ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು ಹೋಮ ಕುಂಡ ಹತ್ಯೆ! ಅಂದು ನಡೆದ ಘಟನೆಗಳೇನು?

| Updated By: ganapathi bhat

Updated on: Jun 08, 2021 | 7:43 PM

Bhaskar Shetty Murder Case: ಘಟನೆಯ ದಿನ ಏನೇನಾಗಿತ್ತು? ನಿರಂಜನ್ ಭಟ್, ರಾಜೇಶ್ವರಿ, ನವನೀತ್ ಈ ಮೂವರ ಪಾತ್ರವೇನು? ಖುಲಾಸೆಗೊಂಡಿರುವ ಆರೋಪಿ ರಾಘವೇಂದ್ರ ಏನು ಮಾಡಿದ್ದರು? ಈಗ ತೀರಿಕೊಂಡಿರುವ ಮತ್ತೋರ್ವ ಆರೋಪಿ ಶ್ರೀನಿವಾಸ್ ಭಟ್ ಯಾರು? ಇಲ್ಲಿದೆ ಸಂಪೂರ್ಣ ವಿವರ.

ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು ಹೋಮ ಕುಂಡ ಹತ್ಯೆ! ಅಂದು ನಡೆದ ಘಟನೆಗಳೇನು?
ಉದ್ಯಮಿ ಭಾಸ್ಕರ್‌ ಶೆಟ್ಟಿ ಅವರನ್ನು ಸ್ವಾರ್ಥಕ್ಕಾಗಿ, ಅಮಾನವೀಯವಾಗಿ ಹತ್ಯೆ ಮಾಡಿದ್ದ ಅವರ ಪತ್ನಿ ರಾಜೇಶ್ವರಿ ಮತ್ತು ಪುತ್ರ ನವನೀತ್ ಶೆಟ್ಟಿ
Follow us on

ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಎಂಬವರನ್ನು ಸ್ವತಃ ಅವರ ಪತ್ನಿ ರಾಜೇಶ್ವರಿ ಶೆಟ್ಟಿ ಹಾಗೂ ಮಗ ನವನೀತ್ ಶೆಟ್ಟಿ ಎಂಬಾತ ಮತ್ತೋರ್ವ ಯುವಕ ನಿರಂಜನ್ ಭಟ್ ಎಂಬಾತನೊಂದಿಗೆ ಸೇರಿ ಹತ್ಯೆ ಮಾಡಿದ ಹೇಯಕೃತ್ಯ ಉಡುಪಿ ನಗರದ ಸಮೀಪದ ಕುಂಜಿಬೆಟ್ಟು ಎಂಬಲ್ಲಿ ನಡೆದಿತ್ತು. ತಂದೆಯೊಬ್ಬನನ್ನು ಮಗ, ತನ್ನ ತಾಯಿಯೊಂದಿಗೆ ಸೇರಿ ಕೊಲೆ ಮಾಡಿದ ಈ ದುಷ್ಕೃತ್ಯಕ್ಕೆ ಸಂಬಂಧಿಸಿ ಘಟನೆ ನಡೆದ 5 ವರ್ಷಗಳ ಬಳಿಕ ಇಂದು (ಜೂನ್ 8) ಶಿಕ್ಷೆ ಪ್ರಕಟವಾಗಿದೆ. ಪ್ರಮುಖ ಮೂವರು ಆರೋಪಿಗಳಾದ ರಾಜೇಶ್ವರಿ ಶೆಟ್ಟಿ (ಭಾಸ್ಕರ್ ಶೆಟ್ಟಿ ಪತ್ನಿ), ನವನೀತ್ ಶೆಟ್ಟಿ (ಭಾಸ್ಕರ್ ಶೆಟ್ಟಿ ಮಗ) ಮತ್ತು ನಿರಂಜನ್ ಭಟ್ (ಜ್ಯೋತಿಷಿ) ಮೂವರಿಗೆ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಈ ಕೊಲೆ ಪ್ರಕರಣ ಅಷ್ಟೊಂದು ಮಹತ್ವ ಪಡೆಯಲು ಕೆಲವು ಕಾರಣವಿದೆ. ತನ್ನ ಗಂಡನನ್ನೇ ಅಥವಾ ತಂದೆಯನ್ನೇ ಹೆಂಡತಿ ಮತ್ತು ಮಗ ಕೊಲೆ ಮಾಡಿದ್ದು ಎಂಬುದು ಒಂದಾದರೆ, ಕೊಲೆಯ ಬಳಿಕ ಸಾಕ್ಷ್ಯ ನಾಶಕ್ಕೆ ಅವರು ಮಾಡಿದ ಕಸರತ್ತು ಬಹಳ ಹೀನವಾಗಿತ್ತು. ಈ ಮಧ್ಯೆ, ರಾಜೇಶ್ವರಿ ಶೆಟ್ಟಿಯ ಪ್ರಿಯಕರ ಎಂದು ಹೇಳಲಾಗಿದ್ದ ನಿರಂಜನ್ ಭಟ್ ಪಾತ್ರ ಪ್ರಕರಣಕ್ಕೆ ಹೊಸ ತಿರುವು ನೀಡಿತ್ತು.

