ಬೆಂಗಳೂರು, ಮಾರ್ಚ್ 8: ಬೆಂಗಳೂರು (Bengaluru) ನಗರದಲ್ಲಿ ನೀರಿನ ಬಿಕ್ಕಟ್ಟು (Water Crisis) ತೀವ್ರಗೊಂಡಿರುವುದರಿಂದ ಕೆಲವು ಶಾಲೆಗಳು ಮತ್ತು ಕೋಚಿಂಗ್ ಸೆಂಟರ್ಗಳು ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿವೆ. ಇನ್ನು ಕೆಲವು ಶಾಲೆಗಳು ಆನ್ಲೈನ್ ತರಗತಿಯ ಮೊರೆ ಹೋಗಿವೆ. ಬೆಂಗಳೂರು ನೀರಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ ಮತ್ತು ಬೇಸಿಗೆ ಈಗಷ್ಟೇ ಆರಂಭವಾಗಿದ್ದು, ಮುಂದಿನ ದಿನಗಳ ಬಗ್ಗೆ ನಗರದ ನಿವಾಸಿಗಳು ತೀವ್ರ ಚಿಂತಿತರಾಗಿದ್ದಾರೆ.
ಬೆಂಗಳೂರಿನ ಕೆಲವು ಶಾಲೆಗಳು ಮತ್ತು ಕೋಚಿಂಗ್ ಸೆಂಟರ್‌ಗಳನ್ನು ಮುಚ್ಚಲಾಗಿದೆ. ‘ಇಂಡಿಯಾ ಟುಡೇ’ ವರದಿಯ ಪ್ರಕಾರ, ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಶಾಲೆಯನ್ನು ಮುಚ್ಚಲಾಗಿದೆ ಮತ್ತು ತರಗತಿಗಳನ್ನು ಆನ್‌ಲೈನ್ ಮೋಡ್‌ನಲ್ಲಿ ನಡೆಸಲಾಗುವುದು ಎಂದು ಶಾಲೆ ಘೋಷಿಸಿದೆ. ಅದೇ ರೀತಿ, ನಗರದ ವಿಜಯನಗರ ಪ್ರದೇಶದಲ್ಲಿರುವ ಕೋಚಿಂಗ್ ಸೆಂಟರ್ ಕೂಡ ‘ತುರ್ತು ಪರಿಸ್ಥಿತಿ’ಯ ಕಾರಣ ನೀಡಿ ಒಂದು ವಾರದವರೆಗೆ ಆನ್ಲೈನ್ ಮೂಲಕ ತರಗತಿಗಳಿಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದೆ.
ಬೆಂಗಳೂರಿನ ಬಾಬುಸಾಪಾಳ್ಯದಲ್ಲಿ ಮಾತನಾಡಿದ ಸ್ಥಳೀಯರೊಬ್ಬರು, ಕಳೆದ 6 ತಿಂಗಳಿಂದ ನಮ್ಮ ಪ್ರದೇಶದಲ್ಲಿ ನೀರಿನ ಕೊರತೆ ಇದೆ. ಶ್ರೀಮಂತರು ಟ್ಯಾಂಕರ್‌ನಲ್ಲಿ ನೀರು ಖರೀದಿಸಿದರೂ ನಮ್ಮಂತಹ ಬಡವರು ನೀರಿಗಾಗಿ ಪರದಾಡಬೇಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಕಾವೇರಿ ನೀರಿನ ಪೈಪ್‌ಲೈನ್ ಹಾಕಲಾಗಿದ್ದರೂ ಇನ್ನೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇಲ್ಲಿಗೆ ಕಾವೇರಿ ನೀರು ಬಂದರೆ ಇಲ್ಲಿನ ಜನರ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎನ್ನುತ್ತಿದ್ದಾರೆ ಸ್ಥಳೀಯರು.
ಈ ಮಧ್ಯೆ, ಬಿಜೆಪಿ ಸಂಸದ ನೀರಿನ ಬಿಕ್ಕಟ್ಟನ್ನು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಅವೈಜ್ಞಾನಿಕವಾಗಿ ನಿರ್ವಹಿಸುತ್ತಿದೆ ಎಂದು ಟೀಕಿಸಿದ್ದಾರೆ. ಜತೆಗೆ, ತ್ವರಿತ ಪರಿಹಾರಕ್ಕಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಒಂದಷ್ಟು ಸಲಹೆ ನೀಡಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.
Met with the Chairman of BWSSB & discussed the water crisis that is currently grappling the city of Bengaluru.
The Government, despite being aware of having to face this situation, failed to take up precautionary measures. As a result of this negligence, today, people of… pic.twitter.com/QPyLQu0o0u
— Tejasvi Surya (ಮೋದಿಯ ಪರಿವಾರ) (@Tejasvi_Surya) March 6, 2024
ಕೈಗಾರಿಕೆಗಳು ಮತ್ತು ನಿರ್ಮಾಣ ವಲಯದಂತಹ ಬೃಹತ್ ಬಳಕೆದಾರರಿಗೆ ಕುಡಿಯಲು ಯೋಗ್ಯವಲ್ಲದ ಬಳಕೆಗಾಗಿ ಸಂಸ್ಕರಿಸಿದ ನೀರನ್ನು ಒದಗಿಸಬೇಕು. ಗೆಚ್ಚು ಅಗತ್ಯ ಇರುವ ಸ್ಥಳಗಳಿಗೆ ಕುಡಿಯುವ ನೀರನ್ನು ಮರುಹಂಚಿಕೆ ಮಾಡಬೇಕು. ಹೊಸ ಬೋರ್‌ವೆಲ್‌ಗಳನ್ನು ಕೊರೆಯುವ ಸ್ಥಳಗಳ ಬಗ್ಗೆ ಭೂವಿಜ್ಞಾನಿಗಳನ್ನು ಸಂಪರ್ಕಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ತೇಜಸ್ವಿ ಸೂರ್ಯ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಟ್ಯಾಂಕರ್ ಕಳ್ಳಾಟಕ್ಕೆ ಬ್ರೇಕ್, ಕೊನೆಗೂ ಟ್ಯಾಂಕರ್ ನೀರಿಗೆ ದರ ಫಿಕ್ಸ್: ಇಲ್ಲಿದೆ ದರ ವಿವರ
ಅಸ್ತಿತ್ವದಲ್ಲಿರುವ ಒಪ್ಪಂದದ ನೀರಿನ ಟ್ಯಾಂಕರ್ ಪೂರೈಕೆಗೆ ಅಡ್ಡಿಪಡಿಸುವ ಬದಲು, ಅವುಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ನೀರಿನ ಸರಬರಾಜು ಮಾಡಬೇಕು. ಕಾವೇರಿ ಹಂತ-5 ಅನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಅದರ ಮೂಲಕ ಉದ್ದೇಶಿತ ಪ್ರದೇಶಗಳಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚಿಸಬಹುದು ಎಂದು ಸೂರ್ಯ ಸಲಹೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:19 am, Fri, 8 March 24