ಬೆಂಗಳೂರು: 100 ದಿನಗಳಲ್ಲಿ ಔಟರ್ ರಿಂಗ್‌ ರೋಡ್ ಟ್ರಾಫಿಕ್​ ಸಮಸ್ಯೆಗೆ ಮುಕ್ತಿ; ಡಿಸಿಎಂ ಭರವಸೆ

ಕಾರ್ಪೊರೇಟ್‌ ಕಂಪನಿಗಳ ಸಮಸ್ಯೆಗಳನ್ನು ಆಲಿಸಲು ಮತ್ತು ಪರಿಹರಿಸಲು ಸರ್ಕಾರ ಸಿದ್ದವಿದೆ. ನಮ್ಮ ಸರ್ಕಾರವು ಜನರ ಸಮಯವನ್ನು ರಸ್ತೆಗಳಲ್ಲಿ ವ್ಯರ್ಥ ಮಾಡಲು ಬಿಡುವುದಿಲ್ಲ. ನಗರದ ಆದಾಯದ ಐದನೇ ಒಂದು ಭಾಗವು ಹೊರ ವರ್ತುಲ ರಸ್ತೆಯ ಕೈಗಾರಿಕೆಗಳಿಂದ ಬರುತ್ತದೆ. ಮತ್ತು ಅವುಗಳ ಪ್ರಾಮುಖ್ಯತೆಯನ್ನು ನಾವು ತಿಳಿದಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಹೇಳಿದರು.

ಬೆಂಗಳೂರು: 100 ದಿನಗಳಲ್ಲಿ ಔಟರ್ ರಿಂಗ್‌ ರೋಡ್ ಟ್ರಾಫಿಕ್​ ಸಮಸ್ಯೆಗೆ ಮುಕ್ತಿ; ಡಿಸಿಎಂ ಭರವಸೆ
ಡಿಸಿಎಂ ಡಿಕೆ ಶಿವಕುಮಾರ್​
Follow us
ವಿವೇಕ ಬಿರಾದಾರ
|

Updated on:Oct 08, 2023 | 2:46 PM

ಬೆಂಗಳೂರು ಅ.08: ಮುಂದಿನ 100 ದಿನಗಳಲ್ಲಿ ಹೊರ ವರ್ತುಲ ರಸ್ತೆಯಲ್ಲಿನ (ORR) ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಯೋಜನೆ ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ (DK Shivakumar) ಕಾರ್ಪೊರೇಟ್‌ ಕಂಪನಿಗಳಿಗೆ ಭರವಸೆ ನೀಡಿದರು. ಶನಿವಾರ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಔಟರ್ ರಿಂಗ್‌ ರೋಡ್ ಕಂಪನಿಗಳ ಸಂಘ (ORRCA) ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 27 ರಂದು 17 ಕಿಮೀ ವ್ಯಾಪ್ತಿಯಲ್ಲಿ ಅಭೂತಪೂರ್ವ ಟ್ರಾಫಿಕ್ ಅಡಚಣೆ ಉಂಟಾಗಿತ್ತು. ಇದು ಸಹಜ ಸ್ಥಿತಿಗೆ ಬರಲು ಸುಮಾರು ಐದು ಗಂಟೆಗಳನ್ನು ತೆಗೆದುಕೊಂಡಿತು.

ಕಾರ್ಪೊರೇಟ್‌ ಕಂಪನಿಗಳ ಸಮಸ್ಯೆಗಳನ್ನು ಆಲಿಸಲು ಮತ್ತು ಪರಿಹರಿಸಲು ಸರ್ಕಾರ ಸಿದ್ದವಿದೆ. ನಮ್ಮ ಸರ್ಕಾರವು ಜನರ ಸಮಯವನ್ನು ರಸ್ತೆಗಳಲ್ಲಿ ವ್ಯರ್ಥ ಮಾಡಲು ಬಿಡುವುದಿಲ್ಲ. ನಗರದ ಆದಾಯದ ಐದನೇ ಒಂದು ಭಾಗವು ಹೊರ ವರ್ತುಲ ರಸ್ತೆಯ ಕೈಗಾರಿಕೆಗಳಿಂದ ಬರುತ್ತದೆ. ಮತ್ತು ಅವುಗಳ ಪ್ರಾಮುಖ್ಯತೆಯನ್ನು ನಾವು ತಿಳಿದಿದ್ದೇವೆ. ನಿಮಗೆ, ನಿಮ್ಮ ನೌಕರರಿಗೆ ಮತ್ತು ಕ್ಷೇತ್ರದ ನಿವಾಸಿಗಳಿಗೆ ಯಾವುದೇ ತೊಂದರೆಯಾಗದಂತೆ ಸಮಸ್ಯೆ ಬಗೆಹರಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಮಹದೇವಪುರ ವಲಯದ ಒಆರ್‌ಆರ್‌ನಿಂದ ಭೋಗನಹಳ್ಳಿ, ಗುಂಜೂರು ಮತ್ತು ವರ್ತೂರು ಮೂಲಕ ಹೊಸ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್) ಯನ್ನು ಸಂಪರ್ಕಿಸಲು ಸುಮಾರು 5.6 ಕಿಮೀ ಉದ್ದದ 45 ಮೀಟರ್ ಅಗಲದ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಈ ರಸ್ತೆಯ 4 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಾಗೂ ಅರಣ್ಯ ಇಲಾಖೆಯಿಂದ ಭೂಮಿಯನ್ನು ಪಡೆಯಬೇಕು. ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಂಡು ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್​ ಸಮಸ್ಯೆ ನಿವಾರಣೆಗೆ ಹೊಸ ಪ್ಲ್ಯಾನ್​, ಟನಲ್ ನಿರ್ಮಾಣಕ್ಕೆ ನಿರ್ಧಾರ: ಡಿಸಿಎಂ ಡಿಕೆ ಶಿವಕುಮಾರ್

