ಅಪ್ಪನಿಗೆ ಬ್ಯಾಟರಿ ಚಾಲಿತ ಬೈಕ್, ಮಗನಿಗೆ ಜೀಪ್; ಲಾಕ್​ಡೌನ್​ ಸಮಯವನ್ನು ಸದುಪಯೋಗ ಮಾಡಿಕೊಂಡ ಬೀದರ್ ವ್ಯಕ್ತಿ

| Updated By: preethi shettigar

Updated on: Jul 18, 2021 | 8:22 AM

ಅಮೀರ್ ಅಲಿ ತಯಾರಿಸಿದ ಬೈಕ್​ನ ವಿಶೇಷತೆ ಎನೆಂದರೆ ಬ್ಯಾಟರಿ ಚಾಲಿತ ಬೈಕ್ ಇದಾಗಿದ್ದು, ನಾಲ್ಕುವರೆ ಗಂಟೆ ಚಾರ್ಜ್ ಮಾಡಿದರೆ ಸುಮಾರು 52 ಕಿಲೋಮೀಟರ್ ವರೆಗೆ, ಸರಿಸುಮಾರು ಎರಡು ಕ್ವಿಂಟಲ್ ಭಾರ ಹೊತ್ತುಕೊಂಡು ಸಾಗಬಲ್ಲ ಸಾಮರ್ಥ್ಯ ಹೊಂದಿದೆ.

ಅಪ್ಪನಿಗೆ ಬ್ಯಾಟರಿ ಚಾಲಿತ ಬೈಕ್, ಮಗನಿಗೆ ಜೀಪ್; ಲಾಕ್​ಡೌನ್​ ಸಮಯವನ್ನು ಸದುಪಯೋಗ ಮಾಡಿಕೊಂಡ ಬೀದರ್ ವ್ಯಕ್ತಿ
ಅಪ್ಪನಿಗಾಗಿ ತಯಾರಿಸಿದ ಬ್ಯಾಟರಿ ಚಾಲಿತ ಬೈಕ್
Follow us on

ಬೀದರ್​: ಲಾಕ್​ಡೌನ್​ ಸಂದರ್ಭದಲ್ಲಿ ಅದೆಷ್ಟೋ ಜನರು ನಗರಗಳನ್ನು ತೊರೆದು ತಮ್ಮ ಹಳ್ಳಿಗಳಿಗೆ ಬಂದಿದ್ದಾರೆ. ಹೀಗೆ ಬಂದವರು ಮನೆಯಲ್ಲಿಯೇ ವರ್ಕ್​ ಫ್ರಮ್​ ಹೋಮ್​ ಕೆಲಸ ಮಾಡಿಕೊಂಡು ಆರಾಮಾಗಿ ಕುಟುಂಬದ ಜತೆ ಕಾಲ ಕಳೆಯುತ್ತಿದ್ದಾರೆ. ಇದೇ ರೀತಿ ಲಾಕ್​ಡೌನ್​ ಸಮಯದಲ್ಲಿ ಬೆಂಗಳೂರಿನಿಂದ ತಮ್ಮ ಹುಟ್ಟೂರಿಗೆ ಆಗಮಿಸಿದ ವ್ಯಕ್ತಿಯೊಬ್ಬರು ಎಲ್ಲರೂ ಆಶ್ಚರ್ಯದಿಂದ ನೋಡುವ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ಕೊವಿಡ್ ಇರುವ ಕಾರಣ ವರ್ಕ್ ಫ್ರಮ್ ಹೋಮ್​ನಲ್ಲಿದ್ದು ಕೆಲಸ ಮಾಡುತ್ತಿದ್ದಾರೆ. ಆದರೆ ಬಿಡುವಿನ ವೇಳೆಯನ್ನು ಸದುಪಯೋಗ ಮಾಡಿಕೊಂಡಿದ್ದು, ತಮ್ಮ ತಂದೆಗಾಗಿ ಬೈಕ್ ತಯಾರಿಸಿದ್ದಾರೆ.

ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಮುತ್ತಂಗಿ ಗ್ರಾಮದ ಅಮೀರ್ ಅಲಿ ತಮ್ಮ ತಂದೆಗಾಗಿ ಬ್ಯಾಟರಿ ಚಾಲಿತ ಬೈಕ್​ ತಯಾರಿಸಿದ್ದಾರೆ. ಮೊದಲು ತಮ್ಮ ಮಗನಿಗಾಗಿ ಚಿಕ್ಕದಾದಂತಹ ಒಂದು ಬ್ಯಾಟರಿ ಚಾಲಿತ ಜೀಪ್ ತಯಾರಿಸುವ ಮೂಲಕ ಸಾಧನೆ ಮಾಡಿದ್ದ ಅಮೀರ್ ಅಲಿ, ಈಗ ತನ್ನ ತಂದೆಗೋಸ್ಕರ ಬ್ಯಾಟರಿ ಚಾಲಿತ ಬೈಕ್ ತಯಾರಿಸಿದ್ದು, ಗ್ರಾಮದಲ್ಲೇಲ್ಲಾ ಹೆಸರುವಾಸಿಯಾಗಿದ್ದಾರೆ.

