ಬೀದರ್​: ಬರದ ನಡುವೆಯೂ ಭರಪೂರ ಅಂತರ್ಜಲ; ಆದರೂ ನೀರಿಗಾಗಿ ಗ್ರಾಮಸ್ಥರ ಪರದಾಟ, ಯಾಕೆ ಗೊತ್ತಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 09, 2024 | 8:24 PM

ರಾಜ್ಯದಲ್ಲಿ ಬರದಿಂದಾಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಬಾವಿ ಬೋರ್​ವೆಲ್​​ನಲ್ಲಿಯೂ ನೀರು ಪಾತಾಳ ಸೇರಿದ್ದು, ಕುಡಿಯುವ ನೀರಿಗೆ ಜನ ಪರದಾಡುತ್ತಿದ್ದಾರೆ. ಆದರೆ, ಈ ಗ್ರಾಮದಲ್ಲಿನ ಬಾವಿ ಬೋರವೆಲ್​ನಲ್ಲಿ ಬಾರಿ ಪ್ರಮಾಣದ ನೀರಿದ್ದರೂ ಕೂಡ ಕುಡಿಯುವ ಹಾಗಿಲ್ಲ, ಮುಟ್ಟೋ ಹಾಗಿಲ್ಲ. ಯಾಕೆ ಅಂತೀರಾ? ಈ ಸ್ಟೋರಿ ಓದಿ.

ಬೀದರ್​: ಬರದ ನಡುವೆಯೂ ಭರಪೂರ ಅಂತರ್ಜಲ; ಆದರೂ ನೀರಿಗಾಗಿ ಗ್ರಾಮಸ್ಥರ ಪರದಾಟ, ಯಾಕೆ ಗೊತ್ತಾ?
ನೀರಿಗಾಗಿ ಗ್ರಾಮಸ್ಥರ ಪರದಾಟ
Follow us on

ಬೀದರ್​, ಏ.09: ಭೀಕರ ಬಿರುಬಿಸಿಲಿಗೆ ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಬಾವಿ, ಬೋರ್​ವೆಲ್​​ನಲ್ಲಿ ನೀರು ಕಡಿಮೆಯಾಗಿದ್ದು, ಕುಡಿಯುವ ನೀರಿನ ಸಮಸ್ಯೆಯಿಂದ ಜನರು ಪರದಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಂತೂ ಒಂದು ಕೊಡ ನೀರಿಗಾಗಿ ಕೆಲಸ ಕಾರ್ಯಗಳನ್ನ ಬಿಟ್ಟು ಗಂಟೆ ಗಟ್ಟಲೇ ಕಾಯಬೇಕಾದ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಆದರೆ, ಬೀದರ್(Bidar) ತಾಲೂಕಿನ ಗೊರನಳ್ಳಿ ಗ್ರಾಮದ ಸುತ್ತಮುತ್ತಲ್ಲಿನ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿನ ಬಾವಿ ಬೋರ್​ವೆಲ್​ನಲ್ಲಿ ನೀರು ಬರಪೂರ ಇದ್ದು, ತುಂಬಿ ತುಳುಕುತ್ತಿವೆ. ಆದರೆ, ಆ ನೀರು ಸಂಪೂರ್ಣ ವಿಷವಾಗಿದ್ದು, ನೀರನ್ನ ಜನರು, ಪ್ರಾಣಿ ಪಕ್ಷಿಗಳೂ ಕುಡಿಯಲಾಗುತ್ತಿಲ್ಲ.

