ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕೊಟ್ಟ ಖಡಕ್ ಸೂಚನೆಗಳಿವು
ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣದ ಬೆನ್ನಲ್ಲೇ ಗೃಹ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಭದ್ರತೆಗೆ ಸಂಬಂಧಿಸಿ ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಅಧಿಕಾರಿಗಳಿಗೆ ಪಾಠ ಹೇಳಿದ್ದಾರೆ ಸಿಎಂ. ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ನೀಡಿದ ಸೂಚನೆಗಳ ವಿವರ ಇಲ್ಲಿದೆ.
ಬೆಂಗಳೂರು, ಮಾರ್ಚ್ 1: ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ (Bengaluru Rameshwaram Cafe Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ (Police Officers) ಜತೆ ಶನಿವಾರ ಸಿಎಂ ಸಿದ್ದರಾಮಯ್ಯ (CM Siddaramaiah) ಸಭೆ ನಡೆಸಿದರು. ಇದೇ ವೇಳೆ ಭದ್ರತೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಅವರು ಕಟ್ಟುನಿಟ್ಟಿನ ಹಲವು ಸೂಚನೆಗಳನ್ನು ನೀಡಿದರು.
ಘಟನೆಯ ಸಂಪೂರ್ಣ ಸತ್ಯ ಹೊರಗೆ ಬರಲಿ. ತಂತ್ರಜ್ಞಾನದ ಸಾಧ್ಯತೆಗಳನ್ನು ತನಿಖೆಗೆ ಪರಿಣಾಮಕಾರಿಯಾಗಿ ಬಳಸಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸ್ಪಷ್ಟ ಸೂಚನೆ ನೀಡಿದರು.
ಇಂಥ ಘಟನೆ ನಡೆದಾಗಲಷ್ಟೇ ಎಚ್ಚರದಿಂದಿರುವುದು ಅಲ್ಲ: ಸಿಎಂ
ಇಂಥ ಘಟನೆಗಳು ನಡೆದಾಗ ಮಾತ್ರ ಪೊಲೀಸರು ಎಚ್ಚರಿಕೆ ವಹಿಸಿ ಆ ನಂತರ ಮೈ ಮರೆಯುವಂತೆ ಆಗಬಾರದು. ಜನನಿಬಿಡ ಸ್ಥಳಗಳಲ್ಲಿ ಗಸ್ತು ಹೆಚ್ಚಿಸಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದರು. ಸಾಮಾಜಿಕ ಮಾಧ್ಯಮ ಸೇರಿ ಇನ್ನಿತರೆ ಯಾವುದೇ ಒತ್ತಡಕ್ಕೆ ಒಳಗಾಗದೆ ನಿಸ್ಪಕ್ಷಪಾತವಾಗಿ ತನಿಖೆ ನಡೆಸಿ. ಸುಳ್ಳು ಮತ್ತು ತಪ್ಪು ಸುದ್ದಿ ಹರಡುತ್ತಿರುವವರ ಮೇಲೆ ಕಟ್ಟುನಿಟ್ಟಿನ ನಿಗಾ ಇಟ್ಟು ಕ್ರಮ ಜರುಗಿಸಿ ಎಂದು ಅವರು ಖಡಕ್ ಸೂಚನೆ ನೀಡಿದರು.
ಸಮಾಜ ದ್ರೋಹಿಗಳ ಬಗ್ಗೆ ಯಾವುದೇ ಸಹಾನುಭೂತಿ ಇಲ್ಲದೇ ಕ್ರಮ ಜರುಗಿಸಿ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿ. ಇಂಥ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಗುಪ್ತಚರ ದಳ ಇನ್ನಷ್ಟು ಹೆಚ್ಚು ಜಾಗೃತವಾಗಿದ್ದು ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚನೆ ನೀಡಿದರು.
ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟ ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿರುವ ಮತ್ತು ಭದ್ರತೆ ವಿಷಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮೃದು ಧೋರಣೆ ಅನುಸರಿಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಗೃಹ ಸಚಿವ ಪರಮೇಶ್ವರ್, ಪೋಲಿಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಪೋಲಿಸ್ ಆಯುಕ್ತ ದಯಾನಂದ್, ಗುಪ್ತಚರ ಇಲಾಖೆ ಅಧಿಕಾರಿಗಳು ಮತ್ತು ಇತರ ಉನ್ನತ ಪೋಲಿಸ್ ಅಧಿಕಾರಿಗಳು ಸಿಎಂ ಜತೆ ಸಭೆಯಲ್ಲಿ ಭಾಗವಹಿಸಿದ್ದರು.
ತನಿಖೆ ಬಗ್ಗೆ ಮಾಹಿತಿ ನೀಡಿದ ಪೊಲಿಸ್ ಅಧಿಕಾರಿಗಳು
ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಈವರೆಗೆ ತನಿಖೆಯಲ್ಲಿ ಆಗಿರುವ ಪ್ರಗತಿ ಬಗ್ಗೆ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು ಸಿಎಂಗೆ ಮಾಹಿತಿ ನೀಡಿದರು. ಅಪರಾಧಿಯ ಸುಳಿವು ಪತ್ತೆ ಮಾಡಿದ್ದೇವೆ. ಸಂಪೂರ್ಣ ಮಾಹಿತಿ ಕೂಡ ಇದೆ. ಶೀಘ್ರವೇ ತಳಮಟ್ಟಕ್ಕೆ ಕೊಂಡೊಯ್ದ ತನಿಖೆ ಮಾಡುತ್ತೇವೆ. ಅಂತಿಮ ಹಂತದಲ್ಲಿ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಸಿದ್ದರಾಮಯ್ಯ ಅವರಿಗೆ ತಿಳಿಸಿದರು.
ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ: ಯುವಕನ ಜೀವ ಉಳಿಸಿದ ಅಮ್ಮನ ಫೋನ್ ಕರೆ!
ಎನ್ಐಎಗೆ ತನಿಖೆಯ ಹೊಣೆ ನೀಡುವ ಬಗ್ಗೆ ಸಭೆಯಲ್ಲಿ ಯಾವುದೇ ರೀತಿ ಚರ್ಚೆಯಾಗಿಲ್ಲ. ಕೇವಲ ಪೊಲಿಸರಿಂದಷ್ಟೇ ಸಿಎಂ ಮಾಹಿತಿ ಪಡೆದರು. ಸುಮಾರು 25 ನಿಮಿಷಗಳ ಕಾಲ ಸಭೆ ನಡೆಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