ಬೆಂಗಳೂರು: ನಮ್ಮ ಮೆಟ್ರೋ ಮತ್ತೊಂದು ಟಿಬಿಎಂ ಬ್ರೇಕ್ ಥ್ರೂ ಪಡೆದುಕೊಂಡಿದೆ. ‘ವಿಂದ್ಯಾ’ ಯಂತ್ರ ಸುರಂಗ ಕೊರೆದು ಯಶಸ್ವಿಯಾಗಿ ಹೊರಬಂದಿದೆ. ಕಳೆದ ತಿಂಗಳು ಹೊರಬಂದಿದ್ದ ಟಿಬಿಎಂ ‘ಊರ್ಜಾ’ ಯಂತ್ರ, ಸುರಂಗ ಕೊರೆಯಲು ಯಶಸ್ವಿಯಾಗಿತ್ತು. ಇಂದು (ಅಕ್ಟೋಬರ್ 13) 2ನೇ ಯಂತ್ರ ವಿಂದ್ಯಾ ಸುರಂಗ ಕೊರೆದು ಯಶಸ್ವಿಯಾಗಿ ಹೊರಬಂದಿದೆ. ಕಂಟೋನ್ಮೆಂಟ್ನಿಂದ ಶಿವಾಜಿನಗರದವರೆಗೆ ಸುರಂಗ ಮಾರ್ಗ ಕೊರೆಯಲಾಗಿದೆ. 855 ಮೀಟರ್ ಸುರಂಗ ಕೊರೆದು ವಿಂದ್ಯಾ ಯಂತ್ರ ಹೊರಬಂದಿದೆ.
ನಮ್ಮ ಮೆಟ್ರೋ (Namma Metro) ಯೋಜನೆಯ ಎರಡನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಲು ನೀಡಲಾಗಿದ್ದ 2025ರ ಗಡುವನ್ನು ಮಾರ್ಪಡಿಸಿ, 2024 ಕ್ಕೆ ನಿಗದಿ ಪಡಿಸುವಂತೆ ಹಾಗೂ ಇದಕ್ಕೆ ತಕ್ಕ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಮೊದಲು ಸೂಚನೆ ನೀಡಿದ್ದರು. ಇದು ಪೂರ್ಣಗೊಳ್ಳುತ್ತಿದ್ದಂತೆಯೇ ಮೂರನೇ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದರು.
ಸಿಎಂ ಸೆ.22ರಂದು ಮೆಟ್ರೋ 2ನೇ ಹಂತದ ಯೋಜನೆಯಡಿ ಕಂಟೋನ್ಮೆಂಟ್ನಿಂದ ಶಿವಾಜಿನಗರ ನಿಲ್ದಾಣದ ವರೆಗೆ ಸುರಂಗ ಮಾರ್ಗ ಕೊರೆದ ಟಿಬಿಎಂ ಊರ್ಜಾ ಯಂತ್ರವು ಹೊರಗೆ ಬರುವುದನ್ನು ವೀಕ್ಷಿಸಿದ ನಂತರ ಮಾತನಾಡಿದ್ದರು. ಎರಡನೇ ಹಂತ 2024ಕ್ಕೇ ಮುಗಿಸಲು ಯೋಜನೆ ರೂಪಿಸಿ, ಹೆಚ್ಚುವರಿ ಮಾನವ ಸಂಪನ್ಮೂಲ ಬಳಸಿಕೊಂಡು ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ಇನ್ನು 21 ಕಿ.ಮೀ. ಆಗಬೇಕಾಗಿದೆ. ಇದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ನಂತರ ಮೂರನೇ ಹಂತ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದರು.
ಮೆಟ್ರೋ ಕಾಮಗಾರಿಯನ್ನು ಹಲವು ಸವಾಲುಗಳ ನಡುವೆಯೂ ವೈಜ್ಞಾನಿಕವಾಗಿ, ಸುರಕ್ಷತೆಗೆ ಆದ್ಯತೆ ನೀಡಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮೊದಲ ಹಂತದಲ್ಲಿ ಹಲವು ಸವಾಲುಗಳು ಎದುರಾಗಿದ್ದವು. ಮೆಜೆಸ್ಟಿಕ್ ಬಳಿ ಟನೆಲ್ ಬೋರಿಂಗ್ ಮಷಿನ್ ಸಿಲುಕಿಕೊಂಡಿತ್ತು ಎಂದು ಅವರು ನೆನಪಿಸಿಕೊಂಡಿದ್ದರು.
ಇದನ್ನೂ ಓದಿ: ಮೆಟ್ರೋ ಕಾಮಗಾರಿ ನಡೆಯುತ್ತಿರುವ ಟ್ಯಾನರಿ ರಸ್ತೆಯಲ್ಲಿ 30 ಅಡಿ ಮಣ್ಣು ಕುಸಿತ, ಪರಿಹಾರ ಕೇಳಿದ ಜಾಗದ ಮಾಲೀಕ
ಇದನ್ನೂ ಓದಿ: ಮೆಟ್ರೋ 3ನೇ ಹಂತಕ್ಕೆ ಶೀಘ್ರ ಚಾಲನೆ: ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ
Published On - 10:10 pm, Wed, 13 October 21