ಸಚಿವ ಅಶೋಕ್ ನೇತೃತ್ವದಲ್ಲಿ ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ನಡೆದಿದ್ದ ಸಿದ್ಧತೆ ಹೇಗಿತ್ತು ಗೊತ್ತಾ?
ರಾಜ್ಯ ಸರ್ಕಾರದ ವತಿಯಿಂದಲೇ ಗಣೇಶ ಪ್ರತಿಷ್ಠಾಪನೆಗೆ ಕಂದಾಯ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿತ್ತು. ಸಂಜೆ ವೇಳೆಗೆ ಖುದ್ದು ಹೋಗಿ ಎರಡು ಗಣಪತಿ ಮೂರ್ತಿಗಳನ್ನು ಕಂದಾಯ ಸಚಿವ ಅಶೋಕ್ ಆಯ್ಕೆ ಮಾಡಿದ್ದರು.
ಬೆಂಗಳೂರು: ಈದ್ಗಾ ಮೈದಾನದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸುತ್ತೇವೆ ಎಂದು ಟಿವಿ9ಗೆ ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದರು. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಚಾಮರಾಜಪೇಟೆ ಮೈದಾನದ ಮಾಲೀಕತ್ವದ ಬಗ್ಗೆ ಹೋರಾಟ. ಹೈಕೋರ್ಟ್ನಲ್ಲಿ ಮತ್ತೆ ಈ ಬಗ್ಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. ಕಾನೂನು ತಜ್ಞರ ಜತೆ ಚರ್ಚಿಸಿ ಹೋರಾಟ ಮುಂದುವರಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದರು. ಕೋರ್ಟ್ ಆದೇಶವನ್ನು ಪಾಲನೆ ಮಾಡುತ್ತೇವೆ. ಸರ್ಕಾರದ ವತಿಯಿಂದ ಗಣೇಶೋತ್ಸವ ಆಚರಣೆ ಮಾಡಬೇಕು, ಅದು ಸರ್ಕಾರದ ಸ್ವತ್ತು, ಮೈದಾನ ಸಾರ್ವಜನಿಕರದ್ದು ಎಂಬುದು ನಮ್ಮ ವಾದ. ಮೈದಾನದಲ್ಲಿ ಗಣೇಶೋತ್ಸವ ಆಗಬೇಕು ಎಂದು ಇಡೀ ಬೆಂಗಳೂರಿನ ಜನ ನಿರೀಕ್ಷೆ ಇಟ್ಟುಕೊಂಡಿದ್ದರು. ಇವತ್ತು ಆಗದೇ ಇರುವುದಕ್ಕೆ ಅವರಿಗೆಲ್ಲಾ ನಿರಾಸೆ ಆಗಿದೆ. ಸರ್ಕಾರ ತನ್ನ ಪ್ರಯತ್ನವನ್ನು ಬಿಡುವುದಿಲ್ಲ ಎಂದು ಹೇಳಿದರು.
ಮೈದಾನದ ಮಾಲೀಕತ್ವದ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಶೀಘ್ರ ನಾವು ಹೈಕೋರ್ಟ್ಗೆ ಅರ್ಜಿ ಸಲ್ಲಿಸುತ್ತೇವೆ. ಸಿಎಂ ಮತ್ತು ಎಜಿ ಜೊತೆ ಚರ್ಚೆ ಮಾಡಿದ್ದೇನೆ. ನಾನು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೆ. ಗಣೇಶೋತ್ಸವಕ್ಕೆ ವಿರೋಧ ಮಾಡಿದ ಜನ ಹಿಂದೆ ರಾಷ್ಟ್ರಧ್ವಜ ಹಾರಾಟಕ್ಕೂ ವಿರೋಧ ಮಾಡಿದ್ದರು. ಗಣೇಶೋತ್ಸವ ಸುಲಲಿತವಾಗಿ ಆಗುತ್ತದೆ ಎಂಬ ವಿಶ್ವಾಸ ನನಗಿತ್ತು. ಮುಂದಿನ ನಡೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವೆ. ಮೈದಾನದಲ್ಲಿ ರಂಜಾನ್ ಮತ್ತು ಮೊಹರಂ ಪ್ರಾರ್ಥನೆ ವಿಚಾರವಾಗಿ ಪ್ರತಿಕ್ರಿಸಿದ್ದು, ಎರಡೂ ಪಾರ್ಟಿಗೂ ಯಥಾಸ್ಥಿತಿ ಅಂತಾ ಕೊಟ್ಟಿದ್ದಾರೆ. ಅದರ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಬೇಕು. ಅವರಿಗೂ ಅನುಮತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಪರ್ಯಾಯ ಗಣೇಶೋತ್ಸವ ಆಚರಣೆ ಬಗ್ಗೆ ನಾಗರಿಕ ಸಮಿತಿಗಳಿಗೆ ಬಿಟ್ಟಿದ್ದು. ಸರ್ಕಾರವಾಗಿ ನಾವು ಕೋರ್ಟ್ ಆದೇಶ ಪಾಲನೆ ಮಾಡಬೇಕಿದೆ ಎಂದು ಹೇಳಿದರು.
