KSRTC ಸಿಬ್ಬಂದಿಗೆ ಗುಡ್ ನ್ಯೂಸ್: ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆಗೆ ಸಚಿವ ಶ್ರೀರಾಮುಲು ಸಮ್ಮತಿ
ಆದಷ್ಟೂ ಬೇಗ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಮಾಡುತ್ತೇವೆ ಎಂದು ಸಚಿವ ಶ್ರೀರಾಮುಲು ಹೇಳಿದರು
ಬೆಂಗಳೂರು: ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಬದ್ಧವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ವಾಯವ್ಯ ಕರ್ನಾಟಕ ಸಾರಿಗೆ ನಿಗಮ (NWKRTC), ಈಶಾನ್ಯ ಕರ್ನಾಟಕ ಸಾರಿಗೆ ನಿಗಮ (NEKRTC) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಿಗಮಗಳ ನಾಲ್ವರು ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಈ ಸಂಬಂಧ ಸಮಿತಿ ರಚಿಸಲಾಗಿದೆ. ಸಮಿತಿಯ ವರದಿಯು ಸಲ್ಲಿಕೆಯಾದ ನಂತರ ಸರ್ಕಾರವು ಅಗತ್ಯ ತೀರ್ಮಾನ ತೆಗೆದುಕೊಳ್ಳಲಿದೆ. ಆದಷ್ಟೂ ಬೇಗ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರ ಪ್ರಶ್ನೆಗೆ ಉತ್ತರಿಸುವಾಗ ಸಚಿವ ಶ್ರೀರಾಮುಲು ಹೇಳಿದರು. ಸಾರಿಗೆ ಇಲಾಖೆಯಲ್ಲಿ ಮತ್ತು ಸಾರಿಗೆ ನಿಗಮಗಳಲ್ಲಿ ಹಲವು ಸಮಸ್ಯೆಗಳಿವೆ. ಬಸ್ ದರಗಳನ್ನು ಹೆಚ್ಚಿಸಲು ನಮಗೆ ಇನ್ನೂ ಸಾಧ್ಯವಾಗಿಲ್ಲ ಎಂದು ನುಡಿದರು.
ಕಳೆದ ನಾಲ್ಕು ವರ್ಷಗಳಿಂದ ಸಾರಿಗೆ ನೌಕರರ ವೇತನ ವೇತನ ಪರಿಷ್ಕರಣೆ ಆಗಿಲ್ಲ. ಕೆಎಸ್ಆರ್ಟಿಸಿ ಮತ್ತು ಇತರ ನಿಗಮಗಳ ಹಲವು ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಸರ್ಕಾರವೇ ಪರಿಹಾರ ಒದಗಿಸಬೇಕು. ಸಾರಿಗೆ ಇಲಾಖೆಯ ಬಸ್ಗಳಿಗೆ ಖಾಸಗಿ ಬಂಕ್ಗಳಿಂದ ಡೀಸೆಲ್ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಇದು ಬೇಸರದ ಸಂಗತಿ ಎಂದು ಅವರು ಹೇಳಿದರು.
ಸದಸ್ಯರ ಆಕ್ಷೇಪಕ್ಕೆ ಉತ್ತರಿಸಿದ ಸಚಿವ ಶ್ರೀರಾಮುಲು, ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರವು ಬದ್ದವಾಗಿವೆ. ನಾಲ್ವರು ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಸಮಿತಿಯು ವರದಿ ಸಲ್ಲಿಸಿದ ಬಳಿಕ ಈ ಬಗ್ಗೆ ನಿರ್ಧರಿಸುತ್ತೇವೆ. 2016ರ ನಂತರ ಸಾರಿಗೆ ನಿಗಮಗಳಲ್ಲಿ ವೇತನ ಪರಿಷ್ಕರಣೆ ಆಗಿಲ್ಲ. ಇಲಾಖೆಯಲ್ಲಿ ಹಲವು ಸಮಸ್ಯೆಗಳಿವೆ. ಬಸ್ ದರ ಹೆಚ್ಚಳ ಮಾಡುವ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಆದಷ್ಟು ಬೇಗ ವೇತನ ಪರಿಷ್ಕರಣೆ ವಿಚಾರ ಇತ್ಯರ್ಥ ಮಾಡುತ್ತೇವೆ. ಸರ್ಕಾರದಿಂದ ನಿಗಮಗಳಿಗೆ ಈವರೆಗೆ ₹ 16 ಸಾವಿರ ಕೋಟಿ ಸಹಾಯಧನ ಲಭ್ಯವಾಗಿದೆ ಎಂದು ತಿಳಿಸಿದರು.