ಘಟನೆಯ ದಿನ ಏನೇನಾಗಿತ್ತು? ನಿರಂಜನ್ ಭಟ್, ರಾಜೇಶ್ವರಿ, ನವನೀತ್ ಈ ಮೂವರ ಪಾತ್ರವೇನು? ಖುಲಾಸೆಗೊಂಡಿರುವ ಆರೋಪಿ ರಾಘವೇಂದ್ರ ಏನು ಮಾಡಿದ್ದರು? ಈಗ ತೀರಿಕೊಂಡಿರುವ ಮತ್ತೋರ್ವ ಆರೋಪಿ ಶ್ರೀನಿವಾಸ್ ಭಟ್ ಯಾರು? ಇಲ್ಲಿದೆ ಸಂಪೂರ್ಣ ವಿವರ.

ಪ್ರಕರಣ ನಡೆದ ದಿನ ಏನೇನಾಗಿತ್ತು?

  • ಜುಲೈ 28, 2016ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಭಾಸ್ಕರ್ ಶೆಟ್ಟಿ ಉಡುಪಿಯಲ್ಲಿನ ತಮ್ಮ ಹೊಟೇಲ್ ದುರ್ಗಾದಿಂದ ಮನೆಗೆ ಮರಳಿದ್ದಾರೆ. ಮನೆಗೆ ಬಂದು ಸ್ನಾನಕ್ಕೆಂದು ತೆರಳಿದ್ದಾರೆ. ಈ ವೇಳೆ ಮನೆಯಲ್ಲಿ ಪತ್ನಿ ರಾಜೇಶ್ವರಿ, ಮಗ ನವನೀತ್ ಹಾಗೂ ರಾಜೇಶ್ವರಿ ಗೆಳೆಯ ಎಂದು ಹೇಳಲಾಗಿರುವ ನಿರಂಜನ್ ಭಟ್ ಮನೆಯಲ್ಲಿದ್ದರು.
  • ಸ್ನಾನ ಮುಗಿಸಿ ಭಾಸ್ಕರ್ ಶೆಟ್ಟಿ ಹೊರಗೆ ಬರುವ ವೇಳೆಗೆ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಹಾಕಲಾಗಿದೆ. ಆ ವೇಳೆ, ಮಡದಿ ರಾಜೇಶ್ವರಿಯೇ ಭಾಸ್ಕರ್ ಶೆಟ್ಟಿ ತಲೆಗೆ ರಾಡ್​ನಿಂದ ಹಲ್ಲೆ ಮಾಡಿದ್ದಾಳೆ. ಬಳಿಕ, ಭಾಸ್ಕರ್ ಶೆಟ್ಟಿಗೆ ಕೀಟನಾಶಕ ಕುಡಿಸಲಾಗಿದೆ.
  • ಭಾಸ್ಕರ್ ಶೆಟ್ಟಿಯ ಕಾಲು ಮತ್ತು ಕೈಗಳನ್ನು ಕಟ್ಟಿ, ಬಾತ್​ಟಬ್​ನ ನೀರಿನಲ್ಲಿ ಮುಳುಗಿಸಲಾಗಿದೆ. ಈ ದುಷ್ಕಾರ್ಯಗಳಿಗೆ ನಿರಂಜನ್ ಭಟ್ ಹಾಗೂ ನವನೀತ್ ಶೆಟ್ಟಿ ಸಹಕರಿಸಿದ್ದಾರೆ.
  • ಆ ಬಳಿಕ ಸರಿಸುಮಾರು ರಾತ್ರಿಯ ವೇಳೆಗೆ ಶವವನ್ನು ಕಾರಿನಲ್ಲಿ ಹಾಕಿ, ಕಾರ್ಕಳ ಸಮೀಪದ ನಂದಳಿಕೆ ಎಂಬಲ್ಲಿನ ನಿರಂಜನ್ ಭಟ್ ಮನೆಗೆ ಕೊಂಡೊಯ್ಯಲಾಗಿದೆ.
  • ಅಲ್ಲಿನ ಯಾಗಶಾಲೆಯಲ್ಲಿ (ಹೋಮಕುಂಡ) ಭಾಸ್ಕರ್ ಶೆಟ್ಟಿ ಮೃತದೇಹವನ್ನು ಹಾಕಿ ಸುಡಲಾಗಿದೆ.