ಈಗಾಗಲೇ ಆರರಿಂದ ಎಂಟು ಅಧಿಕ ಟ್ರಾಫಿಕ್ ವಲಯಗಳನ್ನು ಗುರುತಿಸಲಾಗಿದ್ದು, ಟ್ರಾಫಿಕ್ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಪರಿಹರಿಸಲಾಗುವುದು. ಇನ್ನು ಮೂರು ತಿಂಗಳಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ಸಂಚಾರ ದಟ್ಟಣೆ ಉಂಟು ಮಾಡುತ್ತಿರುವ ಅನಧಿಕೃತ ಅಂಗಡಿಗಳನ್ನು ಗುರುತಿಸಿ ತೆರವುಗೊಳಿಸಲಾಗುವುದು. ಅಲ್ಲದೆ ರಾಜಾಕಾಲುವೆ ಒತ್ತುವರಿಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ಅವರು, ಅಧಿಕಾರಿಗಳು ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳಲು ಮುಕ್ತರಾಗಿದ್ದಾರೆ ಎಂದರು.

ತೆರಿಗೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾಗರಿಕರು ತಮ್ಮ ಆಸ್ತಿಗೆ ಅನುಗುಣವಾಗಿ ತೆರಿಗೆಯನ್ನು ಸರಿಯಾಗಿ ಪಾವತಿಸಿದರೆ ಸಾಕು. ಸದ್ಯಕ್ಕೆ ಯಾವುದೇ ಹೊಸ ತೆರಿಗೆ ವಿಧಿಸುವ ಬಗ್ಗೆ ಸರ್ಕಾರ ಯೋಚಿಸಿಲ್ಲ. ಜನರು ಮತ್ತು ವ್ಯಾಪಾರಸ್ಥರು ತಮ್ಮ ಆಸ್ತಿಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕು ಎಂದು ಸೂಚಿಸಿದರು.

ಗ್ರಾಮೀಣ ಶಿಕ್ಷಣಕ್ಕೆ ಸಿಎಸ್‌ಆರ್ ಹಣ ಖರ್ಚು ಮಾಡಿ

ನಗರದಲ್ಲಿನ ಐಟಿ ಕಂಪನಿಗಳು ಸೇರಿದಂತೆ ಇತರ ವ್ಯಾಪಾರ ಮಾಲೀಕರು ತಮ್ಮ ಸಿಎಸ್ಆರ್ ಹಣವನ್ನು ಗ್ರಾಮೀಣ ಶಿಕ್ಷಣಕ್ಕಾಗಿ ಖರ್ಚು ಮಾಡಬೇಕು. ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಗ್ರಾಮೀಣ ಪ್ರದೇಶದ ಶಾಲೆಗಳತ್ತ ಗಮನಹರಿಸಬೇಕು. ಮಕ್ಕಳು ಶಿಕ್ಷಣಕ್ಕಾಗಿ ಗ್ರಾಮೀಣ ಪ್ರದೇಶದಿಂದ ನಗರ ಕೇಂದ್ರಗಳಿಗೆ ಬರುತ್ತಾರೆ. ಆದ್ದರಿಂದ ಕಂಪನಿಗಳು ಗ್ರಾಮೀಣ ಪ್ರದೇಶದ ಶಾಲೆಗಳತ್ತ ಗಮನಹರಿಸಬೇಕು ಎಂದು ಕಾರ್ಪೊರೇಟ್‌ಗಳಿಗೆ ಮನವಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:46 pm, Sun, 8 October 23