AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಸಭೆ ಬಳಿಕ ಆರೋಪಿ ಬಗ್ಗೆ ಮಹತ್ವದ ಅಂಶ ಬಿಚ್ಚಿಟ್ಟ ಗೃಹ ಸಚಿವ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿರೋ 9 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಚಾರವಾಗಿ ಇಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಪೊಲೀಸ್ ಅಧಿಕಾರಿಗಳೊಂದಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ಮಾಡಿದ್ದಾರೆ. ಆದಷ್ಟು ಬೇಗ ಬಾಂಬ್​ ಸ್ಫೋಟ ಪ್ರಕರಣದ ಆರೋಪಿ ಬಂಧಿಸುತ್ತೇವೆ ಎಂದು ಹೇಳಿದ್ದಾರೆ.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಸಭೆ ಬಳಿಕ ಆರೋಪಿ ಬಗ್ಗೆ ಮಹತ್ವದ ಅಂಶ ಬಿಚ್ಚಿಟ್ಟ ಗೃಹ ಸಚಿವ
ಗೃಹ ಸಚಿವ ಪರಮೇಶ್ವರ್
ರಾಚಪ್ಪಾಜಿ ನಾಯ್ಕ್
| Edited By: |

Updated on: Mar 03, 2024 | 2:49 PM

Share

ಬೆಂಗಳೂರು, ಮಾರ್ಚ್ 3: ನಗರದ ರಾಮೇಶ್ವರಂ ಕೆಫೆ ಬಾಂಬ್‌ ಪ್ರಕರಣದ  (Bengaluru Rameshwaram Cafe Bomb Blast) ತನಿಖೆಯನ್ನ ಸರ್ಕಾರ ಸಿಸಿಬಿಗೆ ವಹಿಸಿದೆ. ಏಳೆಂಟು ತಂಡ ಮಾಡಿಕೊಂಡಿರುವ ಪೊಲೀಸರು ಎಲ್ಲಾ ಆ್ಯಂಗಲ್‌ನಲ್ಲೂ ತನಿಖೆ ಆರಂಭಿಸಿದ್ದಾರೆ. ಈ ವಿಚಾರವಾಗಿ ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ಮಾಡಿ, ಕಾನೂನು ವ್ಯವಸ್ಥೆ ಬಗ್ಗೆ ಎಚ್ಚರಿಕೆ ನೀಡಿದ್ದರು. ಇಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಕೂಡ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್,​ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್​​ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳಿದ್ದರು.

ಆದಷ್ಟು ಬೇಗ ಬಾಂಬ್​ ಸ್ಫೋಟ ಪ್ರಕರಣದ ಆರೋಪಿ ಬಂಧಿಸುತ್ತೇವೆ: ಡಾ.ಜಿ.ಪರಮೇಶ್ವರ್

ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಡಾ.ಜಿ.ಪರಮೇಶ್ವರ್, ಆದಷ್ಟು ಬೇಗ ಬಾಂಬ್​ ಸ್ಫೋಟ ಪ್ರಕರಣದ ಆರೋಪಿ ಬಂಧಿಸುತ್ತೇವೆ. ಬಾಂಬ್​ ಸ್ಫೋಟ ಪ್ರಕರಣ ಸಂಬಂಧ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಇಲ್ಲಿಯವರೆಗೂ ಏನೆಲ್ಲಾ ನಡೆದಿದೆ ಎಂಬುದರ ಬಗ್ಗೆ ಚರ್ಚಿಸಿದ್ದೇವೆ. ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಕೆಲವು ಕುರುಹುಗಳು ಸಿಕ್ಕಿವೆ ಎಂದು ತಿಳಿಸಿದರು.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕೊಟ್ಟ ಖಡಕ್ ಸೂಚನೆಗಳಿವು

ಎನ್​ಐಎ, NSG ಕೂಡ ಅವರದ್ದೇ ಆದ ರೀತಿ ತನಿಖೆ ಮಾಡುತ್ತಿದ್ದಾರೆ. ಬೆಂಗಳೂರು ನಗರದ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆರೋಪಿಯ ಚಲನವಲನವನ್ನು ಕಂಡು ಹಿಡಿಯುವ ಕೆಲಸ ಆಗುತ್ತಿದೆ. ಆತ ಸಂಘಟನೆಯಲ್ಲಿ ಇದ್ದಾನಾ ಅಥವಾ ಒಬ್ಬನದ್ದೇ ಕೃತ್ಯವಾ? ತನಿಖೆ ಆಗುತ್ತಿರುವುದರಿಂದ ಎಲ್ಲಾ ವಿಚಾರವನ್ನು ಹೇಳಲು ಆಗಲ್ಲ. ಎಐ ತಂತ್ರಜ್ಞಾನ ಬಳಸಿ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಪಾಕ್​​ ಪರ ಘೋಷಣೆ ಕೂಗಿದ್ದು ಸಾಬೀತಾದರೆ ಮುಲಾಜಿಲ್ಲದೇ ಕ್ರಮ