  • ಯಾರಿಗೂ ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ ಪೆಟ್ರೋಲ್, ಕರ್ಪೂರ, ತುಪ್ಪ ಹಾಕಿ ಬೆಂಕಿ ಕೊಡಲಾಗಿದೆ.
  • ಬಳಿಕ, ಭಾಸ್ಕರ್ ಶೆಟ್ಟಿ ಅಸ್ಥಿ, ಬೂದಿಯ ಜೊತೆಗೆ ಹೋಮಕುಂಡದ ಇಟ್ಟಿಗೆಗಳನ್ನು ಕಾರ್ಕಳ ಸಮೀಪದ ಪಳ್ಳಿ ನದಿಗೆ ಎಸೆಯಲಾಗಿದೆ. ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಹೀಗೆ ಮಾಡಲಾಗಿತ್ತು.
  • ಘಟನೆ ನಡೆದ ಒಂದು ದಿನದ ಬಳಿಕ, ಅಂದರೆ ಜುಲೈ 29ರಂದು ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಟ್ಟಿ ತನ್ನ ಮಗ ಕಾಣೆಯಾಗಿರುವ ಬಗ್ಗೆ ದೂರು ನೀಡುತ್ತಾರೆ.
  • ಈ ಸಂಬಂಧ ತನಿಖೆಯ ಬೆನ್ನು ಹತ್ತಿದ ಪೊಲೀಸರು, ಪತ್ನಿ ರಾಜೇಶ್ವರಿ (46) ಮತ್ತು ಮಗ ನವನೀತ್ ಶೆಟ್ಟಿಯನ್ನು (20) ಬಂಧಿಸುತ್ತಾರೆ.
  • ಕಾಣೆಯಾದ ಪ್ರಕರಣ ಹಿಂಬಾಲಿಸಿದ ಪೊಲೀಸರಿಗೆ ಭಾಸ್ಕರ್ ಶೆಟ್ಟಿ ಕೊಲೆ ಆಗಿರುವ ವಿಚಾರ ಬಯಲಾಗುತ್ತದೆ. ಈ ಸಂಬಂಧ ಜ್ಯೋತಿಷಿ ಎಂದು ಹೇಳಿಕೊಳ್ಳುತ್ತಿದ್ದ ನಿರಂಜನ್ ಭಟ್ ಎಂಬಾತನನ್ನೂ ಪೊಲೀಸರು ಆಗಸ್ಟ್ 8, 2016ರಂದು ಬಂಧಿಸುತ್ತಾರೆ.
  • ಆಗಸ್ಟ್ 10, 2016ರಂದು ಪಳ್ಳಿ ನದಿಯಲ್ಲಿ ಎಸೆಯಲಾಗಿದ್ದ ಅಸ್ಥಿ ಪತ್ತೆಯಾಗುತ್ತದೆ. ಅದನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ.
  • ಈ ವೇಳೆ, ಅಸ್ಥಿ ನದಿಗೆ ಎಸೆಯಲು ಹೋಗುವಾಗ ಕಾರ್ ಚಲಾಯಿಸಿದ್ದ ಡ್ರೈವರ್ ರಾಘವೇಂದ್ರ ಮತ್ತು ಹೋಮಕುಂಡದ ಕೆಲಸಕ್ಕೆ ಸಹಕರಿಸಿದ್ದ ಎಂದು ನಿರಂಜನ್ ಭಟ್ ತಂದೆ ಶ್ರೀನಿವಾಸ್ ಭಟ್​ರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುತ್ತಾರೆ.

