ಬೀದರ್: ಜಿಲ್ಲೆಯ ಪ್ರತಿಷ್ಠಿತ ಬ್ರೀಮ್ಸ್ನಲ್ಲಿ ಕೋಟಿ ಕೋಟಿ ರೂಪಾಯಿ ಅವ್ಯವಹಾರ ನಡೆದು ಒಂದೂವರೆ ವರ್ಷವೇ ಕಳಿದಿದೆ. ಇಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಎಸಿಬಿ ಹಾಗೂ ಇಲಾಖೆ ತನಿಕೆ ಕೂಡಾ ನಡೆದಿದೆ. ಆದರೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಕ್ರಮ ಮಾತ್ರ ಜರುಗಿಸಿಲ್ಲ. ಶಾಸಕ ರಘುಪತಿ ಭಟ್ ನೇತೃತ್ವದ ಭರವಸೆಗಳ ಸಮಿತಿ ಇಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಕಲೆಹಾಕಿ ಹೋಗಿತ್ತು. ಅವರು ಬಂದು ಹೋದ ಬೆನ್ನಲೇ ದುರ್ನಡತೆಯಾಧಾರದ ಮೇಲೆ ಮೂವರನ್ನ ಅಮಾನತುಗೊಳಿಸಿ ಆರೋಗ್ಯ ಇಲಾಖೆ ಆದೇಶಿಸಿದೆ.
ಜನವರಿ 7, 2021 ರಂದು ಬ್ರೀಮ್ಸ್ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಶಾಸಕ ರಘುಪತಿ ಭಟ್ ನೇತೃತ್ವ ಭರವಸೆ ಸಮಿತಿ ಸದಸ್ಯರು ಬ್ರೀಮ್ಸ್ ಸಿಬ್ಬಂದಿ ಅಧಿಕಾರಿಗಳಿಂದ ಮಾಹಿತಿಯ್ನ ಕಲೆ ಹಾಕಿದ್ದರು. ಜೊತೆಗೆ ಯಾವ ಯಾವ ವಿಚಾರಲ್ಲಿ ಭ್ರಷ್ಟಾಚಾರ ನಡೆದಿದೆ ಮತ್ತು ಹೇಗೆ ನಡೆದಿದೆ ಎಂದು ಮಾಹಿತಿ ಕಲೆ ಹಾಕಿದ್ದು, ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ವಿಧಾನಸಭೆ ಭರವಸೆ ಸಮಿತಿಯ ಸದಸ್ಯರು ದಾಖಲೆಗಳನ್ನ ಪರಿಶೀಲನೆ ಮಾಡಿ ಅಧಿಕಾರಿಗಳ ಸಭೆಯಲ್ಲಿ ಮಾಧ್ಯಮದವರನ್ನ ಹೊರಗಿಟ್ಟು ಮೀಟಿಂಗ್ ಮಾಡಿದರು. ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದ ಶಾಸಕ ರಘುಪತಿ ಭಟ್ ಬ್ರೀಮ್ಸ್ನಲ್ಲಿ ಮೇಲಿಂದ ಮೇಲೆ ನಾನಾ ಅವ್ಯವಹಾರಗಳು ನಡೆದಿವೆ. ವಿವಿಧ ಹಂತದ ವಿಚಾರಣೆ ವೇಳೆ ಅವ್ಯವಹಾರ ನಡೆದಿರುವುದು ಸಾಬೀತಾಗಿದೆ. ಆದರೂ ಸಂಬಂಧಿತರ ವಿರುದ್ಧ ಕಳೆದ ಒಂದೂವರೆ ವರ್ಷ ಕಳೆದರೂ ಕ್ರಮ ಕೈಗೊಳ್ಳದಿರುವುದು ಬೇಸರ ತಂದಿದೆ. ಇಲ್ಲಿನ ಭ್ರಷ್ಟಾಚಾರಕ್ಕೆ ತಾರ್ಕಿಕ ಅಂತ್ಯ ಹಾಡಬೇಕಾಗಿದೆ. ಶೀಘ್ರದಲ್ಲಿಯೇ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ ಮೀಟಿಂಗ್ ಮಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಆದೇಶ
ಶಾಸಕ ರಘುಪತಿ ಭಟ್ ನೇತೃತ್ವದ ಭರವಸೆಗಳ ಸಮಿತಿ ಇಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಕಲೆಹಾಕಿ ಹೋಗಿದ್ದರು. ಅವರು ಬಂದು ಹೋದ ಬೆನ್ನಲೇ ಮೂವರನ್ನ ಅಮಾನತುಗೊಳಿಸಿ ಆರೋಗ್ಯ ಇಲಾಖೆ ಆದೇಶಿಸಿದೆ. ಇನ್ನೂ ಸರಕಾರಿ ಭರವಸೆ ಸಮಿತಿ ಭೇಟಿ ಬೆನ್ನಲ್ಲೆ ಈ ಮಾಹಿತಿ ಆಧಾರವಾಗಿರಿಸಿ ಬಾಬು ಕೋಟೆ, ಪ್ರಕಾಶ್ ಮಡಿವಾಳ ಹಾಗೂ ಪ್ರಕಾಶ ಮಾಳಗೆ ಅವರು ನ್ಯಾಯವಾದಿಗಳ ಮೂಲಕ ಪತ್ರ ಬರೆದು ಸಮಿತಿ ಅಧ್ಯಕ್ಷರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಅನುಮತಿ ಕೋರಿದ್ದರು. ಈ ಮೂಲಕ ಸಮಿತಿ ಕಾರ್ಯ ನಿರ್ವಹಣೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಸ್ತಕ್ಷೇಪ ಮಾಡಿ ಸಮಿತಿಯ ಘನತೆಗೆ ಚ್ಯುತಿ ತಂದ ಸಂಬಂಧ ಸದ್ಯ ಔರಾದ್ ಸಾರ್ವಜನಿಕ ಆಸ್ಪತ್ರೆ ಸಹಾಯಕ ಆಡಳಿತಾಧಿಕಾರಿಯಾದ ಬಾಬು ಕೋಟೆ, ಬ್ರೀಮ್ಸ್ ಕಚೇರಿ ಅಧೀಕ್ಷಕ ಪ್ರಕಾಶ ಮಡಿವಾಳ ಹಾಗೂ ಬ್ರೀಮ್ಸ್ ಪ್ರಥಮ ದರ್ಜೆ ಸಹಾಯಕ ಪ್ರಕಾಶ ಮಾಳಗೆ ಸೇರಿ ಮೂವರನ್ನ ಅಮಾನತುಗೊಳಿಸಿ, ಜೊತೆಗೆ ಬೇರೆಡೆ ಜಾಗಕ್ಕೆ ಬದಲಾಯಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ಆದೇಶ ಹೊರಡಿಸಿದ್ದಾರೆ.