ಪಾಕ್​ ಜಿಂದಾಬಾದ್​ ಕೇಸ್​ ಸಂಬಂಧ ಎಫ್​​ಎಸ್​ಎಲ್​ ವರದಿ ವಿಳಂಬ ವಿಚಾರವಾಗಿ ಮಾತನಾಡಿದ ಅವರು, ಎಫ್​ಎಸ್​ಎಲ್​ ವರದಿಯನ್ನು ಮುಚ್ಚಿಡುವ ಅಗತ್ಯವಿಲ್ಲ. ಎಫ್​ಎಸ್​ಎಲ್​ ವರದಿ ನಮ್ಮ ಕೈಸೇರಿದ ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ಪಾಕ್​​ ಪರ ಘೋಷಣೆ ಕೂಗಿದ್ದು ಸಾಬೀತಾದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. ಕೇಸ್ ಸಂಬಂಧ FSL​ ವರದಿ ಇನ್ನೂ ಸಂಪೂರ್ಣವಾಗಿ ಬಂದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ‘ಸ್ಫೋಟ’ಕ ಸುದ್ದಿ: ಕೆಫೆಯಲ್ಲಿ ಬಾಂಬ್‌ ಇಟ್ಟವನಿಗೆ ಇದ್ಯಾ ಇ-ಮೇಲ್ ನಂಟು?

ಶುಕ್ರವಾರ ಮಧ್ಯಾಹ್ನ 12.55 ರ ಹೊತ್ತಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟವಾಗಿತ್ತು. ಇದಾದ ಐದು ಸೆಕೆಂಡ್‌ನಲ್ಲೇ ಮತ್ತೊಂದು ಸ್ಫೋಟ ಆಗಿತ್ತು. ಈ ಐದು ಸೆಕೆಂಡ್‌ಗಳ ಅಂತರವೇ ಹಲವರ ಪ್ರಾಣ ಉಳಿಸಿದೆ. ಅಂದಹಾಗೆ ಬಾಂಬ್‌ ಇಟ್ಟು ಟೈಮರ್ ಅಳವಡಿಸಿದ್ದ ಆರೋಪಿ, ಒಂದೇ ಕ್ಷಣದಲ್ಲಿ ಎರಡೂ ಬಾಂಬ್‌ಗಳು ಸ್ಫೋಟಗೊಳ್ಳುವಂತೆ ಪ್ಲ್ಯಾನ್ ಮಾಡಿದ್ದ. ಆದರೆ ಅವನ ಪ್ಲ್ಯಾನ್‌ ಕೈಕೊಟ್ಟಿದ್ದು ಒಂದು ಬಾಂಬ್‌ 12.55 ಕ್ಕೆ ಸ್ಫೋಟವಾದರೆ ಮತ್ತೊಂದು ಐದು ಸೆಕೆಂಡ್‌ಗಳ ಬಳಿಕ ಆಗಿತ್ತು. ಮೊದಲ ಸ್ಫೋಟವಾಗುತ್ತಿದ್ದಂತೆ ಸೆಕೆಂಡ್‌ ಲೆಕ್ಕದಲ್ಲೇ ಜನ ಚದುರಿ ಹೋಗಿದ್ದರು. ಹೀಗಾಗಿ ಹಲವರು ಬಚಾವ್ ಆಗಿದ್ದಾರೆ. ಇನ್ನೂ ಎರಡೂ ಬಾಂಬ್‌ಗಳು ಜತೆಯಾಗಿ ಸ್ಫೋಟವಾಗಿದ್ದರೆ ತೀವ್ರತೆ ಹೆಚ್ಚಾಗ್ತಿತ್ತು. ಅಷ್ಟೇ ಅಲ್ಲ ಬಾಂಬ್‌ ಮೇಲ್ಮುಖವಾಗಿ ಸ್ಫೋಟವಾಗಿದೆ. ಒಂದ್ವೇಳೆ ಅಡ್ಡಲಾಗಿ ಸ್ಫೋಟವಾಗಿದ್ದರೆ ಹತ್ತಾರು ಜನ ಸಾವನ್ನಪ್ಪುವ ಸಾಧ್ಯತೆಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.