ಬೆಂಗಳೂರು: ಬನ್ನೇರುಘಟ್ಟದಲ್ಲಿ ಕಾಡಾನೆ ದಾಳಿಗೆ ಒಂದೇ ವಾರದಲ್ಲಿ ಮೂರು ಸಾವು

|

Updated on: Jul 13, 2024 | 5:29 PM

ಕರ್ನಾಟಕದಲ್ಲಿ ಕಳೆದ ಕೆಲವು ವರ್ಷಗಳಿಂದ ವನ್ಯ ಪ್ರಾಣಿಗಳು ಹಾಗೂ ಮಾನವ ಸಂಘರ್ಷ ಹೆಚ್ಚಾಗುತ್ತಿದ್ದು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಕಾಡಾನೆ ದಾಳಿಯಿಂದ ಮೂವರು ಮೃತಪಟ್ಟಿದ್ದಾರೆ. ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಪದೇ ಪದೆ ಇಂಥ ಘಟನೆ ಸಂಭವಿಸಲು ಕಾರಣವೇನು? ಅರಣ್ಯಾಧಿಕಾರಿಗಳು ಏನನ್ನುತ್ತಾರೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು: ಬನ್ನೇರುಘಟ್ಟದಲ್ಲಿ ಕಾಡಾನೆ ದಾಳಿಗೆ ಒಂದೇ ವಾರದಲ್ಲಿ ಮೂರು ಸಾವು
ಬೆಂಗಳೂರು: ಬನ್ನೇರುಘಟ್ಟದಲ್ಲಿ ಕಾಡಾನೆ ದಾಳಿಗೆ ಒಂದೇ ವಾರದಲ್ಲಿ ಮೂರು ಸಾವು (ಪ್ರಾತಿನಿಧಿಕ ಚಿತ್ರ)
Follow us on

ಬೆಂಗಳೂರು, ಜುಲೈ 13: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಒಂದು ವಾರದಲ್ಲಿ ಕಾಡಾನೆ ದಾಳಿಯಿಂದಾಗಿ ಮೂರು ಸಾವು ಸಂಭವಿಸಿವೆ. 55 ವರ್ಷ ವಯಸ್ಸಿನ ಅರಣ್ಯ ರಕ್ಷಕ ಚಿಕ್ಕಮಾದಯ್ಯ ಶುಕ್ರವಾರ ಮುಂಜಾನೆ ಆನೆ ದಾಳಿಯಿಂದ ಮೃತಪಟ್ಟಿದ್ದು, ಇದರೊಂದಿಗೆ ಈ ಪ್ರದೇಶದಲ್ಲಿ ಆನೆ ದಾಳಿಯಿಂದಾಗಿ ಸಂಭವಿಸಿದ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಮಾದಯ್ಯ ಸಹೋದ್ಯೋಗಿಗಳು ಹೇಳಿದ ಪ್ರಕಾರ, ರಾಷ್ಟ್ರೀಯ ಉದ್ಯಾನವನ ಬನ್ನೇರುಘಟ್ಟ ವ್ಯಾಪ್ತಿಯ ದೊಡ್ಡ ಬಂಡೆ ಬಳಿ ರಾತ್ರಿ 12.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಆನೆ ಹಿಂಡು ಹಾದುಹೋಗುವುದನ್ನು ನೋಡಿದ್ದಾಗಿ ಅವರು ಹೇಳಿದ್ದಾರೆ.

ಜುಲೈ 10 ರಂದು ಕೋಡಿಹಳ್ಳಿ ವ್ಯಾಪ್ತಿಯಲ್ಲಿ 45 ವರ್ಷದ ಸುರೇಶ್ ಎಂವರ ಮೃತದೇಹ ಪತ್ತೆಯಾಗಿತ್ತು. ಆನೆ ದಾಳಿಯಿಂದ ಸಾವು ಸಂಭವಿಸಿರುವುದು ನಂತರ ತಿಳಿದುಬಂದಿತ್ತು. ಜುಲೈ 6 ರಂದು ಅದೇ ವ್ಯಾಪ್ತಿಯಲ್ಲಿ 38 ವರ್ಷದ ರೈತರೊಬ್ಬರ ಮೃತದೇಹ ಪತ್ತೆಯಾಗಿತ್ತು. ಇದೂ ಸಜಹ ಆನೆ ದಾಳಿಯಿಂದ ಆಗಿರುವ ಸಾವೆಂದು ಶಂಕಿಸಲಾಗಿದೆ.