ಒಂದು ವೇಳೆ ಈ ನೀರು ಕುಡಿದರೆ ಅನಾರೋಗ್ಯಕ್ಕೆ ತುತ್ತಾಗೋದು ಗ್ಯಾರಂಟಿ. ಹೀಗಾಗಿ ಬಾವಿ,ಬೋರ್​ವೆಲ್​ನಲ್ಲಿ ನೀರಿದ್ದರೂ. ಜನರ ದಾಹ ಇಂಗಿಸುತ್ತಿಲ್ಲ. ಈ ನೀರು ವಿಷವಾಗಲು ಕಾರಣ ಬೀದರ್ ತಾಲೂಕಿನ ಗೊರನಳ್ಳಿ ಪಕ್ಕದಲ್ಲಿ ಸೀವೇಜ್ ವಾಟರ್ ಟ್ರೀಟ್ ಮೆಂಟ್ ಪ್ಲಾಂಟ್ ಎಸ್​ಟಿಪಿ ಘಟಕವನ್ನ ಸ್ಥಾಪಿಸಲಾಗಿದೆ. ಇಲ್ಲಿ ನಿರ್ಮಾಣ ಮಾಡಿದ ಶುದ್ದೀಕರಣ ಘಟಕವು  ಅವೈಜ್ಜಾನಿಕ ರೀತಿಯಿಂದ ಕೂಡಿದ್ದು, ಒಳಚರಂಡಿ ನೀರನ್ನ ಶುದ್ಧಿಕರಣ ಘಟಕದಲ್ಲಿ ದಿನಕ್ಕೆ ಲಕ್ಷಾಂತರ ಲೀಟರ್​ ನೀರನ್ನ ಬಿಡಲಾಗುತ್ತಿದೆ. ಆದರೆ, ಇಲ್ಲಿ ಬಿಟ್ಟಿರುವ ಒಳ್ಳಚರಂಡಿ ನೀರು ಭೂಮಿಯಲ್ಲಿ ಇಂಗಿಕೊಂಡು ಸುತ್ತಮುತ್ತ ಸುಮಾರು ಐದಾರು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಬಾವಿ, ಬೋರವೆಲ್​ನಲ್ಲಿ ಸೇರಿಕೊಳ್ಳುತ್ತಿದೆ.

ಇದನ್ನೂ ಓದಿ:ಭೀಕರ ಬರಕ್ಕೆ ಒಣಗಿದ ಕೆರೆ-ಕಟ್ಟೆಗಳು; ಹನಿ ನೀರಿಗಾಗಿ ಪ್ರಾಣಿ-ಪಕ್ಷಿಗಳ ಪರದಾಟ

ಇದರಿಂದ ಬಾವಿ, ಬೋರವೆಲ್​ನಲ್ಲಿ ಸೇರಿಕೊಳ್ಳುತ್ತಿರುವ ವಿಷಕಾರಕ ಪದಾರ್ಥಗಳು ಜನರ ದೇಹ ಸೇರುತ್ತಿದೆ. ಇದರಿಂದ ಗ್ರಾಮಸ್ಥರು ಅನೇಕ ಖಾಯಿಲೆಯಿಂದ ಬಳಲುವಂತಾಗಿದ್ದು, ಸಾಕಷ್ಟು ಸಮಸ್ಯೆಯನ್ನ ಗ್ರಾಮಸ್ಥರು ಅನುಭವಿಸುತ್ತಿದ್ದಾರೆ. ಈಗಾಗಲೇ ಗ್ರಾಮದಲ್ಲಿ ಹತ್ತಾರು ಜಾನುವಾರುಗಳು ಇಂತಹದ್ದೇ ನೀರನ್ನ ಸೇವಿಸಿ ಅಸುನೀಗಿವೆ ಎಂದು ಇಲ್ಲಿನ ಜನರು ತಮ್ಮ ನೋವನ್ನ ತೋಡಿಕೊಳ್ಳುತ್ತಿದ್ದಾರೆ.