ಐಷಾರಾಮಿ ಕಾರುಗಳ ತೆರಿಗೆ ವಂಚನೆ ಕುರಿತು ಸದಸ್ಯ ಸಿ.ಎಸ್.ಮಂಜೇಗೌಡ ಸದನದಲ್ಲಿ ಪ್ರಶ್ನೆ ಕೇಳಿದರು. ‘ಐಷಾರಾಮಿ ಕಾರುಗಳು ಜೀವಿತಾವಧಿ ತೆರಿಗೆ ಪಾವತಿಸಿಕೊಳ್ಳುವ ವಿಚಾರದಲ್ಲಿ ಆರ್ಟಿಒ ಕಚೇರಿಗಳು ಅಕ್ರಮ ಎಸಗುತ್ತಿವೆ. ನೂರಾರು ಕೋಟಿ ವಂಚನೆ ಬಗ್ಗೆ ಸರ್ಕಾರ ಸೂಕ್ತ ತನಿಖೆಗೆ ಆದೇಶಿಸಿಲ್ಲ’ ಎಂದು ಆಕ್ಷೇಪಿಸಿದರು.
ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಶ್ರೀರಾಮಲು, ತೆರಿಗೆ ವಂಚನೆ ವಿಚಾರವು ಸರ್ಕಾರದ ಗಮನಕ್ಕೆ ಬಂದಿದೆ. ಈವರೆಗೆ 227 ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಧಿಕಾರಿಗಳಿಂದ ಈಗಾಗಲೇ ವರದಿ ಕೇಳಿದ್ದೇನೆ. ಆಡಿಟ್ ಮಾಡಿಸಿ ವರದಿ ತರಿಸಿಕೊಂಡು ಅಗತ್ಯ ಕಂಡು ಬಂದರೆ ಸಿಒಡಿ ತನಿಖೆಗೆ ವಹಿಸುತ್ತೇನೆ. ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಈ ಉತ್ತರವನ್ನು ಮಂಜೇಗೌಡ ಒಪ್ಪಲಿಲ್ಲ. ನಾನು ಕಳೆದ ಬಾರಿಯೂ ಈ ಬಗ್ಗೆ ಪ್ರಶ್ನೆ ಕೇಳಿದ್ದೆ. ಅದರೆ ಸರ್ಕಾರವು ಯಾವುದೇ ರೀತಿ ಕ್ರಮ ತೆಗೆದುಕೊಂಡಿಲ್ಲ. ದಾಖಲೆ ಕೊಟ್ಟರೂ ಯಾವುದೇ ಕ್ರಮ ಆಗಿಲ್ಲ. ಶೇ 40ರ ಕಮಿಷನ್ ಬಗ್ಗೆ ಮಾತನಾಡಿದಾಗಲೂ ದಾಖಲೆ ಕೇಳಿದ್ದೀರಿ’ ಎಂದು ದೂರಿದರು. ‘ಆಡಿಟ್ ಮಾಡದೆ ತನಿಖೆಗೆ ವಹಿಸಲು ಆಗುವುದಿಲ್ಲ. ಕೂಡಲೇ ಆಡಿಟ್ ಮಾಡಿಸಿ ಸಿಒಡಿ ತನಿಖೆಗೆ ಆದೇಶ ಮಾಡುತ್ತೇವೆ. ಯಾರನ್ನೂ ಉಳಿಸುವುದಿಲ್ಲ’ ಎಂದು ಭರವಸೆ ನೀಡಿದರು.
Published On - 1:32 pm, Fri, 16 September 22