ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘಕ್ಕೆ (vokkaligara sangha) ಮೀಸಲಿಟ್ಟ ಜಾಗವನ್ನು ಬಿಬಿಎಂಪಿಯಿಂದ (BBMP) ಒತ್ತುವರಿ ಯತ್ನಿಸಿದೆ ಎಂದು ಆರೋಪಿಸಿ ಒಕ್ಕಲಿಗರ ಸಂಘ ಬಿಬಿಎಂಪಿ ಅಧಿಕಾರಿಗಳ ವಿರುದ್ದ ಪ್ರತಿಭಟನೆ ಮಾಡುತ್ತಿದೆ. 2006 ರಲ್ಲಿ ಹೆಚ್. ಡಿ ಕುಮಾರಸ್ವಾಮಿಯವರು ಒಕ್ಕಲಿಗರ ಸಂಘಕ್ಕೆ ಬನಶಂಕರಿಯ ಮೂರನೇ ಹಂತದಲ್ಲಿರುವ ಭವಾನಿ ಬಡಾವಣೆಯಲ್ಲಿರುವ 22 ಕುಂಟೆ ಜಾಗವನ್ನು ಗುತ್ತಿಗೆ ಆಧಾರದಲ್ಲಿ ನೀಡಿದ್ದರು. ಈ ಜಾಗದಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಹಾಸ್ಟೆಲ್ ಕಟ್ಟುವ ಸಲುವಾಗಿ ಜಾಗವನ್ನ ಮೀಸಲಿಟ್ಟಿದ್ದವಿ. ಆದರೆ ಈಗ ರಾತ್ರೋ ರಾತ್ರಿ ಬಿಬಿಎಂಪಿ ಅಧಿಕಾರಿಗಳು ಬಂದು ಒತ್ತುವರಿ ಮಾಡಿಕೊಳ್ಳುವ ಯತ್ನ ಮಾಡಿದ್ದಾರೆ ಎಂದು ರಾಜ್ಯ ಒಕ್ಕಲಿಗರ ಸಂಘದ ಕಾರ್ಯದರ್ಶಿ ಕೋನಪ್ಪ ರೆಡ್ಡಿ ಹೇಳಿದ್ದಾರೆ.
ರಾಜ್ಯ ಸರ್ಕಾರ ನಮ್ಮ ಜಾಗದ ವಿಚಾರಕ್ಕೆ ಬರಬಾರದು. ಇದನ್ನು ಇಲ್ಲಿಗೆ ನಿಲ್ಲಿಸ ಬೇಕು. ಹೀಗೆ ಸರ್ಕಾರ ಜಾಗವನ್ನ ಕಬಳಿಸೋ ಕೆಲಸಕ್ಕೆ ಮುಂದಾದರೇ ಉಗ್ರ ಹೋರಾಟ ಮಾಡಬೇಕಾಗುತ್ತೆ. ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತೆ. ಇದು ಸಂಘಕ್ಕೆ ಸೇರಿದ ಜಾಗ. ಈ ಹಿಂದೆಯೂ ನಮ್ಮ ಶ್ರೀಗಂಧ ಕಾವಲು ಜಾಗವನ್ನು ಕಬಳಿಸಲು ಸರ್ಕಾರ ಮುಂದಾಗಿತ್ತು. ಆಗ ನಾವೂ ಹೋರಾಟ ಮಾಡಿ ಬಿಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಈಗ ಈ ಜಾಗಕ್ಕೆ ಸರ್ಕಾರ ಕಣ್ಣು ಹಾಕಿದೆ. ಕೋರ್ಟ್ನಲ್ಲಿ ಕೇಸ್ ಹಾಕುತ್ತೇವೆ. ಸದ್ಯ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೋಲಿಸ್ ಠಾಣೆಗೆ ದೂರು ನೀಡಿದ್ದೇವೆ. ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕೋನಪ್ಪ ರೆಡ್ಡಿ ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:14 pm, Mon, 3 October 22