
ಬೆಂಗಳೂರು, ಜನವರಿ 07: ನಗರದ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಲ್ಲೂರಹಳ್ಳಿಯಲ್ಲಿ 6 ವರ್ಷದ ಮಗುವನ್ನು ದಾರುಣವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ತಾಯಿಯ ಮೇಲಿನ ದ್ವೇಷದಿಂದ ಮಗಳನ್ನು ಹತ್ಯೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಆರೋಪಿಗಾಗಿ ತೀವ್ರ ಶೋಧ ನಡೆಯುತ್ತಿದೆ.
ಕೋಲ್ಕತ್ತಾ ಮೂಲದ 6 ವರ್ಷದ ಬಾಲಕಿ ಶಹಜಾನ್ ಕತೂನ್ನ ಕತ್ತು ಹಿಸುಕಿ ಕೊಲೆಗೊಂಡಿರುವ ಘಟನೆ ನಗರವನ್ನೇ ಬೆಚ್ಚಿಬೀಳಿಸಿದೆ. ತಾಯಿ ಮೇಲಿನ ದ್ವೇಷಕ್ಕೆ ಮುಗ್ಧ ಮಗುವನ್ನೇ ಗುರಿಯಾಗಿಸಿರುವ ಶಂಕೆ ವ್ಯಕ್ತವಾಗಿದೆ. ಬಾಲಕಿಯ ತಂದೆ ಇಂಜಮುಲ್ ಶೇಕ್ ಲೇಬರ್ ಕೆಲಸ ಮಾಡುತ್ತಿದ್ದು, ನಿನ್ನೆ (ಜ.6) ಮಧ್ಯಾಹ್ನ ತಮ್ಮ ಮಗಳು ಒಂದು ದಿನದಿಂದ ಕಾಣೆಯಾಗಿರುವುದಾಗಿ ವೈಟ್‌ಫೀಲ್ಡ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಮಾಹಿತಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಬಾಲಕಿ ಪರಿಚಿತ ವ್ಯಕ್ತಿಯೊಂದಿಗೇ ಹೋಗಿರುವುದು ದೃಢಪಟ್ಟಿತ್ತು.
ಈ ಹಿನ್ನೆಲೆಯಲ್ಲಿ ನಲ್ಲೂರಹಳ್ಳಿ ಪ್ರದೇಶದಲ್ಲಿ ಪೊಲೀಸರು ಮಧ್ಯರಾತ್ರಿವರೆಗೆ ಕೂಂಬಿಂಗ್ ರೀತಿಯ ಕಾರ್ಯಾಚರಣೆ ನಡೆಸಿದ್ದಾರೆ. ಮಧ್ಯರಾತ್ರಿ ದೇವಸ್ಥಾನ ರಸ್ತೆಯ ಮೋರಿಯೊಂದರಲ್ಲಿ ಬ್ಯಾಗ್‌ನೊಳಗೆ ಪತ್ತೆಯಾಗಿದ್ದ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪ್ಲಾಸ್ಟಿಕ್ ವೈರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವುದು ತಿಳಿದುಬಂದಿದೆ. ಮೃತದೇಹದ ಮೇಲೆ ಯಾವುದೇ ಹಲ್ಲೆ ಅಥವಾ ಲೈಂಗಿಕ ದೌರ್ಜನ್ಯದ ಗುರುತುಗಳು ಕಂಡುಬಂದಿಲ್ಲ ಎಂದು ವೈಟ್‌ಫೀಲ್ಡ್ ಡಿಸಿಪಿ ತಿಳಿಸಿದ್ದಾರೆ. ಸ್ಥಳೀಯರು ಹೇಳುವಂತೆ ಆರೋಪಿ ಕುಟುಂಬ ಮತ್ತು ಬಾಲಕಿಯ ಕುಟುಂಬದ ನಡುವೆ ಹಿಂದಿನಿಂದಲೂ ವೈಷಮ್ಯವಿದ್ದು, ತಾಯಿ ಮೇಲಿನ ದ್ವೇಷದಿಂದಲೇ ಈ ಕೃತ್ಯ ನಡೆದಿರಬಹುದು ಎನ್ನಲಾಗಿದೆ. ಆರೋಪಿ ಯಾರು ಎಂಬುದು ಪೊಲೀಸರಿಗೆ ಗೊತ್ತಾಗಿದ್ದು, ವಿಶೇಷ ತಂಡ ರಚಿಸಿ ಹುಡುಕಾಟ ಮುಂದುವರಿದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.