ಕೆಎಸ್​ಆರ್​ಟಿಸಿಗೆ ಯುಪಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಭೇಟಿ, ಕರ್ನಾಟಕದ ಬಸ್​ ವ್ಯವಸ್ಥೆಗೆ ಫಿದಾ

| Updated By: ರಮೇಶ್ ಬಿ. ಜವಳಗೇರಾ

Updated on: May 24, 2024 | 10:20 PM

ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ತಂಡವು ಕೆಎಸ್​ಆರ್​ಟಿಸಿಗೆ ಭೇಟಿ ನೀಡಿದ್ದು, ನಮ್ಮಲ್ಲಿ ಅನುಷ್ಠಾನಗೊಳಿಸಿರುವ ಉಪಕ್ರಮಗಳ ಬಗ್ಗೆ ಅಧ್ಯಯನ ನಡೆಸಿದರು. ಈ ವೇಳೆ ಕರ್ನಾಟಕದ ವಿವಿಧ ಬಸ್​ಗಳ ವ್ಯವಸ್ಥೆ ಕಂಡು ಫಿದಾ ಆಗಿದ್ದಾರೆ.

ಕೆಎಸ್​ಆರ್​ಟಿಸಿಗೆ ಯುಪಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಭೇಟಿ, ಕರ್ನಾಟಕದ ಬಸ್​ ವ್ಯವಸ್ಥೆಗೆ ಫಿದಾ
Follow us on

ಬೆಂಗಳೂರು, (ಮೇ 24): ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ತಂಡವು ಕೆ.ಎಸ್.ಆರ್.ಟಿ.ಸಿ ಯಲ್ಲಿ ಅನುಷ್ಠಾನಗೊಳಿಸಿರುವ ಉಪಕ್ರಮಗಳ ಬಗ್ಗೆ ಅಧ್ಯಯನ ನಡೆಸಲು ಎರಡು ದಿನಗಳ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ನಿಲ್ದಾಣ ಹಾಗೂ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ನಿಯಂತ್ರಣ ಕೊಠಡಿಯ ಕಾರ್ಯ ನಿರ್ವಹಣೆ ಹಾಗೂ ಬಸ್ಸುಗಳ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿನ ಇ.ವಿ. ಪವರ್‌ ಚಾರ್ಜಿಂಗ್‌ ಕೇಂದ್ರವನ್ನು ಪರಿಶೀಲಿಸಿ, ವಿದ್ಯುತ್‌ ಚಾಲಿತ ವಾಹನಗಳ ಚಾರ್ಜಿಂಗ್ ಹಾಗೂ ನಿರ್ವಹಣೆ ಕುರಿತು ತಾಂತ್ರಿಕ ಮಾಹಿತಿಯನ್ನು ಪಡೆದರು.

ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ತಂಡಕ್ಕೆ ಕೇಂದ್ರ ಕಛೇರಿಯಲ್ಲಿ ಡಾ. ನಂದಿನಿದೇವಿ ಕೆ. ಭಾಆಸೇ., ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತೆ) ರವರು ಪ್ರಾತ್ಯಕ್ಷಿಕೆ ನೀಡಿ, ನಿಗಮದ ವಾಹನಗಳ ತಾಂತ್ರಿಕ ನಿರ್ವಹಣೆ ಮತ್ತು ಕಾರ್ಯಾಚರಣೆ, ಡ್ಯೂಟಿ ರೋಟಾ ವ್ಯವಸ್ಥೆ, ಮುಂಗಡ ಆಸನ ಕಾಯ್ದಿರಿಸುವಿಕೆ, ಕಾರ್ಮಿಕರ ಕಲ್ಯಾಣಕ್ಕಾಗಿ ಕೈಗೊಂಡಿರುವ ವಿನೂತನ ಕ್ರಮಗಳು, ಮಾಹಿತಿ ತಂತ್ರಜ್ಞಾನ ಉಪಕ್ರಮಗಳು, ಬಸ್ ನಿಲ್ದಾಣ/ ಘಟಕಗಳ ಕಾಮಗಾರಿ ಪದ್ಧತಿ, ಬಸ್ಸುಗಳ ಬ್ರ್ಯಾಂಡಿಂಗ್, ಬಸ್ಸುಗಳ ಪುನಶ್ವೇತನ ಕಾರ್ಯ, ಬಸ್ ನಿಲ್ದಾಣದ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು.

ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ಕ್ಕೆ ಭೇಟಿ ನೀಡಿದ ತಂಡವು ಐರಾವತ ಕ್ಲಬ್‌ ಕಾಸ್‌, ಅಂಬಾರಿ ಡ್ರೀಮ್‌ ಕ್ಲಾಸ್‌, ಪಲ್ಲಕ್ಕಿ, ಅಂಬಾರಿ ಉತ್ಸವ, ಫ್ಲೈ ಬಸ್‌ ಹಾಗೂ ಅಶ್ವಮೇಧ ವಾಹನಗಳ ಬ್ರ್ಯಾಂಡಿಗ್‌ ಕಾರ್ಯವನ್ನು ಬಹುವಾಗಿ ಮೆಚ್ಚಿದರು. ನಿಗಮದ ಎಲ್ಲಾ ಮಾದರಿಯ ವಾಹನಗಳನ್ನು ಹಾಗೂ ಕಾರ್ಗೋ ವಾಹನಗಳನ್ನು ಪರಿಶೀಲಿಸಿ ಸೂಕ್ತ ಮಾಹಿತಿಯನ್ನು ಪಡೆದರು. ನಿಗಮವು ಆಳವಡಿಸಿರುವ ಲೋಗೋ, ಟ್ಯಾಗ್‌ಲೈನ್‌ ಹಾಗೂ ಗ್ರಾಫಿಕ್ಸ್‌ಗಳ ಬಗ್ಗೆ ಅತ್ಯಂತ ಹರ್ಷ ವ್ಯಕ್ತಿಪಡಿಸಿ ನಿಗಮವು ಜಾರಿಗೊಳಿಸಿರುವ ಬ್ಯಾಂಡಿಂಗ್ ಪಕ್ರಿಯೆಗೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಪ್ರಣತ ಐಶ್ವರ್ಯ ಭಾಆಸೇ., ಹೆಚ್ಚುವರಿ ವ್ಯವಸ್ಥಾಪಕ ನಿರ್ದೇಶಕರು, ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಶ್ರೀ ರಾಜೀವ್‌ ಆನಂದ, ಮುಖ್ಯ ಪ್ರಧಾನ ವ್ಯವಸ್ಥಾಪಕರು (ತಾಂತ್ರಿಕ), ಶ್ರೀ ಕೇಶ್ರಿ ನಂದನ್‌ ಚೌದ್ರಿ, ಪ್ರಾದೇಶಿಕ ವ್ಯವಸ್ಥಾಪಕರು, ಘಜೀಯಾಬಾದ್, ಶ್ರೀ ಅನುರಾಗ್ ಯಾಧವ್‌, ವ್ಯವಸ್ಥಾಪಕರು, ಆಗ್ರ ಮತ್ತು ನಿಗಮದ ಶ್ರೀ ಎನ್.ಕೆ. ಬಸವರಾಜು, ಮುಖ್ಯ ತಾಂತ್ರಿಕ ಶಿಲ್ಪಿ, ಶ್ರೀ ಜೆ. ಅಂತೋಣಿ ಜಾರ್ಜ್‌, ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾ), ಶ್ರೀ ಲಕ್ಷಣ್‌, ವಿಭಾಗೀಯ ನಿಯಂತ್ರಣಾಧಿಕಾರಿ, ಬೆಂಗಳೂರು ಕೇಂದ್ರೀಯ ವಿಭಾಗ ಹಾಗೂ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