ಬೆಂಗಳೂರು: ಬಿಬಿಎಂಪಿ(BBMP) ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ನಡುವಿನ ಜಮೀನು ವಿವಾದದಲ್ಲಿ ಸಿಲುಕಿರುವ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವುದಾಗಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್(Zameer Ahmed) ಹೇಳಿದ್ದಾರೆ.
ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಈದ್ಗಾ ಮೈದಾನದಲ್ಲಿ ನಾನೇ ರಾಷ್ಟ್ರಧ್ವಜಾರೋಹಣ ಮಾಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಸೋಮವಾರ ಹೇಳಿಕೊಂಡಿದ್ದಾರೆ. ಚಾಮರಾಜಪೇಟೆಯ ಈದ್ಗಾ ಮೈದಾನವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ವಕ್ಫ್ ಮಂಡಳಿ ನಡುವೆ ಈದ್ಗಾ ಮೈದಾನ ಯಾರದೆಂಬ ಭೂ ಮಾಲೀಕತ್ವದ ವಿವಾದದಲ್ಲಿ ಸಿಲುಕಿಕೊಂಡಿದೆ. ಇದರ ನಡುವೆ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲು ಶಾಸಕ ಜಮೀರ್ ಮುಂದಾಗಿದ್ದಾರೆ. ಆದರೆ ಕೆಲ ಹಿಂದೂ ಪರ ಸಂಘಟನೆಗಳು ಈದ್ಗಾ ಮೈದಾನದಲ್ಲಿ ಧ್ವಜಾರೋಹಣವನ್ನು ಮಾಡಲು ಅವಕಾಶ ಕೊಡುವಂತೆ ಬಿಬಿಎಂಪಿಗೆ ಒತ್ತಾಯಿಸಿದ್ದಾರೆ.
“ನಾವು ಇಲ್ಲಿ ಧ್ವಜಾರೋಹಣ ಮಾಡುತ್ತೇವೆ. ಮಾಧ್ಯಮಗಳು ಸತ್ಯವನ್ನು ತಿರುಚಿ ಸಮಸ್ಯೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಆಗಸ್ಟ್ 15, ನವೆಂಬರ್ 1 ಮತ್ತು ಜನವರಿ 26 ರಂದು ನಾವು ಇಲ್ಲಿ ಧ್ವಜಾರೋಹಣ ಮಾಡುತ್ತೇವೆ” ಎಂದು ಶಾಸಕ ಜಮೀರ್ ಅಹ್ಮದ್ ಖಾಸಗಿ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಹಿಂದೆ ಕಂದಾಯ ಸಚಿವ ಆರ್ ಅಶೋಕ ಅವರು ಈ ಜಮೀನು ಕಂದಾಯ ಇಲಾಖೆಗೆ ಸೇರಿದ್ದು, ಯಾರೂ ರಾಷ್ಟ್ರಧ್ವಜ ಹಾರಿಸಲು ಅನುಮತಿ ಕೇಳಿಲ್ಲ ಎಂದು ಹೇಳಿದ್ದರು. ಸದ್ಯ ಈಗ ಮೈದಾನದಲ್ಲಿ ನಾವು ರಾಷ್ಟ್ರಧ್ವಜಾರೋಹಣ ಮಾಡುತ್ತೇವೆ ಎಂದು ಕೆಲವು ಸಂಘಟನೆಗಳು ಹೇಳುತ್ತಿದ್ದು ಇದರ ನಡುವೆ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ತಾವೇ ಧ್ವಜಾರೋಹಣ ಮಾಡಲು ಮುಂದಾಗಿದ್ದಾರೆ.
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶನ ಹಬ್ಬ ಆಚರಣೆಗೆ ಅವಕಾಶ ಇಲ್ಲ
ಇನ್ನು ಶಾಸಕ ಜಮೀರ್ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶನ ಹಬ್ಬ ಆಚರಣೆಗೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ತಿರುಗೇಟು ಕೊಟ್ಟಿದ್ದು ಸವಾಲು ಹಾಕಿದ್ದಾರೆ. ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಜಮೀರ್ ಅಹ್ಮದ್ ವಿರೋಧ ಹಿನ್ನೆಲೆ ಈದ್ಗಾ ಮೈದಾನ ಜಮೀರ್ ಅಹ್ಮದ್ ಪಿತ್ರಾರ್ಜಿತ ಆಸ್ತಿ ಅಲ್ಲ. ವಕ್ಫ್ ಬೋರ್ಡ್, ಮುಸ್ಲಿಂರ ಆಸ್ತಿ ಅಲ್ಲ. ನಾವು ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ. ತಾಕತ್ ಇದ್ದರೆ ತಡೆಯಲಿ ನೋಡೋಣ ಅಂತಾ ಜಮೀರ್ ಅಹ್ಮದ್‌ಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಸವಾಲು ಹಾಕಿದ್ದಾರೆ.
Published On - 8:45 pm, Mon, 8 August 22