
ಬೆಂಗಳೂರು, ಜುಲೈ 27: ಮೊಬೈಲ್ ಆ್ಯಪ್‌ಗಳ ಮೂಲಕ ಆಟೋ ಹಾಗೂ ಕ್ಯಾಬ್‌ಗಳನ್ನು ಕಾಯ್ದಿರಿಸುವ ಸಾರ್ವಜನಿಕರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮಹತ್ವದ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಆ್ಯಪ್‌ನಲ್ಲಿ ತೋರಿಸಲಾದ ವಾಹನದ ನೋಂದಣಿ ಸಂಖ್ಯೆ (Vehicle Registration Number) ಹಾಗೂ ಚಾಲಕನ ವಿವರಗಳು, ನಿಮ್ಮ ಬಳಿಗೆ ಬರುವ ವಾಹನಕ್ಕೆ ಹೊಂದಾಣಿಕೆಯಾಗದಿದ್ದರೆ ತಕ್ಷಣವೇ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ್ದಾರೆ.ಮಾರ್ಗಸೂಚಿಗಳ ಉಲ್ಲಂಘನೆ ಹಾಗೂ ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಓಲಾ, ಉಬರ್, ರ್‍ಯಾಪಿಡೋ ಹಾಗೂ ನಮ್ಮ ಯಾತ್ರೆಯಂತಹ ರೈಡ್ ಆ್ಯಪ್‌ಗಳಲ್ಲಿ ಆಟೋ ಅಥವಾ ಟ್ಯಾಕ್ಸಿ ಬುಕ್ ಮಾಡಿದಾಗ, ಆ್ಯಪ್‌ನಲ್ಲಿ ಕಾಣಿಸುವ ನೋಂದಣಿ ಸಂಖ್ಯೆಗಿಂತ ಸಂಪೂರ್ಣ ಭಿನ್ನವಾದ ವಾಹನಗಳು ಪ್ರಯಾಣಿಕರನ್ನು ಕರೆದೊಯ್ಯಲು ಬರುತ್ತಿರುವ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಹಲವು ನಗರವಾಸಿಗಳು ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಹತ್ತರಲ್ಲಿ ಏಳು ಬಾರಿ ಇಂತಹ ವ್ಯತ್ಯಾಸಗಳು ಕಂಡುಬರುತ್ತವೆ ಎಂದು ಆರೋಪಿಸಿದ್ದಾರೆ. “ಒಂದು ಸಂಖ್ಯೆಯ ಆಟೋ ಬುಕ್ ಮಾಡಿದರೆ, ಮತ್ತೊಂದು ಸಂಖ್ಯೆಯ ಆಟೋ ಬರುತ್ತದೆ. ಚಾಲಕನನ್ನು ಕೇಳಿದರೆ ತಾಂತ್ರಿಕ ಕಾರಣ ಅಥವಾ ಸಾಲದ ನೆಪ ಹೇಳುತ್ತಾರೆ” ಎಂದು ಸಾರ್ವಜನಿಕರು ಆತಂಕ ತೋಡಿಕೊಂಡಿದ್ದಾರೆ.
ಈ ವಿಷಯದ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರು, “ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಆ್ಯಪ್‌ನಲ್ಲಿರುವ ವಿವರಕ್ಕೂ, ನಿಜವಾಗಿ ಬರುವ ವಾಹನಕ್ಕೂ ವ್ಯತ್ಯಾಸವಿದ್ದರೆ ಯಾವುದೇ ಕಾರಣಕ್ಕೂ ಅಂತಹ ವಾಹನಗಳನ್ನು ಹತ್ತಬೇಡಿ” ಎಂದು ಸಾರ್ವಜನಿಕರಿಗೆ ವಿನಂತಿಸಿದ್ದಾರೆ.
ಯಾವುದೇ ಅನಾಹುತ, ಅಪರಾಧ ಅಥವಾ ಅಪಘಾತ ಸಂಭವಿಸಿದಾಗ ಆ್ಯಪ್‌ನಲ್ಲಿರುವ ದಾಖಲೆ ಹಾಗೂ ನಿಜವಾದ ವಾಹನ ಬೇರೆಯಾಗಿದ್ದರೆ ಜವಾಬ್ದಾರಿ ನಿಗದಿಪಡಿಸುವುದು ಮತ್ತು ತನಿಖೆ ನಡೆಸುವುದು ಕಷ್ಟಕರವಾಗುತ್ತದೆ. ಹೀಗಾಗಿ, ಇಂತಹ ವಾಹನಗಳನ್ನು ತಕ್ಷಣವೇ ತಿರಸ್ಕರಿಸಿ, 112 ತುರ್ತು ಸಹಾಯವಾಣಿ ಅಥವಾ ಹತ್ತಿರದ ಸಂಚಾರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
ಇದನ್ನೂ ಓದಿ ವಿವಾಹ ನೋಂದಣಿಗೆ ‘ಆಧಾರ್’ ಒಂದೇ ವಯಸ್ಸಿನ ಪುರಾವೆಯಲ್ಲ ಎಂದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ!
ಚಾಲಕರು ತಮ್ಮ ಖಾತೆಗಳನ್ನು ಇತರರಿಗೆ ಬಳಕೆಗೆ ನೀಡುವುದು, ನಕಲಿ ದಾಖಲೆ ಬಳಸುವುದು ಅಥವಾ ನೋಂದಾಯಿತವಲ್ಲದ ವಾಹನಗಳನ್ನು ಚಾಲನೆ ಮಾಡುವುದು ಕಾನೂನುಬಾಹಿರವಾಗಿದೆ. ಇಂತಹ ಚಟುವಟಿಕೆಗಳಲ್ಲಿ ತೊಡಗುವ ಚಾಲಕರ ವಿರುದ್ಧ ಹಾಗೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದ ಆ್ಯಪ್ ಆಧಾರಿತ ಸಂಸ್ಥೆಗಳ (Aggregators) ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಿಕೊಳ್ಳುವ ವಾಹನಗಳು ಮತ್ತು ಚಾಲಕರ ಹಿನ್ನೆಲೆಯನ್ನು ಕಾಲಕಾಲಕ್ಕೆ ಸರಿಯಾಗಿ ಪರಿಶೀಲಿಸುವುದು ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