AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF: ಕೆಜಿಎಫ್​ನಲ್ಲಿ ವ್ಯವಸ್ಥಿತ ಟೌನ್​ಶಿಪ್ ನಿರ್ಮಾಣ: ಶಾಸಕಿ ರೂಪಕಲಾಗೆ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ

ಭೂಮಿ ಬೆಲೆ ಬೆಂಗಳೂರು ಸುತ್ತಮುತ್ತ ಮೂರ್ನಾಲ್ಕು ಕೋಟಿ ಇದೆ. ಯಾರು ಬಂದು ಬಂಡವಾಳ ಹಾಕಿ ಕೈಗಾರಿಕೆ ಮಾಡ್ತಾರೆ ಎಂದು ಹಳಿಯಾಳ ಶಾಸಕ ಆರ್​.ವಿ.ದೇಶಪಾಂಡೆ ಪ್ರಶ್ನಿಸಿದರು.

KGF: ಕೆಜಿಎಫ್​ನಲ್ಲಿ ವ್ಯವಸ್ಥಿತ ಟೌನ್​ಶಿಪ್ ನಿರ್ಮಾಣ: ಶಾಸಕಿ ರೂಪಕಲಾಗೆ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Sep 16, 2022 | 12:39 PM

Share

ಬೆಂಗಳೂರು: ಕೆಜಿಎಫ್ ನಗರದ ಅಭಿವೃದ್ಧಿ ಹಾಗೂ ಉದ್ಯೋಗಾವಕಾಶ ಒದಗಿಸುವ ವಿಚಾರವು ವಿಧಾನಸಭೆಯಲ್ಲಿ ಶುಕ್ರವಾರ ಕಾವೇರಿದ ಚರ್ಚೆಗೆ ಕಾರಣವಾಯಿತು. ಕೆಜಿಎಫ್ ಅಭಿವೃದ್ಧಿ ವಿಚಾರವನ್ನು ಪ್ರಸ್ತಾಪಿಸಿದ ಶಾಸಕಿ ರೂಪಕಲಾ, ಬಿಇಎಂಲ್ ಪ್ರದೇಶವನ್ನು ಕೈಗಾರಿಕಾ ಹಬ್ ಮಾಡಿ, ಕೆಐಎಡಿಬಿಗೆ ಹಸ್ತಾಂತರಿಸಲು ತೀರ್ಮಾನ ಮಾಡಲಾಗಿದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಕೈಗಾರಿಕಾ ಟೌನ್​ಶಿಪ್ ಮಾಡಲು ಇದೀಗ ಸರ್ಕಾರವು ಸೂಚನೆ ನೀಡಿದೆ. ಕೆಜಿಎಫ್​ ಕ್ಷೇತ್ರದಲ್ಲಿ ಬಿಇಎಂಎಲ್​ಗೆ ಕೊಟ್ಟಿದ್ದ 1,870 ಎಕರೆ ಪೈಕಿ ಬಾಕಿ ಇರುವ 973 ಎಕರೆ ಭೂಮಿಯನ್ನು ಸರ್ಕಾರಕ್ಕೆ ವಾಪಸ್ ಪಡೆಯುವ ಪ್ರಕಿಯೆ ಮೂರು ವರ್ಷದಿಂದ ನಡೆಯುತ್ತಿದೆ. ಹೀಗಾದರೆ ನಮ್ಮ ಕ್ಷೇತ್ರದ ಜನತೆಯ ಪಾಡೇನು ಎಂದು ಪ್ರಶ್ನಿಸಿದರು. ಕೈಗಾರಿಕೆಯಿದ್ದ ಸ್ಥಳದಲ್ಲಿ ಒಂದು ಲಕ್ಷ ಜನರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಅದು ಕೆಜಿಎಫ್ ಗಣಿಗೆ ಸೇರಿದ ಜಾಗ. ಕಂದಾಯ ಇಲಾಖೆಯಿಂದ ನಮ್ಮ ಇಲಾಖೆಗೆ ವರ್ಗಾವಣೆ ಆಗಬೇಕಿತ್ತು. ಇದಕ್ಕೆ ಸಂಬಂಧಿಸಿದಂತೆ ಕೆಐಎಡಿಬಿ ಜೊತೆಗೆ ಈಗಾಗಲೇ ಚರ್ಚಿಸಿದ್ದೇನೆ ಎಂದರು.