ಪರಿಹಾರ ಘೋಷಿಸಿದ ಅರಣ್ಯ ಸಚಿವ ಖಂಡ್ರೆ

ಅರಣ್ಯ, ಪರಿಸರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಮತ್ತು ಹಿರಿಯ ಅರಣ್ಯ ಅಧಿಕಾರಿಗಳು ಚಿಕ್ಕಮಾದಯ್ಯ ಅವರ ಕುಟುಂಬದವರನ್ನು ಭೇಟಿ ಮಾಡಿ ನಿಧನಕ್ಕೆ ಸಾಂತ್ವನ ಹೇಳಿದ್ದಾರೆ. ಆನೆ ದಾಳಿಯಿಂದ ಮೃತಪಟ್ಟವರ ಪ್ರತಿ ಕುಟುಂಬದವರಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗವನ್ನು ನೀಡುವುದಾಗಿಯೂ ಘೋಷಿಸಿದ್ದಾರೆ.

ಚಿಕ್ಕಮಾದಯ್ಯ ಅವರು ಅತ್ಯುತ್ತಮ ಅರಣ್ಯರಕ್ಷಕರಲ್ಲಿ ಒಬ್ಬರಾಗಿದ್ದರು ಮತ್ತು 25 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ ಪ್ರಿಯದರ್ಶಿ ತಿಳಿಸಿದ್ದಾರೆ.

ಆನೆಗಳ ಹಾವಳಿ ಹೆಚ್ಚಳಕ್ಕೆ ಕಾರಣವೇನು?

ಈ ಪ್ರದೇಶದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ ಎಂದು ಹಿರಿಯ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಲ್ಲಿ ಸುಮಾರು 125 ಆನೆಗಳಿವೆ. ಆದರೆ, ಅವುಗಳ ಸಂಖ್ಯೆ ಕೆಲವೊಮ್ಮೆ 220 ಕ್ಕೆ ಏರುತ್ತದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ತಮಿಳುನಾಡಿನೊಂದಿಗೆ ಗಡಿಯನ್ನು ಹೊಂದಿದೆ. ಕನಕಪುರ, ಕಾವೇರಿ ಮತ್ತು ರಾಮನಗರ ಅರಣ್ಯ ಶ್ರೇಣಿಗಳೊಂದಿಗೆ ಗಡಿಗಳನ್ನು ಹಂಚಿಕೊಂಡಿರುವುದರಿಂದ ಈ ಭಾಗದಲ್ಲಿ ಆನೆಗಳ ಚಲನವಲನ ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಈ ಲಿಂಕ್ ಕ್ಲಿಕ್​​ ಮಾಡಿದ್ರೆ ಬ್ಯಾಂಕ್ ಬ್ಯಾಲೆನ್ಸ್ ಖಾಲಿ, ರಾಜ್ಯ ಪೊಲೀಸರಿಂದ ವಿನೂತನ ಜಾಗೃತಿ

ಅರಣ್ಯ ವ್ಯಾಪ್ತಿಯಲ್ಲಿ ಜನರ ಓಡಾಟ ಹೆಚ್ಚಾದಂತೆ ಸಮಸ್ಯೆ ಉಲ್ಬಣಗೊಂಡಿದೆ. ನಾಗರಿಕ ಚಟುವಟಿಕೆಗಳು, ಅತಿಕ್ರಮಣ ಮತ್ತು ಜನರ ಉಪಸ್ಥಿತಿಯಲ್ಲಿ ಆನೆ ದಾಳಿ ಹೆಚ್ಚಳವಾಗಿದೆ. ರೈಲು ತಡೆಗೋಡೆಗಳನ್ನು ರಚಿಸಲು ಮತ್ತು ಹಳೆಯ ಸೋಲಾರ್ ಮತ್ತು ಮುಳ್ಳುತಂತಿಗಳನ್ನು ಬದಲಾಯಿಸಲು ಹಣದ ಕೊರತೆಯಿದೆ ಎಂದು ಮೂಲಗಳು ತಿಳಿಸಿವೆ.

ಗ್ರೌಂಡ್ ಸಿಬ್ಬಂದಿ ಕೊರತೆಯೂ ಇರುವುದಾಗಿ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ. ರಾತ್ರಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಸೂಕ್ತ ಭದ್ರತೆ ಬೇಕು ಎಂಬುದಕ್ಕೆ ಶುಕ್ರವಾರದ ಘಟನೆ ನಿದರ್ಶನವಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