ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ವೋಟರ್ ಐಡಿ ಪರಿಷ್ಕರಣೆಯಲ್ಲಿನ ಅಕ್ರಮ (Bengaluru Voter list refinement Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿಯೊಂದು ಬಹಿರಂಗಗೊಂಡಿದೆ. ಚಿಲುಮೆ ಸಂಸ್ಥೆ ಸರ್ಕಾರಿ ಸಂಸ್ಥೆಗಳ ಬಿಎಲ್ಒ (BLO) ಗಳಿಗೂ ಹಣ ಪಾವತಿಸಿ, ಮತದಾರರ ಮಾಹಿತಿ ಸಂಗ್ರಹಿಸಿತ್ತು ಎಂಬ ಆರೋಪ ಕೇಳಿಬಂದಿದೆ. ಚಿಲುಮೆ ಸಂಸ್ಥೆಗೆ ಮತದಾರರಿಗೆ ಅರಿವು ಮೂಡಿಸಲು ಮಾತ್ರ ಅನುಮತಿ ನೀಡಲಾಗಿತ್ತು. ಈ ಕೆಲಸವನ್ನು ಉಚಿತವಾಗಿ ಮಾಡಿಕೊಡುವುದಾಗಿ ಒಪ್ಪಿಕೊಂಡಿತ್ತು.
ಆದರೆ ಇದೀಗ ಚಿಲುಮೆ ಸಂಸ್ಥೆ ಬಿಎಲ್ಒಗಳಿಗೆ ಹಣ ನೀಡಿ ಮಾಹಿತಿ ಸಂಗ್ರಹಿಸಿತ್ತು ಎಂಬ ಆರೋಪ ಕೇಳಿಬಂದಿದೆ. ಮತದಾರರ ಮಾಹಿತಿ ಸಂಗ್ರಹಣೆಗೆ 1 ವೋಟರ್ ಐಡಿಗೆ 25 ರೂ. ಹೊಸ ವೋಟರ್ ಐಡಿ ಮಾಹಿತಿ ನೀಡಿದರೆ 13 ರೂಪಾಯಿ ನಿಗದಿ ಮಾಡಲಾಗಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಸರ್ಕಾರದಿಂದ ಬಿಎಲ್ಒಗಳಿಗೆ ವಾರ್ಷಿಕ 6 ಸಾವಿರ ಗೌರವಧನ ನೀಡಲಾಗುತ್ತದೆ. ಹೀಗಾಗಿ ಇದರಿಂದ ಅಸಮಾಧಾನಗೊಂಡಿದ್ದರು. ಹಾಗೇ ಬಿಎಲ್ಒಗಳು ಫೀಲ್ಡ್ಗೆ ಬಾರದಂತೆ ಚಿಲುಮೆ ಸಂಸ್ಥೆ ಬಿಎಲ್ಒಗಳಿಗೆ ಸೂಚಿಸಿತ್ತು.
ಇಷ್ಟೇ ಅಲ್ಲದೇ ಚಿಲುಮೆ ಬಿಎಲ್ಒಗಳ ಯೂಸರ್ ನೇಮ್, ಪಾಸ್ವರ್ಡ್ ಪಡೆದಿತ್ತು. ಇದರಿಂದ ಮತದಾರರ ಐಡಿ ಡಿಲೀಟ್, ಹೊಸ ಮತದಾರರನ್ನು ಸೇರ್ಪಡೆ ಮಾಡುತ್ತಿತ್ತು. ಚಿಲುಮೆ ಸಂಸ್ಥೆ ಮತದಾರನ ಹೆಸರು, ವೋಟರ್ ಐಡಿ ನಂಬರ್, ಮನೆ ನಂಬರ್, ಬೂತ್ ನಂಬರ್ ಸೇರಿ ಎಲ್ಲಾ ಮಾಹಿತಿ ಸಂಗ್ರಹಿಸುತ್ತಿತ್ತು.
ಕೊನೆಗೂ ಸಮೀಕ್ಷಾ ಆ್ಯಪ್ ಓಪನ್ ಮಾಡಿದ ಟೆಕ್ನಿಕಲ್ ಟೀಂ
ಮತದಾರರ ಮಾಹಿತಿ ಸಂಗ್ರಹಿಸಲು, ಬಳಸಾಲಾಗಿದ್ದ ಡಿಜಿಟಲ್ ಸಮೀಕ್ಷಾ ಆ್ಯಪ್ನ್ನು ಸರ್ಕಾರಿ ಟೆಕ್ನಿಕಲ್ ಟೀಂ ಓಪನ್ ಮಾಡಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳು ಆ್ಯಪ್ ಸರ್ವರ್ ಡೌನ್ ಮಾಡಿದ್ದರು. ಸದ್ಯ ಆ್ಯಪ್ ಓಪನ್ ಆಗಿದ್ದು, ಆ್ಯಪ್ನಲ್ಲಿದ್ದ ಪ್ರತಿ ಅಂಶವನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಇನ್ನು ಆ್ಯಪ್ನಲ್ಲಿ ಹಲವು ಕ್ಷೇತ್ರಗಳ ಮತದಾರರ ಮಾಹಿತಿ ಇರುವುದು ಪತ್ತೆಯಾಗಿದೆ. ಸದ್ಯ ಪೊಲೀಸರು ಪ್ರಕರಣದ ರವಿಕುಮಾರ್ನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:34 am, Tue, 22 November 22