ಮಧ್ಯಪ್ರವೇಶ ಮಾಡಿದ ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ, ಜಮೀನು ಕಂದಾಯ ಇಲಾಖೆಯಲ್ಲಿದೆ, ಬೇರೆ ಕಡೆ ಇಲ್ಲ. ನಾನೇ ಕೈಗಾರಿಕಾ ಸಚಿವ ಇದ್ದಾಗ ಸಾವಿರಾರು ಎಕರೆ ಕಂದಾಯ ಭೂಮಿ ಕೆಐಎಡಿಬಿಗೆ ವರ್ಗಾವಣೆ ಮಾಡಿದ್ದೆ. ಭೂಮಿ ಬೆಲೆ ಬೆಂಗಳೂರು ಸುತ್ತಮುತ್ತ ಮೂರ್ನಾಲ್ಕು ಕೋಟಿ ಇದೆ. ಯಾರು ಬಂದು ಬಂಡವಾಳ ಹಾಕಿ ಕೈಗಾರಿಕೆ ಮಾಡ್ತಾರೆ? ಕೆಜಿಎಫ್ ಇಲ್ಲಿಂದ 70 ಕಿಮೀ ಇದೆ. ಕೈಗಾರಿಕೆಗಳಿಗೆ ಜಾಗ ಕೊಟ್ಟರೆ ಸಾಕಷ್ಟು ಜನರಿಗೆ ಉದ್ಯೋಗ ಸಿಗಲಿದೆ ಎಂದರು. ಆ ದಿಕ್ಕಿನಲ್ಲಿ ಕಂದಾಯ ಸಚಿವರ ಜೊತೆಗೆ ಚರ್ಚಿಸಿ ಶೀಘ್ರ ತೀರ್ಮಾನ ಮಾಡಬೇಕು. ಸಿಎಂ ಸಹ ಇಲ್ಲೇ ಇದ್ದಾರೆ ಎಂದರು.

ದೇಶಪಾಂಡೆ ಮಾತಿಗೆ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಬಿಇಎಂಎಲ್​ನ 900 ಎಕರೆ ಭೂಮಿಯನ್ನು ಕಂದಾಯದಿಂದ ಕೈಗಾರಿಕೆಗೆ ನೀಡಿ ಅದನ್ನು ಕೆಐಎಡಿಬಿ ಮೂಲಕ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಇದು. ಬೆಂಗಳೂರು ಸುತ್ತಮುತ್ತ ಜಮೀನು ಸಿಗುವುದು ಕಷ್ಟ. ಕೆಐಎಡಿಬಿ ಮೂಲಕ ವಶಪಡಿಸಿಕೊಳ್ಳಲು ಹೋದರೆ ದುಬಾರಿ ಆಗುತ್ತದೆ. ಕೈಗಾರಿಕೆ ಸ್ಥಾಪನೆ ಮಾಡುವವರಿಗೆ ಅದರ ಹೊರೆ ಬೀಳುತ್ತದೆ. ಕೆಜಿಎಫ್ ನಗರವು ಬೆಂಗಳೂರಿನ ಹತ್ತಿರದಲ್ಲಿಯೇ ಇದ್ದರೂ ಅಲ್ಲಿ ಕೈಗಾರಿಕಾ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿಲ್ಲ. ಚಿನ್ನದ ಗಣಿ ಸ್ಥಗಿತಗೊಂಡ ಮೇಲೆ ನಿರುದ್ಯೋಗ ಹೆಚ್ಚಾಗಿದೆ. ಕೋಲಾರ ಮೈನ್ಸ್ ನಿಂತ ಮೇಲೆ ಉದ್ಯೋಗ ಕೊರತೆ ಸೃಷ್ಟಿಯಾಗಿದೆ. ಈಗಾಗಲೇ ಕೈಗಾರಿಕಾ ಸಚಿವರು ಮತ್ತು ಶಾಸಕರು ಸಮಸ್ಯೆಯನ್ನು ಗಮನಕ್ಕೆ ತಂದಿದ್ದಾರೆ ಎಂದರು.

ಬಿಇಎಂಎಲ್ ಭೂಮಿಯನ್ನು ಕಂದಾಯ ಇಲಾಖೆಯಿಂದ ಕೈಗಾರಿಕೆಗೆ ವರ್ಗಾವಣೆ ಮಾಡಿ ಉದ್ಯೋಗ ಸಿಗುವಂತೆ ಮಾಡುತ್ತೇನೆ. ಕಳೆದ ಬಜೆಟ್​ನಲ್ಲಿ ಕೈಗಾರಿಕಾ ಟೌನ್​ಶಿಪ್ ಬಗ್ಗೆ ಭರವಸೆ ನೀಡಿದ್ದೇವೆ. ಕೆಜಿಎಫ್​ನಲ್ಲಿ ಖಂಡಿತವಾಗಿಯೂ ಸಮಗ್ರ ಕೈಗಾರಿಕಾ ಟೌನ್​ಶಿಪ್ ನಿರ್ಮಿಸುತ್ತೇವೆ ಎಂದು ಹೇಳಿದರು.

ಕಲಬುರ್ಗಿಗೆ ಸಿಎಂ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ (ಸೆ 17) ಕಲಬುರ್ಗಿಗೆ ತೆರಳಲಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಎಚ್ಎಎಲ್​ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಪ್ರಯಾಣ ಆರಂಭಿಸುವ ಅವರು, ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪೊಲೀಸ್ ಇಲಾಖೆಯ ನೂತನ ಕಟ್ಟಡ ಉದ್ಘಾಟನೆ, ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯನ್ನು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಎಂದು ಮರುನಾಮಕರಣ ಮಾಡುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ. ಸಂಜೆ 4.30ಕ್ಕೆ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

Published On - 12:39 pm, Fri, 16 September 22