Breaking News: ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ಸರ್ವಪಕ್ಷ ಸಭೆ ತೀರ್ಮಾನ; ಶೀಘ್ರ ಅಧಿಸೂಚನೆ ಎಂದ ಸಿಎಂ ಬೊಮ್ಮಾಯಿ
SC ST Reservation: ಎಸ್ಸಿ ವರ್ಗದ ಮೀಸಲಾತಿಯನ್ನು ಹಾಲಿ ಅಸ್ತಿತ್ವದಲ್ಲಿರುವ ಶೇ 15ರಿಂದ ಶೇ 17ಕ್ಕೆ ಹಾಗೂ ಎಸ್ಟಿ ಮೀಸಲಾತಿಯನ್ನು ಹಾಲಿ ಅಸ್ತಿತ್ವದಲ್ಲಿರುವ ಶೇ 3ರಿಂದ 7ಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.
ಬೆಂಗಳೂರು: ಪರಿಶಿಷ್ಟ ಜಾತಿ (Scheduled Castes – SC) ಮತ್ತು ಪರಿಶಿಷ್ಟ ಪಂಗಡಕ್ಕೆ (Scheduled Tribes – ST) ಸೇರಿದವರಿಗೆ ಹೆಚ್ಚಿನ ಅವಕಾಶ ನೀಡಲು ಅನುಕೂಲವಾಗುವಂತೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಪ್ರಕಟಿಸಿದರು. ನ್ಯಾಯಮೂರ್ತಿ ನಾಗಮೋಹನ್ದಾಸ್ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯ ಅನುಷ್ಠಾನ ಸಾಧ್ಯತೆಯ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿದ ನಂತರ ಈ ತೀರ್ಮಾನ ಘೋಷಿಸಿದರು. ಅದರಂತೆ ಎಸ್ಸಿ ವರ್ಗದ ಮೀಸಲಾತಿಯನ್ನು ಹಾಲಿ ಅಸ್ತಿತ್ವದಲ್ಲಿರುವ ಶೇ 15ರಿಂದ ಶೇ 17ಕ್ಕೆ ಹಾಗೂ ಎಸ್ಟಿ ಮೀಸಲಾತಿಯನ್ನು ಹಾಲಿ ಅಸ್ತಿತ್ವದಲ್ಲಿರುವ ಶೇ 3ರಿಂದ 7ಕ್ಕೆ ಹೆಚ್ಚಳ ಮಾಡಲಾಗುವುದು. ಸರ್ವಪಕ್ಷ ಸಭೆಯ ನಿರ್ಣಯವನ್ನು ಸಚಿವ ಸಂಪುಟದಲ್ಲಿ ಇರಿಸಿ ಅಂಗೀಕಾರ ಪಡೆದುಕೊಂಡ ನಂತರ ಸರ್ಕಾರಿ ಆದೇಶ ಪ್ರಕಟವಾಗಲಿದೆ. ಮೀಸಲಾತಿ ಪ್ರಮಾಣ ಹೆಚ್ಚಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಒಳಮೀಸಲಾತಿ ನೀಡಬೇಕಿದೆ. ಈ ಬಗ್ಗೆಯೂ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇತರ ಹಿಂದುಳಿದ ವರ್ಗದವರ ಬಗ್ಗೆಯೂ ವರದಿಗಳು ಬಂದ ಮೇಲೆ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದರು.
ಸರ್ವಪಕ್ಷ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವ ಬಗ್ಗೆ ಸಂವಿಧಾನವು ಪ್ರಸ್ತಾಪಿಸಿದೆ. ಅದರ ಆಶಯದಂತೆ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂಬುದು ನಮ್ಮ ನಿರ್ಧಾರ. ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಸಂಬಂಧ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಸಮಿತಿ ಅಧ್ಯಯನ ಮಾಡಿ, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸರ್ವಪಕ್ಷ ಸಭೆಯಲ್ಲಿ ವರದಿ ಅನುಷ್ಠಾನ ಸಂಬಂಧ ಚರ್ಚೆ ನಡೆಸಿದೆವು ಎಂದು ತಿಳಿಸಿದರು. ಸರ್ವಪಕ್ಷ ಸಭೆಯ ನಿರ್ಣಯವನ್ನು ನಾಳೆಯೇ (ಅ 8) ಸಂಪುಟದಲ್ಲಿ ಇರಿಸಿ ಅಂಗೀಕಾರ ತೆಗೆದುಕೊಳ್ಳುತ್ತೇವೆ. ಬಹಳ ವರ್ಷಗಳ ನ್ಯಾಯಸಮ್ಮತ ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಮೀಸಲಾತಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸ್ವಾಮೀಜಿ ಸಹ ಹೋರಾಟ ನಡೆಸಿದ್ದರು. ಶ್ರೀರಾಮುಲು, ರಾಜುಗೌಡ, ರಮೇಶ್ ಜಾರಕಿಹೊಳಿ, ಗೋವಿಂದ ಕಾರಜೋಳ ಸೇರಿದಂತೆ ಹಲವು ನಾಯಕರು ಬೆಂಬಲ ವ್ಯಕ್ತಪಡಿಸಿದ್ದರು. ಹಿಂದೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ರಚನೆಯಾಗಿತ್ತು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಇದನ್ನು ಅನುಮೋದನೆ ಕೊಟ್ಟರು. ಸಮಿತಿಯು 7 ನ್ಯಾಯಸಮ್ಮತ ಶಿಫಾರಸನ್ನು ಸರ್ಕಾರಕ್ಕೆ ಕೊಟ್ಟಿದೆ ಎಂದು ಸಿಎಂ ತಿಳಿಸಿದರು.
