ಬೆಂಗಳೂರು: ವಾಲ್ಮೀಕಿ ಸಮಾಜಕ್ಕೆ ಶೇಕಡಾ 7.5 ರಷ್ಟು ಮೀಸಲಾತಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ನಾಳೆಯಿಂದ (ಫೆಬ್ರವರಿ 10) ಧರಣಿ ಸತ್ಯಾಗ್ರಹ ನಡೆಯಲಿದೆ. ಈ ಬಗ್ಗೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿಶ್ರೀ ಬುಧವಾರ ಹೇಳಿಕೆ ನೀಡಿದ್ದಾರೆ. ಈ ಮೊದಲು, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಮೀಸಲಾತಿ ಕಲ್ಪಿಸುವುದಾಗಿ ಭರವಸೆ ನೀಡಲಾಗಿತ್ತು. ನ್ಯಾ. ನಾಗಮೋಹನ್ ದಾಸ್ ವರದಿ ಬಳಿಕ ಮೀಸಲಾತಿ ಭರವಸೆ ನೀಡಲಾಗಿತ್ತು.
ಶೇಕಡಾ 7.5 ರಷ್ಟು ಮೀಸಲಾತಿ ನೀಡುವುದಾಗಿ ಈ ಹಿಂದೆ ಭರವಸೆ ನೀಡಿದ್ದರು. ಕರ್ನಾಟಕ ರಾಜ್ಯ ಸರ್ಕಾರಕ್ಕೆ ನ್ಯಾ.ನಾಗಮೋಹನ್ ದಾಸ್ ವರದಿ ಸಲ್ಲಿಸಿದ ಬಳಿಕ ಹೀಗೆ ಹೇಳಲಾಗಿತ್ತು. ಆದರೆ ಸರ್ಕಾರ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ನಮ್ಮ ಸಮಾಜದವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸರ್ಕಾರದ ನಡೆಯಿಂದ ಬೇಸರವಾಗಿ ಧರಣಿ ಸತ್ಯಾಗ್ರಹ ಕೈಗೊಳ್ಳುತ್ತೇವೆ. ಮೀಸಲಾತಿ ಸಿಗುವ ತನಕ ಅಹೋರಾತ್ರಿ ಹೋರಾಟ ನಡೆಸ್ತೇವೆ. ಶೇ. 7.5ರಷ್ಟು ಮೀಸಲಾತಿ ಸಿಗುವವರೆಗೆ ಹೋರಾಟ ಕೈಬಿಡಲ್ಲ ಎಂದು ರಾಜ್ಯ ಸರ್ಕಾರಕ್ಕೆ ಪ್ರಸನ್ನಾನಂದಪುರಿ ಸ್ವಾಮೀಜಿ ನೇರ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಕೊಡಿಸುವುದಾಗಿ ಹೇಳಿದ್ದೆ; ಕೊಟ್ಟ ಮಾತು ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ: ಶ್ರೀರಾಮುಲು
ವಾಲ್ಮೀಕಿ ಸಮುದಾಯಕ್ಕೆ ಶೇಕಡಾ 7.5ರಷ್ಟು ಮೀಸಲಾತಿಗೆ ಬೇಡಿಕೆ ಇದೆ. ನಮ್ಮ ಸರ್ಕಾರ ಬಂದರೆ ಮೀಸಲಾತಿ ಕೊಡುವುದಾಗಿ ಹೇಳಿಕೆ ನೀಡಿದ್ದೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಕೊಡಿಸುವುದಾಗಿ ಹೇಳಿದ್ದೆ. ಯಾವುದೇ ನಿರ್ಧಾರ ಕಾನೂನಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಬಾಗಲಕೋಟೆಯಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಈ ಮೊದಲು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ‘ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕೊಡುವುದಾಗಿ ಹೇಳಿದ್ದೆ; ಮಾತು ಉಳಿಸಿಕೊಳ್ಳುತ್ತೇವೆ’