ಬೆಂಗಳೂರು, ಮಾ.03: ರಾಜ್ಯ ರಾಜಧಾನಿ ಬೆಂಗಳೂರಿನ ಮೂಲೆ ಮೂಲೆಯಲ್ಲೂ ಜಲದಾಹ ಹೆಚ್ಚಾಗುತ್ತಿದೆ. ಅದರಲ್ಲೂ ನಗರದ ಪ್ರತಿಷ್ಠಿತ ಏರಿಯಾಗಳಾದ ಬಸವನಗುಡಿ ವಿಧಾನಸಭಾಕ್ಷೇತ್ರಲ್ಲೂ(Basavanagudi Assembly Constituency) ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಶ್ರೀನಗರದಲ್ಲಿರುವ ರಾಘವೇಂದ್ರ ಬ್ಲಾಕ್, ಕಾಳಿದಾಸ ಬಡಾವಣೆ ಸುತ್ತಮುತ್ತ ನೀರಿಲ್ಲದೇ ಜನ ಹೈರಾಣಾಗಿದ್ದಾರೆ. ಕಾವೇರಿ ನೀರು ಯಾವಾಗಲೋ ಒಮ್ಮೆ ಬರುತ್ತಿದೆ. ಆದ್ರೆ, ಅದು ಕೂಡ ಸಾಕಾಗದೇ ಇರುವುದು ಜನರನ್ನ ಕಂಗಾಲಾಗುವಂತೆ ಮಾಡಿದೆ.
ಇತ್ತ ಏರಿಯಾದಲ್ಲಿದ್ದ ಆರ್.ಒ ಪ್ಲಾಂಟ್ ಕೂಡ ಬಂದ್ ಆಗಿದ್ದು, ದುಬಾರಿ ಹಣ ಕೊಟ್ಟು ಟ್ಯಾಂಕರ್ ನೀರನ್ನು ಜನ ಪಡೆಯುತ್ತಿದ್ದು, ನೀರಿಗಾಗಿ ದುಡ್ಡು ಸುರಿದು ಕಂಗಾಲಾಗಿದ್ದಾರೆ. ಇನ್ನು ಈ ಏರಿಯಾದಲ್ಲಿ ಯಾವುದೇ ಬೀದಿಗೆ ಎಂಟ್ರಿಕೊಟ್ಟರೂ ನೀರಿಲ್ಲದೇ ಜನರು ತಮ್ಮ ಮನೆಯನ್ನು ಖಾಲಿ ಮಾಡಿರುವುದರಿಂದ ಟು ಲೆಟ್ ಬೋರ್ಡ್ಗಳು ರಾರಾಜಿಸುತ್ತಿವೆ. ಇತ್ತ ನೀರಿಲ್ಲ ಎಂದು ಸ್ಥಳೀಯ ಶಾಸಕರ ಬಳಿ ಅಳಲು ತೋಡಿಕೊಂಡರೂ ಸ್ಪಂದನೆ ಸಿಗುತ್ತಿಲ್ಲ ಎಂದು ಜನರು ಗೋಗರೆಯುತ್ತಿದ್ದು, ನೀರಿಲ್ಲದೇ ಪರಿತಪಿಸುತ್ತಿದ್ದಾರೆ. ಅತ್ತ ಬರುವ ಅಲ್ಪಸ್ವಲ್ಪ ನೀರಿಗಾಗಿ ದಿನವಿಡೀ ಕಾದು ಕಾದು ಜನ ಸುಸ್ತಾಗಿದ್ದಾರೆ. ನೀರು ಕೊಡಿ ಎಂದು ಮನವಿ ಮಾಡುತ್ತಿದ್ದಾರೆ.
ಇನ್ನು ಈ ಭಾಗದಲ್ಲಿ ಇದ್ದ ಕೆಲ ಆರ್ಒ ಪ್ಲಾಂಟ್ಗಳು ಕೂಡ ನೀರಿಲ್ಲದೇ ಬಂದ್ ಆಗಿವೆ. ಕಾವೇರಿ ನೀರಿನ ಪೈಪ್ ಲೈನ್ ಕೂಡ ಹೊಸ ಕಾಂಕ್ರೀಟ್ ರಸ್ತೆ ಮಾಡಿದಾಗ ಆಳಕ್ಕೆ ಸೇರಿರೋದರಿಂದ ನೀರು ಕಡಿಮೆ ಬರುತ್ತಿದೆ ಎಂದು ಜನ ಆರೋಪಿಸುತ್ತಿದ್ದಾರೆ. ಅತ್ತ ನೀರು ಯಾವಾಗ ಬರುತ್ತೆ ಎಂದು ಕಾದು ಕುಳಿತ ಜನರು, ಇರುವ ಒಂದು ಬೋರ್ವೆಲ್ನಾದರೂ ರೀ ಬೋರ್ ಮಾಡಿಸಿದ್ರೆ, ಸಮಸ್ಯೆಗೆ ಸ್ವಲ್ಪ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಒಟ್ಟಿನಲ್ಲಿ ನೀರಿಲ್ಲದೇ ಒಂದೆಡೆ ದಿನನಿತ್ಯದ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗುತ್ತಿದ್ದರೆ, ಮತ್ತೊಂದೆಡೆ ಬಾಡಿಗೆದಾರರು ಮನೆ ಖಾಲಿ ಮಾಡುತ್ತಿರುವುದು ಮನೆ ಮಾಲೀಕರನ್ನ ಕಂಗಾಲಾಗಿಸಿದೆ. ಬೇಸಿಗೆ ಆರಂಭದಲ್ಲೇ ಹೀಗಾದರೆ, ಮುಂದಿನ ದಿನಗಳು ಹೇಗೆ ಎಂದು ಜನ ಚಿಂತಾಕ್ರಾಂತರಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