ಭೀಕರ ಬರಕ್ಕೆ ಒಣಗಿದ ಕೆರೆ-ಕಟ್ಟೆಗಳು; ಹನಿ ನೀರಿಗಾಗಿ ಪ್ರಾಣಿ-ಪಕ್ಷಿಗಳ ಪರದಾಟ
ಭೀಕರ ಬರಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಬರ ತಾಂಡವವಾಡುತ್ತಿರುವ ಕಾರಣಕ್ಕೆ ಕುಡಿಯುವ ನೀರಿಗಾಗಿ ಜನ ಹಾಹಾಕಾರ ಎದುರಿಸವಂತಾಗಿದೆ. ಜನರಾದರೂ ಎಲ್ಲಾದ್ರು ದುಡ್ಡು ಕೊಟ್ಟು ದಾಹ ತೀರಿಸಿಕೊಳ್ಳಬಹುದು. ಆದ್ರೆ, ಪ್ರಾಣಿ-ಪಕ್ಷಿಗಳ ಪರಸ್ಥಿತಿ ಹೇಳತೀರದು. ಕೆರೆ-ಕಟ್ಟೆಗಳು ಒಣಗಿ ಹೋಗಿದ್ದರಿಂದ ಪ್ರಾಣಿ-ಪಕ್ಷಿಗಳ ಸಂಕುಲಕ್ಕೆ ಜಲ ಕಂಕಟ ಎದುರಾಗಿದೆ. ಇದರಿಂದ ಮೂಖ ಪ್ರಾಣಿಗಳು ಹನಿ ನೀರಿಗಾಗಿ ಹುಡುಕಾಡುವಂತಾಗಿದೆ.
ಯಾದಗಿರಿ, ಮಾ.31: ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಅದರಲ್ಲೂ ಯಾದಗಿರಿ(Yadgiri) ಜಿಲ್ಲೆಯಲ್ಲಂತೂ ಬರದ ಬಾರಿ ಎಫೆಕ್ಟ್ ಆವರಿಸಿದೆ. ಜೊತೆಗೆ ರೈತರು ಮಳೆ ಬಾರದಕ್ಕೆ ಮುಂಗಾರು ಮತ್ತು ಹಿಂಗಾರು ಬೆಳೆಯನ್ನ ಕಳೆದುಕೊಂಡಿದ್ದಾರೆ. ಇತ್ತ ಮಳೆ ಇಲ್ಲದ್ದಕ್ಕೆ ಪ್ರತಿ ವರ್ಷ ತುಂಬಿ ತುಳುಕುತ್ತಿದ್ದ ಕೆರೆಗಳು ಈಗ ಸಂಪೂರ್ಣವಾಗಿ ಒಣಗಿ ಹೋಗಿವೆ. ಬೇಸಿಗೆ ಕಾಲದಲ್ಲೂ ಬತ್ತದ ಕೆರೆಗಳು ಈಗ ಭೀಕರ ಬರಕ್ಕೆ ಖಾಲಿ ಖಾಲಿಯಾಗಿವೆ. ಇತ್ತ ಜಿಲ್ಲೆಯ ಹಳ್ಳಿಗಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ದುಡ್ಡು ಕೊಟ್ಟಾದರೂ ನೀರು ಕೊಂಡುಕೊಂಡು ದಾಹ ತೀರಿಸಿಕೊಳ್ಳಬಹುದು. ಆದ್ರೆ, ಮೂಖ ಪ್ರಾಣಿಗಳ ರೋಧನೆ ಹೇಳತೀರದು.
