲ, ಸಾಲ ಅನಿವಾರ್ಯ: ಬಜೆಟ್ ಸಮರ್ಥಿಸಿಕೊಂಡ ಬೊಮ್ಮಾಯಿ
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬಜೆಟ್‌ಗೆ ಹೆಚ್ಚು ಅನುಕೂಲವಿತ್ತು. ಕೇಂದ್ರದಿಂದ ಬರುವಷ್ಟು ಅನುದಾನವೂ ಬಂತು. ತೆರಿಗೆ ಸಂಗ್ರಹದ ಗುರಿಯನ್ನೂ ತಲುಪಿದ್ದೇವೆ. ಹೀಗಾಗಿ ಆರ್ಥಿಕ ಹಿನ್ನಡೆಯಿಂದ ತಪ್ಪಿಸಿಕೊಂಡಿದ್ದೇವೆ ಎಂದು ಹೇಳಿದರು.
ಬೆಂಗಳೂರು: ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai), ರಾಜ್ಯದಲ್ಲಿ 50 ಅಂಬೇಡ್ಕರ್ ವಸತಿ ನಿಲಯಗಳನ್ನು ನಿರ್ಮಿಸಲಾಗುವುದು. ಧಾರವಾಡ, ಮೈಸೂರು, ಕಲಬುರಗಿ, ಮಂಗಳೂರಿನಲ್ಲಿ ಹೊಸ ವಸತಿ ನಿಲಯಗಳು ಕಾರ್ಯಾರಂಭ ಮಾಡಲಿವೆ. ನೆರೆಯ ಜಿಲ್ಲೆಗಳ ವಿದ್ಯಾರ್ಥಿಗಳು ಓದಲು ಹಾಸ್ಟೆಲ್ಗಳಲ್ಲಿ ಅನುಕೂಲ ಕಲ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ನಾಲ್ಕು ಜಿಲ್ಲೆಗಳಲ್ಲಿ ವಸತಿ ಸಮುಚ್ಚಯ ನಿರ್ಮಿಸುತ್ತೇವೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ನಮ್ಮ ಸರ್ಕಾರ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ರಾಜ್ಯ ಮುಂದಿದೆ. ಪ್ರತಿಷ್ಠಿತ ಸಂಸ್ಥೆ ಸೇರಬೇಕೆಂದು ಐಐಟಿ ಪರೀಕ್ಷೆ ಬರೆಯುತ್ತಾರೆ. 100 ಸೀಟ್ ಇದ್ದರೆ 2-3 ವಿದ್ಯಾರ್ಥಿಗಳು ಸೀಟ್ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಎನ್ಐಟಿ, ಐಐಟಿ ಮಟ್ಟದ ಕಾಲೇಜುಗಳನ್ನು ಕಟ್ಟಲು ನಾವೆಲ್ಲರೂ ಮುಂದಾಗಬೇಕಿದೆ. ಕರ್ನಾಟದಲ್ಲಿರುವ 6 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಮೇಲ್ದರ್ಜೆಗೇರಿಸುತ್ತೇವೆ. ಅದು ಐಐಟಿ ಆಗಿದ್ದರೆ ನಮ್ಮದು ಕೆಐಟಿ. ಇನ್ನು ಐದೇ ವರ್ಷದಲ್ಲಿ ಐಐಟಿ ಗುಣಮಟ್ಟದ ಶಿಕ್ಷಣ ಕರ್ನಾಟಕದಲ್ಲಿ ಲಭ್ಯವಾಗಲಿದೆ ಎಂದರು.
ವಿಶ್ವವಿದ್ಯಾಲಯ ಅಂದ್ರೆ ದೊಡ್ಡ ಜಿಲ್ಲೆಗೆ ಒಂದು ಇದ್ದರೆ ಸಾಕು ಎನ್ನುವ ಭಾವನೆ ಇತ್ತು. ಇಂದು ಜನಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹಾಗಾಗಿ 7 ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸುತ್ತೇವೆ. ಯಾವ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯ ಇಲ್ಲವೋ ಅಲ್ಲಿ ವಿವಿಗಳನ್ನು ಆರಂಭಿಸಲು ಪ್ರಯೋಗ ನಡೆಸುತ್ತೇವೆ ಎಂದು ಉತ್ತರಿಸಿದರು.
ಕೊವಿಡ್‌ನಿಂದಾಗಿ ಕಳೆದ ಎರಡು ವರ್ಷಗಳಿಂದ ರಾಜ್ಯದ ಆರ್ಥಿಕ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿ ಆಗಲಿಲ್ಲ. ನಮ್ಮ ಪಾಲಿನ ಜಿಎಸ್‌ಟಿ ಸಹ ನಿಂತು ಹೋಗುವ ಆತಂಕವಿದೆ. ಹೀಗಾಗಿ ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು ಗಮನ ನೀಡಿದೆವು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬಜೆಟ್‌ಗೆ ಹೆಚ್ಚು ಅನುಕೂಲವಿತ್ತು. ಕೇಂದ್ರದಿಂದ ಬರುವಷ್ಟು ಅನುದಾನವೂ ಬಂತು. ತೆರಿಗೆ ಸಂಗ್ರಹದ ಗುರಿಯನ್ನೂ ತಲುಪಿದ್ದೇವೆ. ಹೀಗಾಗಿ ಆರ್ಥಿಕ ಹಿನ್ನಡೆಯಿಂದ ತಪ್ಪಿಸಿಕೊಂಡಿದ್ದೇವೆ ಎಂದು ಬಜೆಟ್ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಉತ್ತರಿಸಿದರು.
ಕರ್ನಾಟ ಸರ್ಕಾರವು ಆರ್ಥಿಕ ಶಿಸ್ತು ಕಾಪಾಡಿಕೊಂಡಿದ್ದರಿಂದ ಆರ್ಥಿಕ ಹಿನ್ನಡೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು. ಕೇಂದ್ರದಿಂದ ಬರಬೇಕಿದ್ದ ಅನುದಾನ ಬರುವುದರೊಂದಿಗೆ ತೆರಿಗೆ ಸಂಗ್ರಹದ ಗುರಿಯನ್ನೂ ತಲುಪಿದ್ದೇವೆ. ನಮ್ಮ ರಾಜ್ಯದಲ್ಲಿಯೇ ನಮ್ಮ ಮಕ್ಕಳಿಗೆ ಉದ್ಯೋಗ ಸಿಕ್ಕರೆ ನಮ್ಮ ಹಣ ಇಲ್ಲೇ ಉಳಿಯುತ್ತದೆ. ರಾಜ್ಯದ ಜಿಡಿಪಿ ಸಹ ಸುಧಾರಿಸುತ್ತದೆ. ಇದನ್ನು ಗಮನದಲ್ಲಿರಿಸಿಕೊಂಡೇ ಹೊಸ ಕಾರ್ಯಯೋಜನೆ ರೂಪಿಸುತ್ತಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ಬಜೆಟ್ ಮೇಲಿನ ಚರ್ಚೆಗೆ ಬೊಮ್ಮಾಯಿ ಉತ್ತರ: ಕಿರು ಉದ್ಯಮಿಗಳಿಗೆ ಸಹಾಯಧನ, ಬೆಂಗಳೂರು ಅಭಿವೃದ್ಧಿಗೆ 6000 ಕೋಟಿ
ಇದನ್ನೂ ಓದಿ: Hijab Verdict: ಹೈಕೋರ್ಟ್ ಆದೇಶ ಎಲ್ಲರೂ ಪಾಲಿಸಬೇಕು: ಸಿಎಂ ಬಸವರಾಜ ಬೊಮ್ಮಾಯಿ