ಬೆಂಗಳೂರು: ರಾಜ್ಯ ರಾಜ್ಯಧಾನಿಯಲ್ಲಿ ಇಂದು ಹಲವೆಡೆ ಗುಡುಗು ಸಹಿತ ಮಳೆ (Rain)ಯ ಅಬ್ಬರ ಶುರುವಾಗಿದೆ. ಬೆಂಗಳೂರು ನಗರದ ಹಲವೆಡೆ ಧಾರಾಕಾರವಾಗಿ ವರುಣ ಆರ್ಭಟ ಶುರುವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಡಿವಾಳ, ಕೋರಮಂಗಲ, ಸರ್ಜಾಪುರ, ಮೆಜೆಸ್ಟಿಕ್, ಮೈಸೂರು ಬ್ಯಾಂಕ್, ಕಾರ್ಪೊರೇಷನ್, ಶಾಂತಿನಗರ, ಕಬ್ಬನ್‌ಪಾರ್ಕ್, ಎಂ.ಜಿ.ರಸ್ತೆ ರಸ್ತೆಯಲ್ಲಿ ಆಲಿಕಲ್ಲು ಮಳೆಯಿಂದ ಬೈಕ್ ಸವಾರರು ಮತ್ತು ರಸ್ತೆ ಬದಿ ವ್ಯಾಪಾರಿಗಳು ಪರದಾಡುವಂತ್ತಾಗಿದೆ. ಹಲವೆಡೆ ಮಳೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಪರದಾಡುತ್ತಿದ್ದಾರೆ. ಮಳೆಯಿಂದಾಗಿ ರಸ್ತೆಗಳು ಜಾಲಾವೃತಗೊಂಡಿದ್ದು, ಬೈಕ್ ಸವಾರರು ನೀರು ತುಂಬಿದ ರಸ್ತೆಗಳಲ್ಲಿ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ಸಂಜೆಯ ಮಳೆಯಿಂದಾಗಿ ದ್ವಿಚಕ್ರ ವಾಹನ ಸಾವರಿಗೆ ಸಮಸ್ಯೆಯಾಗಿದ್ದು, ಗಾಳಿ ಸಹಿತ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ಹರಿಯುತ್ತಿದೆ. ಮಳೆ ನಿಲ್ಲುವಿಕೆಗಾಗಿ ಕಾಯುತ್ತಾ ಫ್ಲೈ ಒವರ್ ಕೆಳಗೆ ವಾಹಾನ ಸವಾರರು ನಿಂತ್ತಿದ್ದಾರೆ.
ರಾಮನಗರದಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆ ಆರ್ಭಟ ಶುರುವಾಗಿದ್ದು, ಗಾಳಿ ಮಳೆಗೆ ವಿದ್ಯುತ್ ಕಂಬದ ಮೇಲೆ ಬೃಹತ್ ಮರ ಬಿದ್ದಿದೆ. ಮರ ಬಿದ್ದಿದ್ದರಿಂದ 4 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ರಾಮನಗರ ತಾಲೂಕಿನ ಕೂನಮುದ್ದನಹಳ್ಳಿ ಬಳಿ ಅವಾಂತರ ನಡೆದಿದೆ. ರಾಮನಗರ, ಮಾಗಡಿ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಕೋಲಾರದಲ್ಲಿಯೂ ಸಹಿತ ಜೋರು ಮಳೆ ಆಗಿದ್ದು, ಬಿರುಗಾಳಿಗೆ ಮನೆಯ ಶೀಟ್ಗಳು ಹಾರಿಹೋಗಿವೆ. ಕೋಲಾರ ತಾಲ್ಲೂಕು ಬೆಗ್ಲಿಬೆಣಜೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಶ್ರೀರಾಮ್ ಎಂಬುವರಿಗೆ ಸೇರಿದ ಮನೆ, ಲಕ್ಷಾಂತರ ರೂಪಾಯಿ ಮೌಲ್ಯದ ಮನೆಯ ಶೀಟ್ಗಳು ಹಾನಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಟಣಾಪಾಯವಾಗಿಲ್ಲ. ಮಳೆಯಿಂದಾದ ಹಾನಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಆನೇಕಲ್: ಜೋರಾದ ಗಾಳಿ ಮಳೆಗೆ ಮರಗಳು ಧರೆಗುರುಳಿದೆ. ಹೆಬ್ಬಗೋಡಿ, ಅನಂತನಗರ ಹುಸ್ಕೂರು ಎಲ್ಲೆಡೆ ಅನಿರೀಕ್ಷಿತ ಮಳೆಗೆ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ. ಮರ ಬೀಳುವಾಗ ಬಿಲ್ಡಿಂಗ್ತಾಗಿ ಅರ್ಧದಲ್ಲೇ ನಿಂತಿದ್ದು, ಬೆಸ್ಕಾಂ ಕಚೇರಿ ಬಳಿ ವಾಹನ ಸವಾರರು ಬಚಾವ್ ಆಗಿದ್ದಾರೆ. ವಿದ್ಯುತ್ ತಂತಿಗಳ ಮೇಲೆ ಭಾರ ಬಿದ್ದ ಕಾರಣ ಕೆಳಗೆ ಸಾಗುತ್ತಿದ್ದ ಜನ ಬಚಾವ್ ಆಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿನಲ್ಲಿ ಘಟನೆ ನಡೆದಿದೆ.
