ಮದುವೆ ಹೆಸರಲ್ಲಿ ಯುವತಿಗೆ ವಂಚನೆ ಕೇಸ್​​: ಆರೋಪಿ ಕೃಷ್ಣ ಜೆ. ರಾವ್​​ಗೆ ಹೈಕೋರ್ಟ್​​ ತೀವ್ರ ತರಾಟೆ

ಮದುವೆ ಭರವಸೆ ನೀಡಿ ವಂಚಿಸಿದ ಪ್ರಕರಣದ ಆರೋಪಿ ಕೃಷ್ಣ ಜೆ. ರಾವ್ ಹಾಗೂ ಆತನ ಪೋಷಕರಿಗೆ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದ್ದು, ಮಗು ಕೆಳ ವರ್ಗದ ಕುಟುಂಬದಲ್ಲಿ ಜನಿಸಿದೆ ಎಂಬ ಕಾರಣಕ್ಕೆ ಅದನ್ನು ಕೈಬಿಡುತ್ತಿದ್ದೀರಾ? ಅದನ್ನು ನಾವು ಒಪ್ಪುವುದಿಲ್ಲ. ಪರಸ್ಪರ ಸಮ್ಮತಿಯ ಸಂಬಂಧವಾಗಿದ್ದರೆ ಸಮಸ್ಯೆ ಇರಲಿಲ್ಲ. ಆದರೆ ಆ ಸಂಬಂಧದಿಂದ ಒಂದು ನಿರಪರಾಧಿ ಮಗು ಜನಿಸಿದೆ. ಈಗ ಆ ಮಗುವನ್ನು ಬದುಕಲು ಯಾವುದೇ ಆಧಾರವಿಲ್ಲದ ಸ್ಥಿತಿಯಲ್ಲಿ ಬಿಟ್ಟಿದ್ದೀರಿ ಎಂದು ಗರಂ ಆಗಿದೆ.

ಮದುವೆ ಹೆಸರಲ್ಲಿ ಯುವತಿಗೆ ವಂಚನೆ ಕೇಸ್​​: ಆರೋಪಿ ಕೃಷ್ಣ ಜೆ. ರಾವ್​​ಗೆ ಹೈಕೋರ್ಟ್​​ ತೀವ್ರ ತರಾಟೆ
ಕೃಷ್ಣ ಜೆ. ರಾವ್​​ಗೆ ಹೈಕೋರ್ಟ್​​ ತೀವ್ರ ತರಾಟೆ
Image Credit source: Tv9 Kannada and Getty Images

Updated on: Jun 10, 2026 | 7:08 PM

ಬೆಂಗಳೂರು, ಜೂನ್​​ 10: ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಪುತ್ತೂರಿನ ಬಿಜೆಪಿ ಮಾಜಿ ನಾಯಕನ ಪುತ್ರ, ಆರೋಪಿ ಕೃಷ್ಣ ಜೆ. ರಾವ್​​ನನ್ನು ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸಂತ್ರಸ್ತೆ ಹಾಗೂ ಆಕೆಯ 10 ತಿಂಗಳ ಮಗುವಿನ ನಿರ್ವಹಣೆಗೆ ಹಣ ಠೇವಣಿ ಇಡಬೇಕೆಂಬ ನ್ಯಾಯಾಲಯದ ಹಿಂದಿನ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರೋಪಿ ಕೃಷ್ಣ ಜೆ. ರಾವ್ ಹಾಗೂ ಅವರ ಪೋಷಕರು ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಗರಂ ಆದ ನ್ಯಾಯಾಧೀಶರು, ಮಗು ಕೆಳ ವರ್ಗದ ಕುಟುಂಬದಲ್ಲಿ ಜನಿಸಿದೆ ಎಂಬ ಕಾರಣಕ್ಕೆ ಅದನ್ನು ಕೈಬಿಡುತ್ತಿದ್ದೀರಾ? ಅದನ್ನು ನಾವು ಒಪ್ಪುವುದಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಏಪ್ರಿಲ್ 26ರಂದು ನೀಡಿದ್ದ ಮಧ್ಯಂತರ ಆದೇಶವನ್ನು ಉಲ್ಲೇಖಿಸಿದ ನ್ಯಾಯಾಲಯ, ಸಂತ್ರಸ್ತೆ ಮತ್ತು ಆಕೆಯ ಮಗುವಿನ ನಿರ್ವಹಣೆಗೆ 75,000 ರೂ. ಹಣವನ್ನು ಒಂದು ವಾರದೊಳಗೆ ಠೇವಣಿ ಇಡಲು ಸೂಚಿಸಲಾಗಿತ್ತು ಎಂಬುದನ್ನೂ ನೆನಪಿಸಿದೆ.

ಇದನ್ನೂ ಓದಿ: ಬಿಜೆಪಿ ಮಾಜಿ ಮುಖಂಡನ ಪುತ್ರನಿಂದ ಯುವತಿಗೆ ದೋಖಾ ಕೇಸ್​; ಹೈಕೋರ್ಟ್​​ನಿಂದ ಮಹತ್ವದ ಆದೇಶ

‘ಮಗುವಿನ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲವೇ?’

