ವಿಧಾನ ಪರಿಷತ್: ಅಸಮರ್ಪಕ ಮೌಲ್ಯಮಾಪನದಿಂದ ವಿದ್ಯಾರ್ಥಿಗಳಿಗೆ ತೊಂದರೆ, ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವ್ಯವಸ್ಥೆ

| Updated By: ganapathi bhat

Updated on: Mar 14, 2022 | 12:18 PM

ಉಕ್ರೇನ್‌ನಿಂದ ಭಾರತಕ್ಕೆ ಮೆಡಿಕಲ್ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗುವುದು. ಮೆಡಿಕಲ್ ಶುಲ್ಕ ಕಡಿಮೆ ಮಾಡುವ ಬಗ್ಗೆ ಚರ್ಚೆಯಾಗ್ತಿದೆ ಎಂದು ವಿಧಾನಪರಿಷತ್‌ನಲ್ಲಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ವಿಧಾನ ಪರಿಷತ್: ಅಸಮರ್ಪಕ ಮೌಲ್ಯಮಾಪನದಿಂದ ವಿದ್ಯಾರ್ಥಿಗಳಿಗೆ ತೊಂದರೆ, ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವ್ಯವಸ್ಥೆ
ಡಾ.ಕೆ. ಸುಧಾಕರ್
Follow us on

ಬೆಂಗಳೂರು: ಅಸಮರ್ಪಕ ಮೌಲ್ಯಮಾಪನದಿಂದ ತೊಂದರೆಯಾಗ್ತಿದೆ. ಇದು SSLC ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಪರಿಷತ್​ನಲ್ಲಿ ಬಿಜೆಪಿ ಎಂಎಲ್​ಸಿ ರವಿಕುಮಾರ್ ಹೇಳಿಕೆ ನೀಡಿದ್ದಾರೆ. ಎಸ್​ಎಸ್​ಎಲ್​ಸಿ (SSLC) ಮೌಲ್ಯಮಾಪನ ಬಗ್ಗೆ ಪರಿಷತ್​​ನಲ್ಲಿ ಪ್ರಸ್ತಾಪ ಮಾಡಲಾಗಿದೆ. 2020 ರ ಜುಲೈ, ಸೆಪ್ಟೆಂಬರ್​ನಲ್ಲಿ ಅಸಡ್ಡೆ ಮೌಲ್ಯಮಾಪನ, ತಪ್ಪಾಗಿ ಮೌಲ್ಯಮಾಪನ ಮಾಡುವವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ? ಶಿಕ್ಷಕರ ಮೇಲೆ ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ? ಎಂದು ರವಿಕುಮಾರ್ ಕೇಳಿದ್ದಾರೆ. ಎಂಎಲ್​ಸಿ ರವಿಕುಮಾರ್​ಗೆ ಶಿಕ್ಷಣ ಸಚಿವ ನಾಗೇಶ್ ಉತ್ತರ ನೀಡಿದ್ದಾರೆ.

ಕೊವಿಡ್ ಸಂದರ್ಭದಲ್ಲಿ ಮೌಲ್ಯಮಾಪನ ವ್ಯತ್ಯಾಸವಾಗಿದೆ. 4,317 ಶಿಕ್ಷಕರಿಗೆ ₹51.26 ಲಕ್ಷ ದಂಡ ವಿಧಿಸಲಾಗಿದೆ. ತಪ್ಪು ಮಾಡಿದ ಶಿಕ್ಷಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ. ಹೆಚ್ಚು ಅಂಕ ವ್ಯತ್ಯಾಸ ಮಾಡಿದವರನ್ನ ಕಪ್ಪು ಪಟ್ಟಿಗೆ ಸೇರಿಸಿ, ಶಿಕ್ಷಕರ ಒಂದು ತಿಂಗಳ ಸಂಬಳ ನೀಡದಂತೆ MLC ಮನವಿ ಮಾಡಿದ್ದಾರೆ. ಶಿಕ್ಷಣ ಸಚಿವರಿಗೆ ಎಂ​ಎಲ್​ಸಿ ರವಿಕುಮಾರ್ ಮನವಿ ಮಾಡಿದ್ದಾರೆ.

