Milk Price: ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಗ್ರಾಹಕರಿಗೆ ಹೊರೆಯಾಗದಂತೆ ದರ ನಿಗದಿಪಡಿಸಿ ಕೆಎಂಎಫ್ಗೆ ಸಿಎಂ ಬೊಮ್ಮಾಯಿ ಸೂಚನೆ
ನಂದಿನಿ ಹಾಲಿನ ದರ 3 ರೂ. ಹೆಚ್ಚಳ ಮಾಡುವುದು ಬೇಡ. ಆದರೆ ರೈತರು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕೆಂದು ಕೆಎಂಎಫ್ಗೆ ಸೂಚಿಸಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು: ಕೆಎಂಎಫ್ನಿಂದ(KMF) ಹಾಲಿನ ದರ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿ ರೈತರಿಗೆ ಅನ್ಯಾಯವಾಗದಂತೆ, ಗ್ರಾಹಕರಿಗೆ ಹೊರೆಯಾಗದಂತೆ ಹಾಲಿನ ದರ ನಿಗದಿಗೆ ಸಿಎಂ ಬಸವರಾಜ ಬೊಮ್ಮಾಯಿ(basavaraj Bommai) ಸೂಚಿಸಿದ್ದಾರೆ. ಹಾಗೂ ಹೆಚ್ಚಳದ ಸಂಪೂರ್ಣ ದರವನ್ನ ರೈತರಿಗೆ ನೀಡಲು ಸಿಎಂ ಬೊಮ್ಮಾಯಿ ಕೆಎಂಎಫ್ಗೆ ತಿಳಿಸಿದ್ದಾರೆ.
ನಿನ್ನೆ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ CM ಬೊಮ್ಮಾಯಿ ಸಭೆ ನಡೆಸಿದ್ದು ಕೆಎಂಎಫ್ಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಸಭೆ ಬಳಿಕ ಮಾತನಾಡಿದ ಅವರು, ವಿವಿಧ ರಾಜ್ಯಗಳಲ್ಲಿರುವ ಹಾಲಿನ ದರ ಹಾಗೂ ಸಂಬಂಧಿಸಿದ ಸಂಪೂರ್ಣ ಮಾಹಿತಿ, ಕೆಎಂಎಫ್ ಸಂಸ್ಥೆಗೆ ತಗುಲುತ್ತಿರುವ ವೆಚ್ಚ, ಹಾಲಿನ ದರ ಏರಿಕೆಗೆ ಕಾರಣ, ಸಂಸ್ಥೆಯಲ್ಲಿ ಆಗುತ್ತಿರುವ ಸಮಸ್ಯೆ, ನಷ್ಟಗಳನ್ನು ತಡೆಗಟ್ಟಲು ಸಂಸ್ಥೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.
ಇದನ್ನೂ ಓದಿ: ಮತ್ತೆ ಹಾಲಿನ ದರ ಹೆಚ್ಚಳಕ್ಕೆ ಪ್ರಸ್ತಾಪ: ಈ ಬಗ್ಗೆ ಸಚಿವ ಸೋಮಶೇಖರ್ ಹೇಳಿದ್ದಿಷ್ಟು…!
ಗ್ರಾಹಕ ಹಾಗೂ ರೈತನಿಗೆ ಅನುಕೂಲವಾಗುವ ಸೂತ್ರವನ್ನು ಎರಡು ದಿನಗಳಲ್ಲಿ ರೂಪಿಸಿಕೊಂಡು, ಕೆಎಂಎಫ್ ನಿರ್ದೇಶಕರ ಮಂಡಳಿ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ತಿಳಿಸಲಾಗಿದೆ. 3 ರೂ. ದರ ಹೆಚ್ಚಳ ಮಾಡುವುದು ಬೇಡ. ಆದರೆ ರೈತರು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕೆಂದು ಕೆಎಂಎಫ್ಗೆ ಸೂಚಿಸಿದ್ದೇವೆ. ಕೆಎಂಎಫ್ನಲ್ಲಿ ಆಗುತ್ತಿರುವ ದುಂದು ವೆಚ್ಚ ಕಡಿವಾಣಕ್ಕೂ ಸಲಹೆ ನೀಡಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಕೆಎಂಎಫ್ ಕೂಡ ಸರ್ಕಾರದ ಒಂದು ಅಂಗವಾಗಿದೆ. ರೈತರಿಗೆ ಪ್ರೋತ್ಸಾಹ ಧನ, ಶಾಲಾ ಮಕ್ಕಳಿಗೆ ಹಾಲು ನೀಡಲಾಗುತ್ತಿದೆ. ಗ್ರಾಹಕರ ಹಾಗೂ ರೈತರ ಹಿತಚಿಂತನೆ ಮಾಡುವ ಕರ್ತವ್ಯ ಸರ್ಕಾರದ್ದಾಗಿದ್ದು, ಕೆಎಂಎಫ್ ಗೆ ಮಾರ್ಗದರ್ಶನ ನೀಡಲಾಗಿದೆ. ಹಾಲಿನ ದರ ಕಾಲಕಾಲಕ್ಕೆ ಬದಲಾವಣೆಯಾಗುತ್ತದೆ. ಈ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳೂ ಸ್ಪರ್ಧೆಯಲ್ಲಿವೆ. ಈ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕೆಂದು ಕೆಎಂಎಫ್ ಗೆ ಸೂಚಿಸಿರುವುದಾಗಿ ಸಿಎಂ ಹೇಳಿದರು.
Published On - 10:26 am, Tue, 22 November 22