ಸಚಿವ ಅಶೋಕ್ ನೇತೃತ್ವದಲ್ಲಿ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಆಗಿದ್ದ ಸಿದ್ಧತೆ
ಸುಪ್ರೀಂಕೋರ್ಟ್ ತೀರ್ಪಿಗಾಗಿ ರಾಜ್ಯ ಸರ್ಕಾರ ಕಾಯ್ದು ಕುಳಿತಿತ್ತು. ಕೋರ್ಟ್ ಅನುಮತಿ ನೀಡಿದ್ದರೆ ಮಧ್ಯರಾತ್ರಿ 12 ಗಂಟೆಗೆ ಆದೇಶ ಹೊರಡಿಸಿ ಪೆಂಡಾಲ್ ಹಾಕಲು ತೀರ್ಮಾನ ಆಗಿತ್ತು. ರಾಜ್ಯ ಸರ್ಕಾರದ ವತಿಯಿಂದಲೇ ಗಣೇಶ ಪ್ರತಿಷ್ಠಾಪನೆಗೆ ಕಂದಾಯ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿತ್ತು. ಸಂಜೆ ವೇಳೆಗೆ ಖುದ್ದು ಹೋಗಿ ಎರಡು ಗಣಪತಿ ಮೂರ್ತಿಗಳನ್ನು ಕಂದಾಯ ಸಚಿವ ಅಶೋಕ್ ಆಯ್ಕೆ ಮಾಡಿದ್ದರು. ನಾಳೆ ಬೆಳಗ್ಗೆ ಚಾಮರಾಜಪೇಟೆಯಲ್ಲಿರುವ ಅಯ್ಯಪ್ಪ ದೇವಸ್ಥಾನದಿಂದ ಖುದ್ದು ಮೆರವಣಿಗೆಯಲ್ಲಿ ಗಣೇಶ ಮೂರ್ತಿಯನ್ನು ಸಚಿವ ಅಶೋಕ್ ತರಲಿದ್ದರು. ಅಶೋಕ್ ನೇತೃತ್ವದಲ್ಲಿ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಿದ್ಧತೆ ಆಗಿತ್ತು.
ಮೂರು ದಿನಗಳ ಕಾಲ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಯಡಿಯೂರು ಕೆರೆಯಲ್ಲಿ ವಿಸರ್ಜನೆಗೆ ಆಗಿದ್ದ ಪ್ಲ್ಯಾನ್ ಮಾಡಲಾಗಿತ್ತು. ಬನಶಂಕರಿ ದೇವಸ್ಥಾನದಿಂದ ಊಟದ ವ್ಯವಸ್ಥೆಗೆ ಕೂಡಾ ಸಿದ್ಧತೆ ಮಾಡಲಾಗಿತ್ತು. ನಾಳೆ ಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನಾ ಮೆರವಣಿಗೆ ವೇಳೆ ಸಚಿವ ಅಶೋಕ್ ಜೊತೆ 300 ಜನರು ಪಂಚೆ ಧರಿಸಿ ಮೆರವಣಿಗೆಯಲ್ಲಿ ಮೂರ್ತಿ ತರುವಂತೆ ಸಿದ್ಧತೆ ನಡೆದಿತ್ತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಪೊಲೀಸ್ ಇಲಾಖೆ ಕೂಡಾ ಎಲ್ಲಾ ಸಿದ್ಧತೆ ಮಾಡಿಕೊಂಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:02 pm, Tue, 30 August 22