
ಬೆಂಗಳೂರು, ಮೇ 26: ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದು 20 ಲಕ್ಷ ನಗದು, 1 ಕೆಜಿ ಚಿನ್ನಾಭರಣ ದೋಚಿಕೊಂಡು ದುಷ್ಕರ್ಮಿ ಪರಾರಿಯಾಗಿದ್ದಾನೆ. ಬೆಂಗಳೂರಿನ (Bengaluru) ಕಾಟನ್ಪೇಟೆ ದರ್ಗಾ ರಸ್ತೆಯಲ್ಲಿನ ಮನೆಯಲ್ಲಿ ಘಟನೆ ನಡೆದಿದೆ. ಬಟ್ಟೆ ವ್ಯಾಪಾರಿ ಪ್ರಕಾಶ್ ಪತ್ನಿ ಲತಾ (40) ಮೃತದುರ್ದೈವಿ. ಲತಾ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಕಾಟನ್ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಂಪತಿ ಮೂಲತಃ ಬೀದರ್ ಜಿಲ್ಲೆ ಕಮಲನಗರದ ಬಳತ್ಕಿ ಗ್ರಾಮದವರು. ಕಳೆದ 30 ವರ್ಷಗಳಿಂದ ಕಾಟನ್ಪೇಟೆಯಲ್ಲಿ ವಾಸವಾಗಿದ್ದಾರೆ. ಪ್ರಕಾಶ್ ಮತ್ತು ಲತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪುತ್ರಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ನಿವೃತ್ತ ಡಿಜಿ,ಐಜಿಪಿ ಓಂಪ್ರಕಾಶ್ ಹತ್ಯೆಗೆ ಕಾರಣ ಬಹಿರಂಗ: ತನಿಖೆಯಲ್ಲಿ ಸಿಕ್ಕ 9 ಕಾರಣಗಳು
ಕುಟುಂಬ ಒಂದು ವರ್ಷದ ಹಿಂದೆಯಷ್ಟೇ ಈ ಕಟ್ಟಡದಲ್ಲಿ ಬಾಡಿಗೆಗೆ ಬಂದಿದ್ದರು. ಪ್ರಕಾಶ್ ಬೆಂಗಳೂರಲ್ಲಿ ಹೋಲ್ಸೇಲ್ ಬಟ್ಟೆ ವ್ಯಾಪಾರಿಯಾಗಿದ್ದಾರೆ. ಎಂದಿನಂತೆ ಪ್ರಕಾಶ್ ಅವರು ಸೋಮವಾರ (ಮೇ26) ಬೆಳಗ್ಗೆ ಅಂಗಡಿಗೆ ಹೋಗಿದ್ದರು. ಇನ್ನು, ಮಗಳು ಕೆಲಸಕ್ಕೆ ಹೋಗಿದ್ದರು. ಮಗ ಕೂಡ ಶಾಲೆಗೆ ಹೋಗಿದ್ದನು. ಹೀಗಾಗಿ, ಮೃತ ಲತಾ ಒಬ್ಬರೇ ಮನೆಯಲ್ಲಿದ್ದರು. ಈ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿ ಲತಾ ಅವರನ್ನು ಹತ್ಯೆ ಮಾಡಿ, ಬಳಿಕ ಮಗಳ ಮದುವೆಗೆಂದು ಖರೀದಿಸಿಟ್ಟಿದ್ದ 1 ಕೆಜಿ ಚಿನ್ನಾಭರಣ ಮತ್ತು 20 ಲಕ್ಷ ರೂ. ಹಣ ಕದ್ದು ಪರಾರಿಯಾಗಿದ್ದಾನೆ. ಮಧ್ಯಾಹ್ನ ಊಟಕ್ಕೆಂದು ಪ್ರಕಾಶ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Published On - 5:59 pm, Mon, 26 May 25