ಬ್ಯಾಟರಿ ಚಾಲಿತ ಜೀಪ್
ಈ ಹಿಂದೆ ತಮ್ಮ ಮಗನಿಗಾಗಿ ತಯಾರಿಸಿದ ಜೀಪ್​ 5 ಅಡಿ ಉದ್ದ, 3 ಅಡಿ ಎತ್ತರ ಹಾಗೂ 2 ಅಡಿ ಅಗಲವಿತ್ತು. ಇದನ್ನು ಸೈನ್ಯದಲ್ಲಿ ಓಡಾಡುವ ಜೀಪ್ ಮಾದರಿಯಲ್ಲಿಯೇ ತಯಾರಿಸಲಾಗಿತ್ತು. ಈ ಹಿಂದೆ ತಯಾರಿಸಿದ ಜೀಪ್​ನ ವಿಶೇಷತೆ ಎನೆಂದರೆ ಬ್ಯಾಟರಿ ಚಾಲಿತ ಜೀಪ್​ ಇದಾಗಿದ್ದು, ಎರಡೂವರೆ ಗಂಟೆ ಚಾರ್ಜ್ ಮಾಡಿದರೆ ಸುಮಾರು ಹತ್ತು ಕಿಲೋಮೀಟರ್ ವರೆಗೆ ಸರಿಸುಮಾರು ಎರಡು ಕ್ಷಿಂಟಲ್ ಭಾರ ಹೊತ್ತುಕೊಂಡು ಸಾಗಬಲ್ಲ ಸಾಮರ್ಥ್ಯ ಹೊಂದಿತ್ತು. ಈ ವಾಹನದಲ್ಲಿ 24 ಓಲ್ಟ್​ನ 250 ವ್ಯಾಟ್ ಸಾಮರ್ಥ್ಯದ ಮೋಟರ್, ಅಳವಡಿಸಲಾಗಿತ್ತು. ಜತೆಗೆ 24 ಓಲ್ಟ್​ನ 10 ಎಎಚ್ ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿತ್ತು.

ಈ ಜೀಪ್​ ತಯಾರಿಸಲು ಅಮೀರ್ ಅಲಿ 40 ಸಾವಿರ ರೂಪಾಯಿ ಖರ್ಚು ಮಾಡಿದ್ದರು. ಈ ಜೀಪ್ ಗ್ರಾಮದಲ್ಲೇಲ್ಲ ಹೆಚ್ಚು ಮನ್ನಣೆ ಪಡೆದಿತ್ತು. ನಂತರ ತಮ್ಮ ತಂದೆಗೂ ಒಂದು ಬ್ಯಾಟರಿ ಚಾಲಿತ ಬೈಕ್ ರೆಡಿ ಮಾಡಿಕೊಡಬೇಕು ಎಂದು ಅಂದುಕೊಂಡ ಅಮೀರ್ ಅಲಿ, ಹಳೆಯಾದಾದ ಗುಜರಿಗೆ ಸೇರಿದ್ದ ಟಿವಿಎಸ್ ಬೈಕ್ ಪಾರ್ಟ್ಸ್​ಗಳನ್ನೇಲ್ಲ ತೆಗೆದುಕೊಂಡು, ಈಗ ಸುಂದರವಾದ ಬೈಕ್ ರೆಡಿ ಮಾಡಿದ್ದಾರೆ.

ಬ್ಯಾಚುಲರ್ ಆಫ್ ಫೈನ್ ಆರ್ಟ್ (ಬಿಎಫ್ಎ) ಓದಿಕೊಂಡಿರುವ ಅಮೀರ್ ಅಲಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೀಮ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಚಿಕ್ಕ ವ್ಯಯಸ್ಸಿನಲ್ಲಿಯೇ ಏನನ್ನಾದರು ಸಾಧನೆ ಮಾಡಬೇಕು ಅನ್ನೋ ಆಸೆಯಿತ್ತಂತೆ. ಹೀಗಾಗಿ ಬಿಡುವಿನ ವೇಳೆಯಲ್ಲಿ ಮಗನಿಗಾಗಿ ಜೀಪ್ ತಾಯಾರಿಸಿದ್ದು, ಈಗ ಅಪ್ಪನಿಗಾಗಿ ಬೈಕ್ ತಯಾರಿಸಿದ್ದಾರೆ.

