ವೈಟ್‌ ಫೀಲ್ಡ್‌-ಕೆ.ಆರ್‌.ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಹಲವು ಕಡೆ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ವಿವರ ಇಲ್ಲಿದೆ

ಮೆಟ್ರೋ ರೈಲಿಗೆ ಚಾಲನೆ ಹಿನ್ನೆಲೆ ವೈಟ್​ಫೀಲ್ಡ್ ಸುತ್ತಮುತ್ತ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 2.30ರವರೆಗೆ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.

ವೈಟ್‌ ಫೀಲ್ಡ್‌-ಕೆ.ಆರ್‌.ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಹಲವು ಕಡೆ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ವಿವರ ಇಲ್ಲಿದೆ
ಉದ್ಘಾಟನೆಗೆ ಸಿದ್ಧವಾದ ವೈಟ್‌ ಫೀಲ್ಡ್‌-ಕೆ.ಆರ್‌.ಪುರ ಮೆಟ್ರೋ
Follow us
ಆಯೇಷಾ ಬಾನು
|

Updated on:Mar 25, 2023 | 7:28 AM

ಬೆಂಗಳೂರು: ವೈಟ್‌ ಫೀಲ್ಡ್‌-ಕೆ.ಆರ್‌.ಪುರ ಮೆಟ್ರೋ(Whitefield-KR Puram metro) ಸಂಚಾರಕ್ಕೆ ಇಂದು ಹಸಿರು ನಿಶಾನೆ ಸಿಗಲಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ(Narendra Modi) ಬೆಂಗಳೂರಿಗೆ ಆಗಮಿಸಲಿದ್ದು, ಯೋಜನೆ ಲೋಕಾರ್ಪಣೆ ಗೊಳಿಸಲಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೆಚ್‌ಎಎಲ್‌ನಿಂದ ಹೆಲಿಕಾಫ್ಟರ್‌ ಮೂಲಕ ಸತ್ಯ ಸಾಯಿ ಬಾಬ ಆಸ್ಪತ್ರೆ ಬಳಿ ಬಂದಿಳಿಯಲಿರುವ ಮೋದಿ, ಅಲ್ಲಿಂದ ಕಾರ್‌ನಲ್ಲಿ ವೈಟ್‌ಫೀಲ್ಡ್‌ನ ಕಾಡುಗೋಡಿ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲೇ ನೂತನ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಬಳಿಕ ಮೆಟ್ರೋದಲ್ಲಿ ಸಂಚಾರ ಮಾಡಲಿದ್ದಾರೆ. ಬಹುದಿನಗಳ ಕನಸು ನನಸಾಗ್ತಿರೋದು ಐಟಿಬಿಟಿ ನೌಕರರಿಗೆ ಖುಷಿ ತಂದಿದೆ. ಇನ್ನು ಮೆಟ್ರೋ ರೈಲಿಗೆ ಚಾಲನೆ ಹಿನ್ನೆಲೆ ವೈಟ್​ಫೀಲ್ಡ್ ಸುತ್ತಮುತ್ತ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ.

ಪೊಲೀಸರು ಕೆಲವು ಮಾರ್ಗಗಳ ಸಂಚಾರ ಬದಲಾವಣೆ ಮಾಡಿದ್ದಾರೆ. ವೈಟ್​ಫೀಲ್ಡ್ ಸುತ್ತಮುತ್ತ ಕೆಲವು ರಸ್ತೆ ಮಾರ್ಗಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 2.30ರವರೆಗೆ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ವರ್ತೂರು ಕೋಡಿಯಿಂದ ಓ ಫಾರಂ ಜಂಕ್ಷನ್​ ಮೂಲಕ ಕನ್ನಮಂಗಲ ಗೇಟ್​ವರೆಗೆ ಸಾರ್ವಜನಿಕರ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಚನ್ನಸಂದ್ರದಿಂದ ಓ ಫಾರಂ ಮೂಲಕ ಹೂಡಿ ಸರ್ಕಲ್​ವರೆಗೆ, ಕುಂದಲಹಳ್ಳಿ ರಸ್ತೆಯಿಂದ ವೈದೇಹಿ ಆಸ್ಪತ್ರೆಯ ಮೂಲಕ ಓ ಫಾರಂ ಜಂಕ್ಷನ್​ವರೆಗೆ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ.