ಬಾಬು ಕೋಟೆ ಅವರನ್ನ ಕೊಡಗು ಜಿಲ್ಲೆ ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆ, ಪ್ರಕಾಶ ಮಡಿವಾಳಗೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಾಗೂ ಪ್ರಕಾಶ್ ಮಾಳಗೆ ಅವರನ್ನ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎತ್ತಂಗಡಿ ಮಾಡಲಾಗಿದೆ. ಜೊತೆಗೆ ಬ್ರೀಮ್ಸ್ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವರ್ಷಾ ಎನ್ನುವ ಸಿಬ್ಬಂದಿಯನ್ನು ಸಹ ಅಮಾನತುಗೊಳಿಸಿ ಬೇರೆ ಬೇರೆ ಕಡೆಗೆ ವರ್ಗಾವಣೆ ಮಾಡಿದೆ.
ಜನರ ಆಗ್ರಹ
2018-19 ನೇ ಮಾರ್ಚ್ನಲ್ಲಿ ಕಾನೂನುಬಾಹಿರ ಮೆಡಿಸಿನ್ ಖರೀದಿ, ಅಕ್ರಮ ನರ್ಸ್ಗಳ ನೇಮಕಾತಿ, ವೈದ್ಯಕೀಯ ಉಪಕರಣ ಖರೀದಿಯಲ್ಲಿ ಕೊಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆದಿತ್ತು. ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧಿಕಾರಿ ಮತ್ತು ನೌಕರ ಮೇಲೆ ಈ ಆರೋಪಗಳು ಕೇಳಿ ಬಂದಿದ್ದವು. ಎಎಓ ಅನಸೂಯ, ಹಿಂದಿನ ಸಹಾಯಕ ಆಡಳಿತಾಧಿಕಾರಿ ಪ್ರಕಾಶ ಮಡಿವಾಳರ್, ಕಚೇರಿ ಅಧೀಕ್ಷಕ ಬಾಬು ಕೋಟೆ, ಪ್ರಕಾಶ್ ಮಡಿವಾಳರ ಸೇರಿದಂತೆ ಬ್ರೀಮ್ಸ್ ಸುಮಾರು 8 ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಎಸಿಬಿ ತನಿಕೆ ನಡೆಸುತ್ತಿದೆ. ಇಲ್ಲಿ ನಡೆದ ಎನ್ನಲಾದ ಹಗರಣದ ಬಗ್ಗೆ ಅದರ ಸತ್ಯಾಸತ್ಯತೆಯ ಬಗ್ಗೆ ಮಾಹಿತಿ ಕಲೆ ಹಾಕಲು ಬಂದಿದ್ದ ಭರವಸೆಗಳ ಸಮೀತಿಯ ಸದಸ್ಯರಿಗೆ ಅಗೌರವ ತೋರಿದ್ದಾರೆಂದು ಮೂವರನ್ನ ಅಮಾನತು ಮಾಡಲಾಗಿದೆ. ಇದರ ಜೊತೆಗೆ ಇಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದರಲ್ಲಿ ಭಾಗಿಯಾದವರನ್ನ ಕೂಡಾ ಬೇಗ ತನಿಕೆ ಪೂರ್ಣಗೊಳಿಸಿ ತಪ್ಪಿತ್ತಸ್ಥರನ್ನು ಬೇಗ ಅಮಾನತು ಮಾಡಿ ಎಂದು ಇಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ
ಬಿಗ್ ಬಾಸ್ ಮನೆಯಲ್ಲಿ ಲ್ಯಾಗ್ ಮಂಜು ತುಲಾಭಾರ! ತಕ್ಕಡಿಯ ಮತ್ತೊಂದು ತುದಿಯಲ್ಲಿ ದಿವ್ಯಾ ಸುರೇಶ್?
Published On - 6:22 pm, Sat, 20 March 21