ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸುವ ಸರ್ಕಾರದ ನಿರ್ಧಾರಕ್ಕೆ ಸ್ವಾಗತ: ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ
ಎಸ್ಸಿ ಸಮುದಾಯದ ಮೀಸಲಾತಿ ಶೇ.15ರಿಂದ ಶೇ.17ಕ್ಕೆ ಹೆಚ್ಚಿಸಬೇಕು ಎಂದು ವರದಿಕೊಡಲಾಗಿದೆ. ಎಸ್ಟಿ ಮೀಸಲಾತಿ ಶೇ.3ರಿಂದ ಶೇ.7ಕ್ಕೆ ಹೆಚ್ಚಳದ ಬಗ್ಗೆ ಸಿಎಂ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಪರಿಶಿಷ್ಟ ಜಾತಿ (Scheduled Castes – SC) ಮತ್ತು ಪರಿಶಿಷ್ಟ ಪಂಗಡಕ್ಕೆ (Scheduled Tribes – ST) ಮೀಸಲಾತಿ ಹೆಚ್ಚಿಸುವ ಸರ್ಕಾರದ ನಿರ್ಧಾರಕ್ಕೆ ಸ್ವಾಗತ ಎಂದು ಬೆಂಗಳೂರಿನಲ್ಲಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿಕೆ ನೀಡಿದರು. ನಮ್ಮ ಮೀಸಲಾತಿ ಹೋರಾಟ 240ನೇ ದಿನಕ್ಕೆ ಕಾಲಿಡುತ್ತಿದೆ. 2011ರ ಜನಗಣತಿ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು. ನ್ಯಾ. ನಾಗಮೋಹನ ದಾಸ್ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಹೋರಾಟ ಮಾಡಲಾಗುತ್ತಿದೆ. ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಎಸ್ಸಿ ಸಮುದಾಯದ ಮೀಸಲಾತಿ ಶೇ.15ರಿಂದ ಶೇ.17ಕ್ಕೆ ಹೆಚ್ಚಿಸಬೇಕು ಎಂದು ವರದಿಕೊಡಲಾಗಿದೆ. ಎಸ್ಟಿ ಮೀಸಲಾತಿ ಶೇ.3ರಿಂದ ಶೇ.7ಕ್ಕೆ ಹೆಚ್ಚಳದ ಬಗ್ಗೆ ಸಿಎಂ ಹೇಳಿಕೆ ನೀಡಿದ್ದಾರೆ. ನಾಳೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯೋದಾಗಿ ಹೇಳಿದ್ದಾರೆ. ಕಾರ್ಯಕಾರಿ ಆದೇಶ ಪ್ರತಿ ತಲುಪಿದ ಬಳಿಕ ಧರಣಿ ಹಿಂಪಡೆಯುತ್ತೇವೆ ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ಬಹುದಿನದ ಬೇಡಿಕೆಯನ್ನ ಸರ್ಕಾರ ಈಡೇರಿಸಿದರೆ ಅದನ್ನ ನಾವು ಕೂಡ ಸ್ವಾಗತ ಮಾಡಿಕೊಳ್ಳುದ್ದೇವೆ. ಈ ಸಮುದಾಯ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರ ರಾಜಕೀಯ ಪ್ರಾತೀತ್ಯ ಕೊಟ್ಟಿದೆ. ಆರ್ಥಿಕ ಪ್ರಾತಿನಿತ್ಯವನ್ನು ಕೊಟ್ಟಿದೆ. 2011 ರ ಜನಗಣತಿಯ ಅನುಗುಣವಾಗಿ ಮೀಸಲಾತಿಯನ್ನ ಹೆಚ್ಚು ಮಾಡಬೇಕು ಎನ್ನುವುದು ನಮ್ಮ ಆಗ್ರಹ. ನಾಳೆ ನಡೆಯುವ ಸಚಿವ ಸಂಪುಟದಲ್ಲಿ ಅಂತಿಮ ನಿರ್ಧಾರವನ್ನ ತೆಗೆದುಕೊಂಡು ಈ ಸಮುದಾಯಕ್ಕೆ ಸಮಾಜಿಕ ನ್ಯಾಯ ಮಾಡಿಕೊಟ್ಟರೆ ಸ್ವಾಗತ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ಸರ್ವಪಕ್ಷ ಸಭೆ ತೀರ್ಮಾನ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಿಗೆ ಹೆಚ್ಚಿನ ಅವಕಾಶ ನೀಡಲು ಅನುಕೂಲವಾಗುವಂತೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಪ್ರಕಟಿಸಿದರು. ನ್ಯಾಯಮೂರ್ತಿ ನಾಗಮೋಹನ್ದಾಸ್ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯ ಅನುಷ್ಠಾನ ಸಾಧ್ಯತೆಯ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿದ ನಂತರ ಈ ತೀರ್ಮಾನ ಘೋಷಿಸಿದರು. ಅದರಂತೆ ಎಸ್ಸಿ ವರ್ಗದ ಮೀಸಲಾತಿಯನ್ನು ಹಾಲಿ ಅಸ್ತಿತ್ವದಲ್ಲಿರುವ ಶೇ 15ರಿಂದ ಶೇ 17ಕ್ಕೆ ಹಾಗೂ ಎಸ್ಟಿ ಮೀಸಲಾತಿಯನ್ನು ಹಾಲಿ ಅಸ್ತಿತ್ವದಲ್ಲಿರುವ ಶೇ 3ರಿಂದ 7ಕ್ಕೆ ಹೆಚ್ಚಳ ಮಾಡಲಾಗುವುದು.
ಸರ್ವಪಕ್ಷ ಸಭೆಯ ನಿರ್ಣಯವನ್ನು ಸಚಿವ ಸಂಪುಟದಲ್ಲಿ ಇರಿಸಿ ಅಂಗೀಕಾರ ಪಡೆದುಕೊಂಡ ನಂತರ ಸರ್ಕಾರಿ ಆದೇಶ ಪ್ರಕಟವಾಗಲಿದೆ. ಮೀಸಲಾತಿ ಪ್ರಮಾಣ ಹೆಚ್ಚಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಒಳಮೀಸಲಾತಿ ನೀಡಬೇಕಿದೆ. ಈ ಬಗ್ಗೆಯೂ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇತರ ಹಿಂದುಳಿದ ವರ್ಗದವರ ಬಗ್ಗೆಯೂ ವರದಿಗಳು ಬಂದ ಮೇಲೆ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದರು.
ಶಿಕ್ಷಣಕ್ಕೆ ಹೆಚ್ಚು ಹಣ ಮೀಸಲು
ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ಸರ್ಕಾರ ಒಪ್ಪಿಕೊಂಡಿದೆ. ಆ ಸಮುದಾಯಗಳ ಶೈಕ್ಷಣಿಕ ಉದ್ದೇಶಕ್ಕೆ ಮೀಸಲಿಡುವ ಹಣದ ಪ್ರಮಾಣ ಹೆಚ್ಚಿಸಲಾಗುವುದು ಎಂದು ಬೆಂಗಳೂರಿನಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಒಟ್ಟಾರೆ ಮೀಸಲಾತಿ ಶೇ 50 ಮೀರಬಾರದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದರೆ ತಮಿಳುನಾಡಿನಲ್ಲಿ ಇದಕ್ಕೆ ಅವಕಾಶ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಅಗತ್ಯ ತಿದ್ದುಪಡಿ ಮಾಡಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಧರಣಿ ನಿಲ್ಲಿಸಲು ಮನವಿ
ಸರ್ವಪಕ್ಷ ಸಭೆಯಲ್ಲಿ ಮೀಸಲಾತಿ ಕೊಡುವ ಬಗ್ಗೆ ನಿರ್ಧಾರವಾಗಿದೆ. ಇನ್ನು ಮುಂದಾದರೂ ವಾಲ್ಮೀಕಿ ಶ್ರೀಗಳು ಧರಣಿ ನಿಲ್ಲಿಸಬೇಕು ಎಂದು ಸಚಿವ ಬಿ.ಶ್ರೀರಾಮುಲು ಮನವಿ ಮಾಡಿದರು. ಮುಂದಿನ ಅಧಿವೇಶನದಲ್ಲಿ ಮೀಸಲಾತಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.