
ಬೆಂಗಳೂರು, ಸೆಪ್ಟೆಂಬರ್ 29: ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ (Bidadi Integrated Township) ವಿರುದ್ಧದ ರೈತರ ಹೋರಾಟ ತೀವ್ರ ಸ್ವರೂಪ ಪಡೆಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ರೈತರ ಹೋರಾಟಕ್ಕೆ ಜೆಡಿಎಸ್ (JDS) ಬಹಿರಂಗವಾಗಿ ಬೆಂಬಲ ಘೋಷಿಸಿದ ಬೆನ್ನಲ್ಲೇ ಪ್ರತಿಭಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ನಮ್ಮ ಭೂಮಿ ಕೊಡುವುದಿಲ್ಲ ಎಂದು ಬೀದಿಗೆ ಇಳಿದಿರುವ ರೈತರು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧವೇ ಗರಂ ಆಗಿದ್ದಾರೆ, ಶಾಸಕರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯ ಸರ್ಕಾರದ, ಅದರಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ಮಹತ್ವಾಕಾಂಕ್ಷಿ ಯೋಜನೆ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ಶಿಪ್ಗೆ ಪ್ರಾರಂಭದಲ್ಲೇ ವಿರೋಧ ವ್ಯಕ್ತವಾಗಿದೆ. ರಾಮನಗರ ತಾಲೂಕಿನ ಬಿಡದಿ ಬಳಿ ಸುಮಾರು 9 ಸಾವಿರ ಎಕರೆ ಪ್ರದೇಶದಲ್ಲಿ 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಗೆ ಸರ್ಕಾರ ಸಜ್ಜಾಗಿದೆ. ಆದರೆ, ಈ ಯೋಜನೆಗೆ ಭೂಮಿ ನೀಡಲ್ಲ ಎಂದು ಬಿಡದಿ ಭಾಗದ ರೈತರು ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ.
ಬೈರಮಂಗಲ ಗ್ರಾಮದ ಬಳಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಜೆಡಿಎಸ್ ನಾಯಕರು ಬೆಂಬಲ ಸೂಚಿಸಿದ್ದಾರೆ. ರೈತರ ಭೂಮಿ ಕಸಿಯಲು ಡಿಕೆ ಹುನ್ನಾರ ನಡೆಸಿದ್ದಾರೆ ಅಂತ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಇತ್ತೀಚೆಗೆ ರಾಮನಗರ ಡಿಸಿ ಕಚೇರಿ ಬಳಿ ಧರಣಿ ನಡೆಸುತ್ತಿದ್ದ ರೈತರ ವಿರುದ್ಧ ಡಿಕೆ ಶಿವಕುಮಾರ್ ಸಿಟ್ಟಾಗಿದ್ದರು. ಈ ಬಗ್ಗೆ ಕಿಡಿಕಾರಿದ ನಿಖಿಲ್ಕುಮಾರಸ್ವಾಮಿ, ಅವರು (ಡಿಸಿಎಂ) ತೊಡೆತಟ್ಟಿ ಮಾತನಾಡಬಹುದು, ಆದರೆ ತೊಡೆ ಮುರಿಯುವ ಶಕ್ತಿ ರೈತರಿಗೆ ಇದೆ ಎಂದಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕೂಡ ರೈತರಿಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ, ರೈತರಿಗೆ ಏನಾದರೂ ಆದರೆ ಖುದ್ದು ಸ್ಥಳಕ್ಕೆ ಬರುವುದಾಗಿ ಭರವಸೆ ನೀಡಿದರು.
ಸದ್ಯ ಜಿಬಿಎ ಟೌನ್‌ಶಿಪ್ ಯೋಜನೆ ಈಗ ರಾಜಕೀಯ ಜಟಾಪಟಿಯ ವೇದಿಕೆಯಾಗಿದೆ. ಒಂದೆಡೆ, ಯೋಜನೆ ಅನುಷ್ಠಾನಗೊಳಿಸಿಯೇ ಸಿದ್ಧ ಎಂದು ಡಿಕೆ ಶಿವಕುಮಾರ್ ಹೇಳುತ್ತಿದ್ದರೆ ಮತ್ತೊಂದೆಡೆ, ಯೋಜನೆ ಮಾಡಲು ಬಿಡುವುದಿಲ್ಲ. ಅದ್ಹೇಗೆ ಮಾಡುತ್ತೀರಿ ನೋಡೋಣ ಎಂದು ದಳಪಡೆ ಸವಾಲು ಎಸೆದಿದೆ.
ಇದನ್ನೂ ಓದಿ: ಬಿಡದಿ ಟೌನ್‌ಶಿಪ್: ಜಮೀನು ಕೊಟ್ಟವರಿಗೆ 2 ಕೋಟಿ ಅಥವಾ 50*50 ನಿವೇಶನ: ರೈತರಿಗೆ ಡಿಕೆಶಿ ಆಫರ್
ಬಿಡದಿ ಟೌನ್‌ಶಿಪ್ ಯೋಜನೆಗಾಗಿ 7,000 ಎಕರೆಗೂ ಹೆಚ್ಚು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 2025 ರ ಮಾರ್ಚ್ನಲ್ಲಿ ಪ್ರಾಥಮಿಕ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿತ್ತು. ರಾಮನಗರ ಜಿಲ್ಲೆಯ ರಾಮನಗರ ಮತ್ತು ಹಾರೋಹಳ್ಳಿ ತಾಲ್ಲೂಕುಗಳ ಒಂಬತ್ತು ಹಳ್ಳಿಗಳಲ್ಲಿ 7,293.44 ಎಕರೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿತ್ತು. ಇದೀಗ ರೈತರು ಸರ್ಕಾರದ ಯೋಜನೆ ವಿರುದ್ಧ ಬೀದಿಗಿಳಿದಿದ್ದಾರೆ.