Kamakshipalya: ಯುವತಿ ಮೇಲೆ ಆ್ಯಸಿಡ್ ದಾಳಿ; 3 ತಿಂಗಳ ನಂತರ ಪೊಲೀಸರಿಂದ ದೋಷಾರೋಪ ಪಟ್ಟಿ
Chargesheet: ದೋಷಾರೋಪ ಪಟ್ಟಿಯಲ್ಲಿ ಒಟ್ಟು 92 ಸಾಕ್ಷಿಗಳನ್ನು ಪೊಲೀಸರು ಹೆಸರಿಸಿದ್ದಾರೆ. ಇದರೊಂದಿಗೆ ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನೂ ಐಪಿಸಿ 164ರ ಅಡಿಯಲ್ಲಿ ದಾಖಲಿಸಲಾಗಿದೆ.
ಬೆಂಗಳೂರು: ನಗರದ ಕಾಮಾಕ್ಷಿಪಾಳ್ಯದಲ್ಲಿ ಯುವತಿ ಮೇಲೆ ನಡೆದಿದ್ದ ಆ್ಯಸಿಡ್ ದಾಳಿ (Acid Attack) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ ಮೂರು ತಿಂಗಳ ನಂತರ 13ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (Chargesheet) ಸಲ್ಲಿಸಿದ್ದಾರೆ. ಪ್ರಾಥಮಿಕ ಚಾರ್ಜ್ಶೀಟ್ ಒಟ್ಟು 770 ಪುಟಗಳಿವೆ. ದೋಷಾರೋಪ ಪಟ್ಟಿಯಲ್ಲಿ ಒಟ್ಟು 92 ಸಾಕ್ಷಿಗಳನ್ನು ಪೊಲೀಸರು ಹೆಸರಿಸಿದ್ದಾರೆ. ಇದರೊಂದಿಗೆ ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನೂ ಐಪಿಸಿ 164ರ ಅಡಿಯಲ್ಲಿ ದಾಖಲಿಸಲಾಗಿದೆ.
ಘಟನೆಯ ಪ್ರತ್ಯಕ್ಷದರ್ಶಿಗಳು ಐಪಿಸಿ 164ರ ಅಡಿಯಲ್ಲಿ ವಿಚಾರಣಾ ನ್ಯಾಯಾಧೀಶರ ಹೊರತಾದ ಪ್ರತ್ಯೇಕ, ಸ್ವತಂತ್ರ ನ್ಯಾಯಾಧೀಶರ ಎದುರು ಸ್ವಯಂ ಪ್ರೇರಣೆಯಿಂದ ಸಾಕ್ಷಿಗಳು ತಮ್ಮ ಹೇಳಿಕೆ ದಾಖಲಿಸುತ್ತಾರೆ. ಈ ಕಲಂ ಅಡಿಯಲ್ಲಿ ಸಾಕ್ಷಿ ನುಡಿಯುವ ಪ್ರಕ್ರಿಯೆ ಗೌಪ್ಯವಾಗಿರುತ್ತದೆ. ಮಾತ್ರವಲ್ಲ ವಿಡಿಯೊ ಚಿತ್ರೀಕರಣದ ಮೂಲಕವೂ ದಾಖಲಾಗುತ್ತದೆ. ಕಾನೂನು ಪ್ರಕ್ರಿಯೆಯಲ್ಲಿ ಐಪಿಸಿ 164 ಅಡಿಯಲ್ಲಿ ದಾಖಲಿಸುವ ಸಾಕ್ಷಿಗೆ ತನ್ನದೇ ಆದ ಮಹತ್ವವಿದೆ.