ಉಕ್ರೇನ್​ನಿಂದ ಮರಳಿ ಬಂದ ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗುವುದು

ಉಕ್ರೇನ್‌ನಲ್ಲಿ ಕನ್ನಡಿಗ ನವೀನ್ ಸಾವು ದುರದೃಷ್ಟಕರ. ಉಕ್ರೇನ್‌ನಲ್ಲಿ 22 ಸಾವಿರ ವಿದ್ಯಾರ್ಥಿಗಳು ಸಿಲುಕಿದ್ದರು. ಎಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ಇದಕ್ಕಾಗಿ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಬೇಕು. ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಪ್ರಯತ್ನ ಮಾಡಲಾಗಿದೆ ಎಂದು ವಿಧಾನಪರಿಷತ್‌ನಲ್ಲಿ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಲ್ಲಿ ನಿರಂತರ ಸಂಪರ್ಕದಲ್ಲಿದ್ದರು. ಅನೇಕ ದೇಶಗಳು ಇಂತಹ ಪ್ರಯತ್ನ ಮಾಡಿಯೇ ಇಲ್ಲ. ನೆರೆಯ ದೇಶದವರು ಭಾರತದ ಬಾವುಟ ಹಿಡಿದಿದ್ದರು. ಭಾರತದ ಬಾವುಟ ಹಿಡಿದು ಉಕ್ರೇನ್‌ನಿಂದ ಹೊರಬಂದರು. ಉಕ್ರೇನ್‌ನಿಂದ ಭಾರತಕ್ಕೆ ಮೆಡಿಕಲ್ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗುವುದು. ಮೆಡಿಕಲ್ ಶುಲ್ಕ ಕಡಿಮೆ ಮಾಡುವ ಬಗ್ಗೆ ಚರ್ಚೆಯಾಗ್ತಿದೆ ಎಂದು ವಿಧಾನಪರಿಷತ್‌ನಲ್ಲಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

2007ರಲ್ಲೇ ರಾಜ್ಯ ಸರ್ಕಾರದಿಂದ ಆದೇಶವಾಗಿದ್ದರೂ ರಾಜೀವ್ ಗಾಂಧಿ ಮೆಡಿಕಲ್ ವಿವಿಗೆ ಕೋರ್ಟ್ ವ್ಯಾಜ್ಯ ಅಡ್ಡಿಯಾಗಿದೆ. ಎರಡು ಸುತ್ತು ಸಿಎಂ ಜೊತೆ ಸಭೆ ಕೂಡ ಆಗಿದೆ. ವ್ಯಾಜ್ಯ ಇರುವ ಸ್ಥಳ ಬಿಟ್ಟು ಬೇರೆ ಕಡೆ ಕಾಮಗಾರಿ ಮುಂದುವರಿಸುವುದಕ್ಕೆ ಸೂಚನೆ ನೀಡಿದ್ದೇವೆ. ಡಿಪಿಆರ್ ಮಾಡುವುದಕ್ಕೆ ಸೂಚನೆ ನೀಡಲಾಗಿದೆ. 3 ತಿಂಗಳೊಳಗೆ ಶಂಕು ಸ್ಥಾಪನೆ ಮಾಡುತ್ತೇವೆ ಎಂದು ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಗಂಗೂಬಾಯಿ ಹಾನಗಲ್ ಸಂಗೀತ ವಿವಿ ಸಿಬ್ಬಂದಿಗೆ ಸಂಬಳ ನೀಡುತ್ತಿಲ್ಲ: ಶ್ರೀಕಂಠೇಗೌಡ ಪ್ರಶ್ನೆ