ಒಂದು ದಶಕದ ಹಿಂದೆ ಈ ಗೊರನಳ್ಳಿ ಗ್ರಾಮದಲ್ಲಿನ ಬಾವಿಯಲ್ಲಿನ ನೀರು ರುಚಿ ಹಾಗೂ ತಂಪು ತೆಂಗಿನ ಹಾಲಿನಂತೆ ಪವಿತ್ರವಾಗಿತ್ತು. ಅಷ್ಟೇ ರುಚಿಯೂ ಕೂಡ ಇತ್ತು. ಹೀಗಾಗಿ ಗೊರನಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮದ ಜನರು ಇಲ್ಲಿಗೆ ಬಂದು ಇಲ್ಲಿನ ಬಾವಿಯಲ್ಲಿನ ನೀರನ್ನ ತೆಗೆದುಕೊಂಡು ಹೋಗುತ್ತಿದ್ದರು. ಈಗ ಇದೆ ನೀರನ್ನ ಪಕ್ಕದ ಹಳ್ಳಿಯವರೆಲ್ಲ ಸ್ವಂತ ಗ್ರಾಮಸ್ಥರೇ ಕುಡಿಯುತ್ತಿಲ್ಲ, ಅಷ್ಟೋಂದು ನೀರು ಕಲ್ಮಶವಾಗಿದೆ. ಈ ಅವೈಜ್ಞಾನಿಕ ಒಳಚರಂಡಿ ಕಾಮಗಾರಿಯಿಂದ ಅಲ್ಲಲ್ಲಿ ನೀರು ಸೋರಿಕೆಯಾಗಿ ಭೂಮಿಯಲ್ಲಿ ಇಂಗುತ್ತಿದೆ. ಇದರಿಂದ ಗೊರನಳ್ಳಿ, ವಾಡಿ, ಚಿಟ್ಟಾವಾಡಿ ಸೇರಿದಂತೆ ಸುಮಾರು 2 ಗ್ರಾಮದ ಜನರು ಕುಡಿಯುವ ನೀರಿನಲ್ಲಿ ವಿಷಕಾರಕ ಅಂಶಗಳು ಕೂಡ ಪತ್ತೆಯಾಗಿವೆ. ಹೀಗಾಗಿ ಅನಿವಾರ್ಯವಾಗಿ ಜನರು ಬೀದರ್​ಗೆ ಬಂದು ಪಿಲ್ಟರ್ ನೀರನ್ನ ತೆಗೆದುಕೊಂಡು ಹೋಗುವಂತಾ ಸ್ಥಿತಿ ನಿರ್ಮಾಣವಾಗಿದೆ.

ಬರದ ನಾಡಾಗಿರುವ ಬೀದರ್​​ನಲ್ಲಿ ಅಂತರ್ಜಲ ಬಿಟ್ಟರೇ ಬೇರೆ ನೀರಿನ ಮೂಲಗಳಿಲ್ಲ. ನದಿಗಳಿಲ್ಲದ ಈ ಭಾಗದಲ್ಲಿ ಮಳೆಗಾಲದಲ್ಲಿ ಕೆರೆಗಳೇ ಆಸರೆ, ಬೇಸಿಗೆ ಆರಂಭಕ್ಕೆ ಕೆರೆಗಳು ಬತ್ತಿ ಖಾಲಿಯಾಗುತ್ತವೆ. ವರ್ಷಪೂರ್ತಿ ಅಂತರ್ಜಲವೇ ಕುಡಿಯೋದಕ್ಕೂ, ಕೃಷಿಗೂ ಆಧಾರ, ಹೀಗಿರುವಾಗ ಯಾವುದೋ ಒಂದು ಕಂಪನಿ ತನ್ನ ಲಾಭಕ್ಕೋಸ್ಕರ ಕಳಪೆ ಕಾಮಗಾರಿ ಮಾಡಿ ಇಡೀ ಅಂತರ್ಜಲವನ್ನ ವಿಷವನ್ನಾಗಿ ಮಾಡಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಜಿಲ್ಲಾಡಳಿತ ದೀರ್ಘ ಮೌನವಹಿಸಿರುವುದು ಗ್ರಾಮಸ್ಥರಲ್ಲಿ ಆಕ್ರೋಶ ಉಂಟುಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