ಕೊಲೆ ಪ್ರಕರಣದಲ್ಲಿ ಭಾಗಿಯಾದವರು ಯಾರ್ಯಾರು?
ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳು ಪತ್ನಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ. ಮತ್ತೋರ್ವ ಮುಖ್ಯ ಆರೋಪಿ ನಿರಂಜನ್ ಭಟ್ ಎಂಬ ಜ್ಯೋತಿಷಿ. ಈತನಿಗೆ ರಾಜೇಶ್ವರಿ ಶೆಟ್ಟಿ ಜೊತೆಗೆ ಅಕ್ರಮ ಸಂಬಂಧವಿತ್ತು, ಆಕೆಯ ಗೆಳೆಯ ಎಂದೂ ಹೇಳಲಾಗಿದೆ. ಮತ್ತೋರ್ವ ಆರೋಪಿ ಶ್ರೀನಿವಾಸ್ ಭಟ್, ಜ್ಯೋತಿಷಿ ನಿರಂಜನ್ ಭಟ್ ತಂದೆ. ಮತ್ತೊಬ್ಬ ರಾಘವೇಂದ್ರ ಎಂಬಾತ ಅಸ್ಥಿ ನದಿಗೆ ಎಸೆಯಲು ಹೋಗುವಾಗ ಕಾರು ಚಲಾಯಿಸಿದ ಡ್ರೈವರ್.

ಆರೋಪಿಗಳಿಗೆ ಏನು ಶಿಕ್ಷೆ?
ಪ್ರಮುಖ ಮೂರು ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ ಮತ್ತು ನಿರಂಜನ್ ಭಟ್​ಗೆ ಇಂದು (ಜೂನ್ 8) ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕಾರು ಚಾಲಕ ರಾಘವೇಂದ್ರ ಆರೋಪ ಖುಲಾಸೆಗೊಂಡಿದೆ. ಶ್ರೀನಿವಾಸ್ ಭಟ್ ಈಗಾಗಲೇ ಅನಾರೋಗ್ಯದಿಂದ ತೀರಿಕೊಂಡಿದ್ದಾರೆ.

ಇದನ್ನೂ ಓದಿ: ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ, ಜಿಲ್ಲಾ ನ್ಯಾಯಾಲಯದ ತೀರ್ಪು

ಪತಿಯನ್ನು ಸುಟ್ಟು ಹಾಕಿದ್ದ ರಾಜೇಶ್ವರಿ ಶೆಟ್ಟಿ ವಿರುದ್ಧ ವೇಶ್ಯಾವಾಟಿಕೆ ಆರೋಪ.. ಕೇಸ್ ದಾಖಲು, ರಾಜೇಶ್ವರಿ ನಾಪತ್ತೆ!

Published On - 7:12 pm, Tue, 8 June 21