ಇನ್ನು ವಾಹನ ಸವಾರರು ವರ್ತೂರು ಕೋಡಿಯಿಂದ ಕುಂದಲಹಳ್ಳಿ ಬ್ರಿಡ್ಜ್ ಮೂಲಕ ಹಳೇ ಏರ್​ಪೋರ್ಟ್ ರಸ್ತೆ ತಲುಪಬಹುದು. ಚನ್ನಸಂದ್ರ ಸರ್ಕಲ್​ನಿಂದ ನಾಗೊಂಡನಹಳ್ಳಿ, ಇಮ್ಮಡಿಹಳ್ಳಿ ಹಗದೂರು ಮೂಲಕ ವರ್ತೂರು ಕೋಡಿ ತಲುಪಬಹುದು. ಕಾಟಂನಲ್ಲೂರು ಕ್ರಾಸ್​ನಿಂದ ಶೀಗೆಹಳ್ಳಿ ಗೇಟ್, ಕಾಡುಗೋಡಿ ನಾಲಾರಸ್ತೆ, ಚನ್ನಸಂದ್ರಹೂಡಿ ಸರ್ಕಲ್​, ಗ್ರಾಫೈಟ್ ರಸ್ತೆ ಮೂಲಕ ಕುಂದಲಹಳ್ಳಿ ತಲುಪಬಹುದು. ಹೂಡಿ ಸರ್ಕಲ್​ನಿಂದ ಅಯ್ಯಪ್ಪನಗರ, ಭಟ್ಟರಹಳ್ಳಿ-ಮೇಡಹಳ್ಳಿ ಮೂಲಕ ಕಾಟಂನಲ್ಲೂರು ಕ್ರಾಸ್​ಗೆ ವಾಹನ ಸವಾರರು ತೆರಳಬಹುದು.

ಇದನ್ನೂ ಓದಿ: ಉದ್ಘಾಟನೆಗೆ ಸಿದ್ಧಗೊಂಡ ಬೆಂಗಳೂರಿನ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣ: ವರ್ಣರಂಜಿತ ದೀಪಗಳಿಂದ ಕಂಗೊಳಿಸಿದ್ದು ಹೀಗೆ

13.71 ಕಿಲೋ ಮೀಟರ್‌ ಉದ್ದದ ನೀರಳೆ ಬಣ್ಣದ ಈ ಮಾರ್ಗದಲ್ಲಿ ಒಟ್ಟು 12 ಸ್ಟೇಷನ್‌ಗಳು ಬರಲಿವೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದ್ರೆ, ಕೆ.ಆರ್‌.ಪುರ, ವೈಟ್‌ ಫೀಲ್ಡ್‌ ಭಾಗದಲ್ಲಿ ಆಗ್ತಿದ್ದ ಸಂಚಾರ ದಟ್ಟಣೆ ಅಲ್ಪಮಟ್ಟಿಗೆ ನಿವಾರಣೆಯಾಗಲಿದೆ. ಎಲೆಕ್ಷನ್‌ ಹೊತ್ತಲ್ಲೇ ಮೋದಿಯನ್ನ ಕರೆಸಿ ಉದ್ಘಾಟನೆ ಮಾಡಿಸಲಾಗ್ತಿದ್ದು, ಬಿಜೆಪಿ ಮತ ಲೆಕ್ಕಾಚಾರದಲ್ಲಿದೆ. ಒಂದ್ಕಡೆ ಅಭಿವೃದ್ಧಿ ಮಂತ್ರ ಇದ್ರೆ, ಮತ್ತೊಂದು ಕಡೆ ಮೋದಿಯಿಂದ ಮತ ಮಂತ್ರವನ್ನೂ ಜಪಿಸಲಾಗುತ್ತೆ. ಇನ್ನು ಇದೇ ಭಾಗದಲ್ಲಿ ಐಟಿಬಿಟಿ ಕಂಪನಿಗಳು ಇರೋದ್ರಿಂದ ಟೆಕ್ಕಿಗಳಿಗೂ ಇದ್ರಿಂದ ಅನುಕೂಲ ಆಗಲಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:28 am, Sat, 25 March 23