ಬೈಕ್ ತಯಾರಿಸಬೇಕಾದರೆ ಅದಕ್ಕೆ ಕಚ್ಚಾವಸ್ತುಗಳು ಬೇಕಾಗುತ್ತವೆ. ಹೀಗಾಗಿ ಊರಿನಲ್ಲಿನ ಒಬ್ಬರ ಬಳಿ ಗುಜರಿಗೆ ಸೇರಿ ತುಕ್ಕು ಹಿಡಿಯುತ್ತಿದ್ದ ಒಂದು ಬೈಕ್​ನ್ನು 3 ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದೇನೆ. ಇನ್ನು ಅದಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನು ಅಲ್ಲಲ್ಲಿ ಹುಡುಕಿಕೊಂಡು, ಕೆಲವನ್ನು ಆನ್ ಲೈನ್ ಮೂಲಕ ತರಿಸಿಕೊಂಡು, ವಾಹನ ತಯಾರು ಮಾಡಲು ಶುರುಮಾಡಿದ್ದೆ. ಎಪ್ರೀಲ್ 15 ರಿಂದ ಆರಂಭಿಸಿದ್ದು, ಜೂಲೈನಲ್ಲಿ ಬೈಕ್ ರೆಡಿಯಾಗಿದೆ. ಇನ್ನೋಂದು ವಿಶೇಷವೆಂದರೆ ಈ ಬೈಕ್ ಎಂತಹ ರಸ್ತೆಯಲ್ಲಿಯೂ ಕೂಡಾ ಸಲೀಸಾಗಿ ಓಡಾಡುತ್ತದೆ. ಸದ್ಯ ನಾನು ತಯಾರಿಸಿದ ಬೈಕ್ ಹಾಗೂ ಜೀಪ್​ ನೋಡಲು ದಿನಕ್ಕೆ ಹತ್ತಾರು ಜನರು ಬಂದು ಹೋಗುತ್ತಿದ್ದಾರೆ ಇದೆಲ್ಲವನ್ನು ನೋಡುವಾಗ ಹೆಮ್ಮೆಯಾಗುತ್ತದೆ ಎಂದು ಅಮೀರ್ ಅಲಿ ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಟರಿ ಚಾಲಿತ ಬೈಕ್
ಅಮೀರ್ ಅಲಿ ತಯಾರಿಸಿದ ಬೈಕ್​ನ ವಿಶೇಷತೆ ಎನೆಂದರೆ ಬ್ಯಾಟರಿ ಚಾಲಿತ ಬೈಕ್ ಇದಾಗಿದ್ದು, ನಾಲ್ಕುವರೆ ಗಂಟೆ ಚಾರ್ಜ್ ಮಾಡಿದರೆ ಸುಮಾರು 52 ಕಿಲೋಮೀಟರ್ ವರೆಗೆ ಸರಿಸುಮಾರು ಎರಡು ಕ್ವಿಂಟಲ್ ಭಾರ ಹೊತ್ತುಕೊಂಡು ಸಾಗಬಲ್ಲ ಸಾಮರ್ಥ್ಯ ಹೊಂದಿದೆ. ಈ ಬೈಕ್​ನಲ್ಲಿ 48 ಓಲ್ಟ್​ನ 750 ವ್ಯಾಟ್ ಸಾಮರ್ಥ್ಯದ ಮೋಟರ್ ಅಳವಡಿಸಲಾಗಿದ್ದು, ಜತೆಗೆ 48 ಓಲ್ಟ್​ನ 30 ಎಎಚ್ ಸಾಮರ್ಥ್ಯದ ಲಿಥೆನಿಯಂ ಐಕಾನ್ ಬ್ಯಾಟರಿ ಅವಡಿಸಲಾಗಿದೆ.

ಈ ಬೈಕ್ ತಯಾರಿಸಲು ಅಮೀರ್ ಅಲಿ 37 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಬ್ಯಾಟರಿ ಚಾಲಿತ ಈ ಬೈಕ್ ಬಗ್ಗೆ ಅಮೀರ್ ಅವರ ತಂದೆ ಮೊಹ್ಮದ್ ಯೂಸೂಪ್ ಸಂತೋಷ ವ್ಯಕ್ತಪಡಿಸಿದ್ದು, ಹೀಗೆ ನನ್ನ ಮಗ ನನಗೆ ಬೈಕ್ ಮಾಡಿಕೊಟ್ಟಿದ್ದು, ತುಂಬಾ ಖುಷಿಯಾಗಿದೆ. ಅವರು ಹೀಗೆ ಏನನ್ನಾದಾರೂ ಸಾಧನೆ ಮಾಡಲಿ ಎನ್ನುವುದು ನನ್ನ ಆಸೆ ಎಂದು ಹೇಳಿದ್ದಾರೆ.

ವರದಿ: ಸುರೇಶ್ ನಾಯಕ್

ಇದನ್ನೂ ಓದಿ:
Poco F3 GT: ಅದ್ಭುತ ಫೀಚರ್ಸ್ ಮೂಲಕ ಹುಬ್ಬೇರುವಂತೆ ಮಾಡಿರುವ ಈ ಫೋನ್ ಜುಲೈ 23ಕ್ಕೆ ಲಾಂಚ್

Bikes Under 1 Lakh: ಬೈಕ್​ ಕೊಳ್ಳಬೇಕೆ? ಇಲ್ಲಿವೆ 1 ಲಕ್ಷ ರೂಪಾಯಿ ಒಳಗಿನ ಅತ್ಯುತ್ತಮ ಬೈಕ್​ಗಳು