ಬೆಂಗಳೂರು, ಸೆಪ್ಟೆಂಬರ್ 28: ಐಟಿ ಹಬ್ ಬೆಳ್ಳಂದೂರಿನಲ್ಲಿನ (Bellandur) ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ರಕ್ಷಣಾ ಇಲಾಖೆಯಿಂದ 22 ಎಕರೆ ಜಮೀನು ಖರೀದಿಸುತ್ತಿದ್ದೇವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ (DK Shivakumar) ಟೆಕ್ಕಿಗಳಿಗೆ ಸಿಹಿ ನೀಡಿದ್ದಾರೆ. ವಿಧಾನಸೌಧದಲ್ಲಿ ಇಂದು (ಸೆ.28) ಹಿರಿಯ ಸೇನಾಧಿಕಾರಿ, ಲೆಫ್ಟಿನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್‌ವಾಲ್ ಮತ್ತು ಡಿಕೆ ಶಿವಕುಮಾರ್ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆ ಶಿವಕುಮಾರ್, ಜಮೀನು ಖರೀದಿ ಸಂಬಂಧ ಈಗಾಗಲೆ ರಕ್ಷಣಾ ಇಲಾಖೆ ಮಂತ್ರಿ ಮತ್ತು ಅಧಿಕಾರಗಳನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದ್ದೇನೆ. ಟ್ರಾಫಿಕ್ ಸಮಸ್ಯೆಯನ್ನು ನಿವಾರಣೆಗೆ ರಸ್ತೆ ನಿರ್ಮಾಣಕ್ಕೆ 12 ಎಕರೆ ಜಮೀನು ಕೊಡಲು ಒಪ್ಪಿಗೆ ಕೊಟ್ಟಿದ್ದಾರೆ ಎಂದು ಹೇಳಿದರು.
ಈಜೀಪುರ ಹಾಗೂ ಬೆಳ್ಳಂದೂರು ನಡುವಿನ ರಸ್ತೆಗಾಗಿ ಟೆಂಡರ್ ಕರೆದಿದ್ದೇನೆ. ಹೀಗಾಗಿ ಲೆಫ್ಟಿನೆಂಟ್ ಜನರಲ್ ಅವರನ್ನು ಕರೆದು ಧನ್ಯವಾದ ಹೇಳಿದ್ದೇನೆ. ಹೆಬ್ಬಾಳ್ ಕಡೆಗೂ 10 ಎಕರೆ ಜಾಗ ನೀಡಿ ಅಂತ ಕೇಳಿದ್ದೇನೆ. ಒಟ್ಟು 22 ಎಕರೆ ನೀಡಿ ಎಂದು ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ಮಹಾತ್ಮ ಗಾಂಧಿ ಅಚರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ನೂರು ವರ್ಷ ಆಗಿದೆ. ಅದಕ್ಕಾಗಿ ಈ ಬಾರಿಯ ಗಾಂಧಿ ಜಯಂತಿಯನ್ನು ವಿಶೇಷ ಆಚರಿಸಲು ಚಿಂತಿಸಿದ್ದೇವೆ. ಮೊದಲ ಹಂತವಾಗಿ ಸ್ವಚ್ಛತಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಜಿಲ್ಲಾ, ತಾಲೂಕಿನ ಹಾಗೂ ಪಾಲಿಕೆಗಳ ಮಟ್ಟದಲ್ಲಿ ಗಾಂಧಿ ನಡಿಗೆ ಹಮ್ಮಿಕೊಂಡಿದ್ದೇವೆ. ಒಂದು ಕಿಮೀ ನಡಿಗೆ ಇರುತ್ತದೆ. ಬೆಂಗಳೂರಿನಲ್ಲಿ ಗಾಂಧಿ ಭವನದಿಂದ ಗಾಂಧಿ ಪ್ರತಿಮೆಯವರೆಗೂ ನಡಿಗೆ ಹಮ್ಮಿಕೊಂಡಿದ್ದೇವೆ. ಪಕ್ಷ ಭೇದ ಮರೆತು ಎಲ್ಲರೂ ಇದರಲ್ಲಿ ಭಾಗಿಯಾಗಬೇಕು. ಸ್ವಚ್ಛತೆಗಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದೇ ವೇಳೆ ಸ್ವಚ್ಛತೆ ಕಾಪಾಡಲು ಪ್ರತಿಜ್ಞೆ ಹಮ್ಮಿಕೊಂಡಿದ್ದೇವೆ. ಅದಕ್ಕಾಗಿ ಆ್ಯಪ್ ಸಹ ತಯಾರು ಮಾಡುತ್ತಿದ್ದೇವೆ. ಎಲ್ಲರೂ ಕೂಡ ಇದರಲ್ಲಿ ಭಾಗಿಯಾಗಬೇಕು. ಸ್ವಚ್ಛತೆ ಬಗ್ಗೆ ನಾವು ಈ ಕಾರ್ಯಕ್ರಮ ಮಾಡುತ್ತೇವೆ. ಒಂದು ವರ್ಷ ಒಂದೊಂದು ಕಡೆ ಈ ಕಾರ್ಯಕ್ರಮ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಸಿಎಂ ವಿರುದ್ಧ ತನಿಖೆಗೆ ಆದೇಶಿಸಿದ ಕೋರ್ಟ್: ಸಿದ್ದರಾಮಯ್ಯ ಬೆನ್ನಿಗೆ ನಿಂತ ಡಿಕೆ ಶಿವಕುಮಾರ್
ಬೆಂಗಳೂರು ನಗರದಲ್ಲಿ ಇನ್ನೂ ತುಂಬಾ ಗುಂಡಿಗಳಿವೆ. ನಮ್ಮ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಇನ್ನೊಂದು ರಿವೀವ್ ಮೀಟಿಂಗ್ ಮಾಡುತ್ತೇವೆ ಎಂದರು.
ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಎಫ್ಐಆರ್ ದಾಖಲಾದ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಎಫ್ಐಆರ್ ಬಗ್ಗೆ ನಾನು ಮಾತನಾಡಲ್ಲ. ಎಐಸಿಸಿ ಅಧ್ಯಕ್ಷರೇ ಎಲ್ಲವನ್ನೂ ಹೇಳಿದ್ದಾರೆ. ಹಾಗಾಗಿ ನಾನು ಈ ವಿಚಾರದ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:55 am, Sat, 28 September 24