ಹೊಸದಾಗಿ ಮೀಸಲಾತಿ ಹೆಚ್ಚಿಸುವುದರಿಂದ ಇತರ ಸಮುದಾಯದರ ಮೇಲೆಯೂ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನೂ ಹಲವು ಸಮುದಾಯಗಳಿಂದ ಬೇಡಿಕೆ ಬಂದಿದೆ. ಎಲ್ಲದರ ಬಗ್ಗೆ ಪರಿಶೀಲಿಸುತ್ತೇವೆ. ಸಮುದಾಯದ ಒಳಗೆ ಇರುವವರಿಗೆ ಇನ್ನು ನ್ಯಾಯ ಸಿಕ್ಕಿಲ್ಲ ಎಂಬ ಕೂಗು ಇದೆ. ಅದಕ್ಕೂ ಕೂಡ ಎಲ್ಲರ ಜೊತೆ ಚರ್ಚೆ ಮಾಡಿ, ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡದೆ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಶಿಕ್ಷಣಕ್ಕೆ ಹೆಚ್ಚು ಹಣ ಮೀಸಲು
ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ಸರ್ಕಾರ ಒಪ್ಪಿಕೊಂಡಿದೆ. ಆ ಸಮುದಾಯಗಳ ಶೈಕ್ಷಣಿಕ ಉದ್ದೇಶಕ್ಕೆ ಮೀಸಲಿಡುವ ಹಣದ ಪ್ರಮಾಣ ಹೆಚ್ಚಿಸಲಾಗುವುದು ಎಂದು ಬೆಂಗಳೂರಿನಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಒಟ್ಟಾರೆ ಮೀಸಲಾತಿ ಶೇ 50 ಮೀರಬಾರದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದರೆ ತಮಿಳುನಾಡಿನಲ್ಲಿ ಇದಕ್ಕೆ ಅವಕಾಶ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಅಗತ್ಯ ತಿದ್ದುಪಡಿ ಮಾಡಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಧರಣಿ ನಿಲ್ಲಿಸಲು ಮನವಿ
ಸರ್ವಪಕ್ಷ ಸಭೆಯಲ್ಲಿ ಮೀಸಲಾತಿ ಕೊಡುವ ಬಗ್ಗೆ ನಿರ್ಧಾರವಾಗಿದೆ. ಇನ್ನು ಮುಂದಾದರೂ ವಾಲ್ಮೀಕಿ ಶ್ರೀಗಳು ಧರಣಿ ನಿಲ್ಲಿಸಬೇಕು ಎಂದು ಸಚಿವ ಬಿ.ಶ್ರೀರಾಮುಲು ಮನವಿ ಮಾಡಿದರು. ಮುಂದಿನ ಅಧಿವೇಶನದಲ್ಲಿ ಮೀಸಲಾತಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸುಗ್ರೀವಾಜ್ಞೆ ಹೊರಡಿಸಿ: ಸಿದ್ದರಾಮಯ್ಯ ಒತ್ತಾಯ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮಾತನಾಡಿ, 2019ರ ಜುಲೈನಲ್ಲಿ ನ್ಯಾಯಮೂರ್ತಿ ನಾಗಮೋಹನ ದಾಸ್ ಸಮಿತಿ ರಚಿಸಿದ್ದೆವು. 2020ರ ಜುಲೈ 2ರಂದು ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ವರದಿ ಸಲ್ಲಿಸಿ 2 ವರ್ಷವಾಗಿದೆ. 2011ರ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಹೆಚ್ಚಿಸಲು ಸಮಿತಿಯು ಶಿಫಾರಸು ಮಾಡಿದೆ ಎಂದು ಹೇಳಿದರು.
ಮೀಸಲಾತಿ ಹೆಚ್ಚಳ ತೀರ್ಮಾನವನ್ನು ಕೇಂದ್ರವೂ ಒಪ್ಪಬೇಕಾಗುತ್ತದೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರ ಇರುವುದರಿಂದ ಇದು ಸಮಸ್ಯೆಯಾಗಲಾರದು. ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ರಾಜ್ಯ ಸರ್ಕಾರವು ಶೀಘ್ರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು. ಸಭೆ ಕರೆದದ್ದು ತುಂಬಾ ತಡವಾಯ್ತು, ಇದರ ಬಗ್ಗೆ ಹಲವು ಬಾರಿ ನಾನು ಒತ್ತಾಯ ಮಾಡಿದ್ದೆ. ನಾಗಮೋಹನ್ ದಾಸ್ ವರದಿಯನ್ನ ಅನುಷ್ಠಾನಕ್ಕೆ ಮಾಡೋಕೆ ತಕ್ಷಣ ವಿಧಾನಸಭೆ ಅಧಿವೇಶನ ಕರೆಯಬೇಕು ಅಂತಾ ನಾನು ಸಭೆಯಲ್ಲಿ ಒತ್ತಾಯ ಮಾಡಿದ್ದೇನೆ ಎಂದು ವಿವರಿಸಿದರು.
ಸಭೆಯ ಬಳಿಕೆ ಮಾತನಾಡಿದ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ನಾನು ಮುಖ್ಯಮಂತ್ರಿ ಆಗಿದ್ದಾಗ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ರಚನೆ ಮಾಡಿದ್ದು. ವರದಿ ಅನುಷ್ಠಾನದ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಆಗಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ಸರ್ಕಾರವು ಕಾನೂನು ರೂಪಕ್ಕೆ ತರಲಿದೆ ಎಂದರು.
Published On - 2:31 pm, Fri, 7 October 22