ಗಂಗೂಬಾಯಿ ಹಾನಗಲ್ ಸಂಗೀತ ವಿವಿ ಸಿಬ್ಬಂದಿಗೆ ಸಂಬಳ ನೀಡುತ್ತಿಲ್ಲ ಎಂದು ಶ್ರೀಕಂಠೇಗೌಡ ಪ್ರಶ್ನೆ ಮಾಡಿದ್ದಾರೆ. 10 ವರ್ಷದಿಂದ ಯುನಿವರ್ಸಿಟಿ ಇದ್ದರೂ 21 ದಿನಗಳಿಂದ ಸಿಬ್ಬಂದಿ ಹೊರಹಾಕಿದ್ದಾರೆ. ಯುನಿವರ್ಸಿಟಿ ಮಾಡಿ ಬಿಟ್ಟು ಹೆಸರಿಗೆ ಅವಮಾನ ಮಾಡ್ತಿದ್ದೀರಾ. ಇಲ್ಲಾ ಅಂದ್ರೆ ಬೀಗ ಹಾಕಿ. ಬೋಧಕೇತರ ಸಿಬ್ಬಂದಿ ಇಲ್ಲದೇ ಯುನಿವರ್ಸಿಟಿ ಹೇಗೆ ನಡೆಸ್ತೀರಿ? ಎಂದು ಕೇಳಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಉತ್ತರ ನೀಡಿದ್ದಾರೆ. ಹಣಕಾಸು ಇಲಾಖೆಯಿಂದ ಉತ್ತರ ಸ್ಪಷ್ಡವಾಗಿದೆ. ಸ್ಯಾಂಕ್ಷನ್ ಪೋಸ್ಟ್ ಇಲ್ಲದಿದ್ದರೆ ನೇಮಕಾತಿ ಮಾಡುವುದಕ್ಕೆ ಆಗುವುದಿಲ್ಲ. ಬೋಧಕೇತರ ಸಿಬ್ಬಂದಿ ನೇಮಕ ವೇಳೆ ರೋಸ್ಟರ್ ಪದ್ದತಿ ನಿಯಮ ಅನುಸರಿಸಿಲ್ಲ. ವಿದ್ಯಾರ್ಥಿಗಳು ಇರುವುದೇ 120 ಮಂದಿ. ಒಂದು ಯುನಿವರ್ಸಿಟಿಗೆ ಬೇಕಾದಷ್ಟು ಸಿಬ್ಬಂದಿಗೂ ಅತ್ಯಧಿಕ ನೇಮಕಾತಿ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗಿಂತ ಹೆಚ್ಚು ಸಿಬ್ಬಂದಿಗಳೇ ಇದ್ದಾರೆ. ಈಗ ಕೆಲಸದಿಂದ ಕೈ ಬಿಟ್ಟವರನ್ನು ಮುಂದುವರಿಸುವ ಬಗ್ಗೆ ಚರ್ಚೆ ಮಾಡ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರನ್ನು ರಿಪೇರಿ ಮಾಡಲು ವಿಶ್ವಸಂಸ್ಥೆ ಬಂದ್ರೂ ಆಗಲ್ಲ: ವಿಧಾನ ಪರಿಷತ್​ನಲ್ಲಿ ಕೆಎಸ್ ಈಶ್ವರಪ್ಪ ಉತ್ತರ

ಇದನ್ನೂ ಓದಿ: ಸೈಬರ್ ಕ್ರೈಂ ಇಂದ ಹಿರಿಯ ಅಧಿಕಾರಿಗಳೇ ಮೋಸಗೊಳಗಾಗಿದ್ದಾರೆ; ವಿಧಾನಪರಿಷತ್​​ನಲ್ಲಿ ಸೈಬರ್ ಕ್ರೈಂ ಬಗ್ಗೆ ಚರ್ಚೆ

Published On - 12:11 pm, Mon, 14 March 22