ಯುವತಿಯ ಮೇಲೆ ಆ್ಯಸಿಡ್ ಹಾಕಿದ ನಾಗೇಶ್ ನಂತರ ಗಾಬರಿಯಿಂದ ಓಡಿಹೋದ. ಇಡೀ ಘಟನೆಯನ್ನು ಇವರು ನೋಡಿದ್ದಾರೆ ಎನ್ನುವ ಕಾರಣಕ್ಕೆ ಐಪಿಸಿ 164ರ ಅನ್ವಯ ಸಾಕ್ಷಿ ದಾಖಲಿಸಲು ಪೊಲೀಸರು ವಿನಂತಿಸಿದ್ದರು. ವಿಧಿವಿಜ್ಞಾನ ಪ್ರಯೋಗಾಲಯದ (Forensic Science Laboratory – FSL) ತಜ್ಞರು ನೀಡಿರುವ ವರದಿಯನ್ನೂ ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಪೊಲೀಸರ ಎದುರು ತಪ್ಪೊಪ್ಪಿಕೊಂಡ ನಾಗೇಶ್
Karnataka | A 770-page charge sheet filed before ACMM court in the three-month-old incident of acid attack on a girl in Kamakshipalya in Bengaluru. 92 witnesses mentioned in the charge sheet. Police had arrested the culprit from Tamil Nadu.
— ANI (@ANI) August 9, 2022
ಯುವತಿಯ ಮೇಲೆ ಆ್ಯಸಿಡ್ ಹಾಕಿದ ನಂತರ ಆರೋಪಿ ನಾಗೇಶ್ ತನ್ನ ಅಣ್ಣನಿಗೆ ಕಾಲ್ ಮಾಡಿ, ಕೃತ್ಯದ ಬಗ್ಗೆ ವಿವರಿಸಿದ್ದ. ಕಾಲ್ ರೆಕಾರ್ಡ್ ವಿವರವನ್ನು ನಾಗೇಶ್ ಅಣ್ಣ ಪೊಲೀಸರಿಗೆ ಕೊಟ್ಟಿದ್ದರು. ಕಾಲ್ ರೆಕಾರ್ಡ್ನ ಆಡಿಯೊ ಫೈಲ್ ಹಾಗೂ ಆರೋಪಿ ನಾಗೇಶ್ನ ಧ್ವನಿ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸರು ಕಳುಹಿಸಿಕೊಟ್ಟಿದ್ದರು. ಧ್ವನಿ ಮಾದರಿ ಹಾಗೂ ಕಾಲ್ರೆಕಾರ್ಡ್ನ ಆಡಿಯೊ ಫೈಲ್ ಪರಿಶೀಲಿಸಿದ್ದ ವಿಜ್ಞಾನಿಗಳು ನಾಗೇಶ್ ಧ್ವನಿ ಎಂದು ದೃಢಪಡಿಸಿದ್ದರು.
ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಇದು ಪ್ರಕರಣದ ಮುಖ್ಯ ಸಾಕ್ಷಿಯಾಗುವ ಸಾಧ್ಯತೆಯಿದೆ. ಯುವತಿಗೆ ಆ್ಯಸಿಡ್ ಹಾಕುವ ಹಿಂದಿನ ದಿನವೂ ನಾಗೇಶ್ ಯುವತಿ ಕಚೇರಿ ಬಳಿ ಬಂದಿದ್ದ. ಪೊಲೀಸರು ವಶಪಡಿಸಿಕೊಂಡಿರುವ ಸಿಸಿಟಿವಿ ದೃಶ್ಯಗಳಲ್ಲಿಯೂ ಈ ವಿವರ ಇದೆ. ಪೊಲೀಸರು ಚಾರ್ಜ್ಶೀಟ್ನಲ್ಲಿ ಈ ಅಂಶವನ್ನೂ ಉಲ್ಲೇಖಿಸಿದ್ದಾರೆ. ಸಂತ್ರಸ್ತೆಯ ಹೇಳಿಕೆಯನ್ನೂ ಕಾಮಾಕ್ಷಿಪಾಳ್ಯ ಪೊಲೀಸರು ದಾಖಲಿಸಿ, ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.
Published On - 8:33 am, Tue, 9 August 22