ಬೆಂಗಳೂರು, ಕೊಡಗು, ಮಲೆನಾಡಿನಲ್ಲಿ ಇಂದು ಭಾರೀ ಮಳೆಯ ಮುನ್ಸೂಚನೆ
ಮೇ 1ರವರೆಗೂ ಕರ್ನಾಟಕದಲ್ಲಿ ಮಳೆ ಮುಂದುವರಿಯಲಿದ್ದು, ಎಲ್ಲಾ ಜಿಲ್ಲೆಗಳಲ್ಲಿಯೂ ವರುಣನ ಆರ್ಭಟ ಹೆಚ್ಚಾಗಲಿದೆ. ಕರ್ನಾಟಕದ ಹೆಚ್ಚಿನ ಪ್ರದೇಶಗಳಲ್ಲಿ ಮಳೆಗಿಂತ ಗುಡುಗು, ಸಿಡಿಲುಗಳ ಆರ್ಭಟ ಜೋರಾಗಿದೆ. ಕರ್ನಾಟಕ ಮಾತ್ರವಲ್ಲದೆ ಇಂದಿನಿಂದ ಈಶಾನ್ಯ ಭಾರತದಲ್ಲಿ ಮಿಂಚು, ಬಿರುಗಾಳಿ ಮತ್ತು ಗುಡುಗು ಸಹಿತ ಮಳೆಯಾಗಲಿದೆ. ಇಂದು ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್-ಮಣಿಪುರ-ಮಿಜೋರಾಂ-ತ್ರಿಪುರಾದಲ್ಲಿ ಲಘು ಮಳೆಯಾಗಲಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಸಾಕಷ್ಟು ವ್ಯಾಪಕ ಮಳೆಯಾಗಲಿದೆ. ಇಂದು ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾದಲ್ಲಿ ಮಿಂಚು ಮತ್ತು ಬಿರುಗಾಳಿ, ಗುಡುಗು ಸಹಿತ ಮಳೆಯಾಗುತ್ತದೆ.
ಉತ್ತರ ಭಾರತದ ಕೆಲವು ಭಾಗಗಳಲ್ಲಿ ಮೇ 4 ಮತ್ತು 7ರ ವೇಳೆಗೆ ಉಷ್ಣ ಅಲೆ ಉಂಟಾಗಲಿದೆ. ಪಂಜಾಬ್, ಹರಿಯಾಣ, ದೆಹಲಿಯಲ್ಲಿ ಬಿರುಗಾಳಿ, ಗುಡುಗು ಮತ್ತು ಮಳೆಯ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ (IMD) ಕೇರಳ, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಮುಂದಿನ 4 ದಿನಗಳವರೆಗೆ ಗುಡುಗು, ಮಿಂಚು ಮತ್ತು ಬಿರುಗಾಳಿಯ ಮುನ್ಸೂಚನೆ ನೀಡಿದೆ.
ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:19 pm, Sun, 1 May 22