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ಪಿ. ಹೆಗ್ಡೆ ಆರೋಪಿ ವಿದ್ಯಾರ್ಥಿಯಾಗಿರುವುದರಿಂದ ನ್ಯಾಯಾಲಯ ವಿಧಿಸಿದ್ದ ಷರತ್ತನ್ನು ಪಾಲಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು 75,000 ಕೊಡಲು ಸಾಧ್ಯವಾಗುತ್ತಿಲ್ಲವೇ? ನಿಮ್ಮ ತಂದೆ ಇದ್ದಾರಲ್ಲ. ಹಣ ಪಾವತಿಸದಿದ್ದರೆ ಅರ್ಜಿಗಳನ್ನು ವಜಾಗೊಳಿಸುತ್ತೇನೆ. ಮಧ್ಯಂತರ ಆದೇಶವನ್ನು ರದ್ದುಗೊಳಿಸುತ್ತೇನೆ. ಕಾರಣಗಳನ್ನೂ ದಾಖಲಿಸುತ್ತೇನೆ. ನಿಮ್ಮ ಕೃತ್ಯಗಳಿಂದ ಒಂದು ಮಗು ಜನಿಸಿದೆ. ಅದರ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲವೇ? ಎಂದು ಪ್ರಶ್ನಿಸಿದೆ.

ಸಂತ್ರಸ್ತೆಯ ಪರ ವಕೀಲರು, ಆಕೆಯ ಬ್ಯಾಂಕ್ ಖಾತೆ ವಿವರಗಳನ್ನು ಅರ್ಜಿದಾರರ ವಕೀಲರಿಗೆ ಈಗಾಗಲೇ ನೀಡಲಾಗಿತ್ತು. ಆದರೂ ನ್ಯಾಯಾಲಯ ಸೂಚಿಸಿದ್ದ ಮೊತ್ತವನ್ನು ವರ್ಗಾಯಿಸಲಾಗಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ. ಅಲ್ಲದೆ ಮೊದಲ ಕಂತಿನ ಹಣವನ್ನು ಮೇ 5ರಂದು ನ್ಯಾಯಾಲಯದಲ್ಲಿ ಠೇವಣಿ ಇಡಲಾಗಿದ್ದರೂ, ಆ ವಿಷಯವನ್ನು ಸಂತ್ರಸ್ತೆಗೆ ತಿಳಿಸಲಾಗಿಲ್ಲ ಎಂದು ಕೂಡ ಅವರು ಹೇಳಿದ್ದಾರೆ. ಈ ವೇಳೆ ನ್ಯಾಯಮೂರ್ತಿ ನಾಗಪ್ರಸನ್ನ, ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು. ಪರಸ್ಪರ ಸಮ್ಮತಿಯ ಸಂಬಂಧವಾಗಿದ್ದರೆ ಸಮಸ್ಯೆ ಇರಲಿಲ್ಲ. ಆದರೆ ಆ ಸಂಬಂಧದಿಂದ ಒಂದು ನಿರಪರಾಧಿ ಮಗು ಜನಿಸಿದೆ. ಈಗ ಆ ಮಗುವನ್ನು ಬದುಕಲು ಯಾವುದೇ ಆಧಾರವಿಲ್ಲದ ಸ್ಥಿತಿಯಲ್ಲಿ ಬಿಟ್ಟಿದ್ದೀರಿ. ನೀವು ಜವಾಬ್ದಾರಿಯಿಂದ ಹೇಗೆ ಕೈತೊಳೆದುಕೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಎರಡೂ ಅರ್ಜಿಗಳು ಖಂಡಿತವಾಗಿಯೂ ವಜಾಗೊಳ್ಳುತ್ತವೆ. ಯಾವುದೇ ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡುವುದಿಲ್ಲ. ಇದು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 69ರ ಅಡಿಯಲ್ಲಿ ಮದುವೆಯ ಸುಳ್ಳು ಭರವಸೆಗೆ ಸಂಬಂಧಿಸಿದ ಸ್ಪಷ್ಟ ಪ್ರಕರಣವಾಗಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಅದನ್ನು ಆದೇಶದಲ್ಲಿ ದಾಖಲಿಸಲಾಗುವುದು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಆದಾಗ್ಯೂ, ಪ್ರಕರಣದ ಮೂಲ ವಿಷಯಗಳ ಕುರಿತು ವಾದ ಮಂಡಿಸಲು ಅರ್ಜಿದಾರರಿಗೆ ಅವಕಾಶ ನೀಡಿ ಪ್ರಕರಣದ ವಿಚಾರಣೆಯನ್ನು ಪೀಠ ಮುಂದೂಡಿದೆ ಎಂದು ಬಾರ್​​ ಆ್ಯಂಡ್​​ ಬೆಂಚ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us