ಜನರು ತಮ್ಮ ಕೆಲಸಕ್ಕಾಗಿ ಅಲೆದಾಡಬಾರದು: ಹುಬ್ಬಳ್ಳಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ
ಇನ್ನು ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರವನ್ನು ನೀಡುವ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಎಲ್ಲಾ ಅಹವಾಲುಗಳನ್ನು ಇಲ್ಲೇ ಪರಿಹರಿಸುತ್ತೇನೆ ಎಂದು ಆರ್.ಅಶೋಕ್ ಹೇಳಿದ್ದಾರೆ.
ಹುಬ್ಬಳ್ಳಿ: ನಾವು ಅರ್ಜಿ ಹಿಡಿದು ತಹಶೀಲ್ದಾರ್ ಕಚೇರಿಗೆ ಹೋಗುತ್ತಿದ್ದೇವು. ಆದರೆ ಇಂದು ಅಧಿಕಾರಿಗಳೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಇಂದು ಹಳ್ಳಿಯಲ್ಲಿದ್ದಾರೆ. ಜನರು ತಮ್ಮ ಕೆಲಸಕ್ಕಾಗಿ ಅಲೆದಾಡಬಾರದು. ಇದು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗೂ ತಲುಪಬೇಕು. ನನ್ನ ಅಧಿಕಾರವಧಿಯಲ್ಲಿ ಇದು ಆಗೇ ಆಗುತ್ತದೆ ಎಂದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಇಂದು (ಮಾರ್ಚ್ 20) ಹೇಳಿಕೆ ನೀಡಿದ್ದಾರೆ. ನಾನು ಈ ಹಿಂದೆ ಆರೋಗ್ಯ ಸಚಿವನಾಗಿದ್ದಾಗ ಮಡಿಲು ಯೋಜನೆ ತಂದಿದೆ. ಅದು ಈಗ ಬಹಳ ಜನಪ್ರಿಯವಾಗಿದೆ. ಅದೇ ರೀತಿಯ ಕಾರ್ಯಕ್ರಮ ಇದಾಗುತ್ತದೆ. ಗ್ರಾಮದಲ್ಲಿ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣ ಮಾಡಲು ಆದೇಶ ಮಾಡಿದ್ದೇನೆ. 6 ಏಕರೆ ಭೂಮಿಯಲ್ಲಿ 24 ಕೋಟಿ ಹಣ ಮಂಜೂರು ಮಾಡಿದ್ದೇನೆ. ನಾಡ ಕಚೇರಿ ಕಟ್ಟಡ ನಿರ್ಮಾಣ ಮಾಡಲು ಭೂಮಿ ಪೂಜೆ ಮಾಡಿದ್ದೇನೆ ಎಂದು ಛಬ್ಬಿ ಗ್ರಾಮದಲ್ಲಿ ಆರ್.ಅಶೋಕ್ ತಿಳಿಸಿದ್ದಾರೆ.
ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರವನ್ನು ನೀಡುವ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಎಲ್ಲಾ ಅಹವಾಲುಗಳನ್ನು ಇಲ್ಲೇ ಪರಿಹರಿಸುತ್ತೇನೆ ಎಂದು ಆರ್.ಅಶೋಕ್ ಹೇಳಿದ್ದಾರೆ.
ಗ್ರಾಮ ವಾಸ್ತವ್ಯ ಯೋಜನೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಯೋಜನೆ ಅಡಿಯಲ್ಲಿ ಛಬ್ಬಿ ಗ್ರಾಮಕ್ಕೆ ಆಗಮಿಸಿದ ಕಂದಾಯ ಸಚಿವ ಆರ್ ಅಶೋಕ, ಛಬ್ಬಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಆರ್. ಅಶೋಕ್ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಯೋಜನೆಯನ್ನ ಜಾರಿಗೆ ತರಲಾಗಿದೆ. ಇದು ನನ್ನ 2ನೇ ಗ್ರಾಮ ವಾಸ್ತವ್ಯವಾಗಿದೆ ಎಂದು ಹೇಳಿದ್ದಾರೆ.
ಕಂದಾಯ ಆಡಳಿತವನ್ನ ಜನರ ಮನೆ ಬಾಗಿಲಿಗೆ ಕೊಡಬೇಕು. ಅಧಿಕಾರಿ ವರ್ಗಗಳಾದ ಡಿಸಿ, ಎಸಿ, ತಹಶಿಲ್ದಾರರು ಎಲ್ಲರೂ ಜನರ ಸೇವಕರು. 20-30 ವರ್ಷದಿಂದ ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಜನರು ಸರ್ಕಾರಿ ಕಚೇರಿ ಮುಂದೆ ಕೈ ಕಟ್ಟಿ ನಿಂತುಕೊಳ್ಳಬಾರದು ಎಂದು ಕಂದಾಯ ಸಚಿವ ಆರ್. ಅಶೋಕ್ ಮಾರ್ಮಿಕವಾಗಿ ತಿಳಿಸಿದ್ದಾರೆ.
ಅಧಿಕಾರಿಗಳು ಜನರ ಬಾಗಿಲಿಗೆ ಬಂದು ಕೆಲಸ ಮಾಡಿಕೊಡಬೇಕು ಎಂದು ಈ ಕಾರ್ಯಕ್ರಮ ಜಾರಿಗೆ ತಂದಿದ್ದೇವೆ. 15 ದಿನ ಮುಂಚಿತವಾಗಿ ಜನರ ಮನೆಗೆ ಹೋಗಿ ಅಧಿಕಾರಿಗಳು ಸಮಸ್ಯೆಗಳ ಪಟ್ಟಿ ತಯಾರಿಸಿದ್ದಾರೆ. ಕಂದಾಯ ಇಲಾಖೆ ಕೆಲಸ, ಪಿಂಚಣಿ ಸೇರಿದಂತೆ ಗ್ರಾಮಸ್ಥರ ಸಮಸ್ಯೆಗಳ ಪಟ್ಟಿ ಮಾಡಿದ್ದಾರೆ. 2ಗ್ರಾಮ ವಾಸ್ತವ್ಯದಿಂದ ಸಾಕಷ್ಟು ಬೇಡಿಕೆ ಬಂದಿದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಇದನ್ನೂ ಓದಿ:
24 ಗಂಟೆಯಲ್ಲಿ ಛಬ್ಬಿ ಗ್ರಾಮದ ಸಮಸ್ಯೆಗಳು ಬಗೆಹರಿಯಬೇಕು: ಕಂದಾಯ ಸಚಿವ ಆರ್ ಅಶೋಕ ಆದೇಶ
ಶಾಲೆ ಆರಂಭದ ಬಗ್ಗೆ ಗೊಂದಲವಿದೆ.. ಶೀಘ್ರದಲ್ಲೇ ಅಂತಿಮ ನಿರ್ಧಾರ ತಿಳಿಸ್ತೇವೆ: ಆರ್.ಅಶೋಕ್