ಮೂಖ ಪ್ರಾಣಿಗಳ ದಾಹ ತೀರಿಸಲು ಕ್ರಮಕ್ಕೆ ಆಗ್ರಹಿಸಿದ ಜನರು
ಮಾತು ಬಾರದ ಪ್ರಾಣಿ-ಪಕ್ಷಿಗಳು ಹಳ್ಳಕೊಳ್ಳಗಳಲ್ಲಿ ಹನಿ ನೀರಿಗಾಗಿ ಹುಡುಕಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಪಕ್ಷಿಗಳಿಗೂ ಹನಿ ನೀರು ಸಿಗುತ್ತಿಲ್ಲ. ಬದಲಿಗೆ ಕೆರೆಗಳು ಬಿರುಕು ಬಿಟ್ಟಿದ್ದು, ನೀರಿಗಾಗಿ ಬಾಯ್ತೆರೆದು ಕುಳಿತುಕೊಂಡಿವೆ. ಇದೆ ಕಾರಣಕ್ಕೆ ಮೂಖ ಪ್ರಾಣಿಗಳ ದಾಹ ತೀರಿಸಲು ಜಿಲ್ಲಾಡಳಿತ ಅಥವಾ ಜನಪ್ರತಿನಿಧಿಗಳು ನೀರಿನ ವ್ಯವಸ್ಥೆ ಮಾಡಬೇಕೆಂದು ಜನ ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ:ಹಾವೇರಿ: ಸ್ವಂತ ಹಣದಲ್ಲಿ ಬೋರ್ವೆಲ್ ಕೊರಸಿ ನದಿಗೆ ನೀರು ಬಿಟ್ಟ ರೈತ: ಬರಗಾಲದ ಭಗೀರಥ ಎಂದ ಗ್ರಾಮಸ್ಥರು
ಇನ್ನು ಯಾದಗಿರಿ ತಾಲೂಕಿನ ವರ್ಕನಹಳ್ಳಿ ಗ್ರಾಮದ ಹೊರ ಭಾಗದಲ್ಲಿರುವ ಸಣ್ಣ ಕೆರೆ ಈಗ ಸಂಪೂರ್ಣವಾಗಿ ಬತ್ತಿ ಹೋಗಿದೆ. ಈ ಬಾರಿ ಮಳೆ ಕಡಿಮೆ ಪ್ರಮಾಣದಲ್ಲಿ ಆಗದ ಕಾರಣಕ್ಕೆ ಪೂರ್ಣ ಪ್ರಮಾಣದಲ್ಲಿ ಕೆರೆ ತುಂಬಿರಲಿಲ್ಲ. ಆದ್ರೆ, ಈಗ ಬೇಸಿಗೆ ಇರುವ ಕಾರಣಕ್ಕೆ ಕಳೆದ 20 ದಿನಗಳಿಂದ ಬಿಸಿಲು ಕೂಡ ಹೆಚ್ಚಾಗುತ್ತಿರುವುದಕ್ಕೆ ಕೆರೆ ಸಂಪೂರ್ಣವಾಗಿ ಬತ್ತಿ ಹೋಗಿವೆ. ನೀರು ನಿಲ್ಲುವ ಕೆರೆ ಒಡಲು ಬಿರುಕು ಬಿಟ್ಟಿದೆ. ಕೆರೆ ಖಾಲಿಯಾಗಿ ನೀರಿಗಾಗಿ ಬಾಯ್ತೆರೆದಿದೆ. ನೂರಾರು ಪಕ್ಷಿಗಳ ಜೀವ ಜಲವಾಗಿದ್ದ ಕೆರೆ ಖಾಲಿಯಾಗಿದ್ದರಿಂದ, ಹಕ್ಕಿಗಳು ಬಿಸಿಲಿನ ಹೊಡೆತದಿಂದ ತತ್ತರಿಸಿ ಹೋಗಿ, ಕೆರೆಯಲ್ಲಿ ನೀರು ಹುಡುಕಾಡುತ್ತಿದ್ದು, ಹಕ್ಕಿಗಳು ನೀರು ಹುಡುಕುವ ದೃಶ್ಯ ಮನಕಲಕುವಂತಿದೆ.
ಕೇವಲ ಪಕ್ಷಿಗಳು ಅಷ್ಟೇ ಅಲ್ಲದೆ, ಜಾನುವಾರುಗಳಿಗೆ ನೀರಿನ ತತ್ವಾರ ಶುರುವಾಗಿದೆ. ಬೇಸಿಗೆ ಇರುವ ಕಾರಣಕ್ಕೆ ಜಮೀನುಗಳಲ್ಲಿ ಮೇಯಲು ಹೋಗುವ ಜಾನುವಾರುಗಳು ವಾಪಸ್ ಮನೆಗೆ ಮಧ್ಯಾಹ್ನದ ಹೊತ್ತಲ್ಲಿ ಬರುವಾಗ ಕೆರೆಗಳತ್ತ ನೀರು ಕುಡಿಯಲು ಬರುತ್ತಿವೆ. ಆದ್ರೆ, ಕೆರೆಯಲ್ಲಿ ನೀರು ಖಾಲಿಯಾಗಿರುವ ಕಾರಣಕ್ಕೆ ಜಾನುವಾರುಗಳಿಗೂ ಸಹ ಹನಿ ನೀರು ಸಿಗದಂತ ಪರಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಭೀಕರ ಬರ, ದಿನೇ ದಿನೇ ಹೆಚ್ಚಾಗುತ್ತಿರುವ ತಾಪಮಾನದಿಂದ ಮನುಷ್ಯ ಜೀವಿಗಳು ಜೊತೆ ಪ್ರಾಣಿ ಜೀವಿಗಳು ಸಹ ಪರದಾಡುವಂತ ಪರಸ್ಥಿತಿ ನಿರ್ಮಾಣವಾಗಿದೆ. ಮಾತು ಬಾರದ ಮೂಖ ಪ್ರಾಣಿ-ಪಕ್ಷಿಗಳ ದಾಹ ತೀರಿಸುವ ಕೆಲಸಕ್ಕೆ ಜಿಲ್ಲಾಡಳಿತ ಮತ್ತು ಪಕ್ಷಿ ಪ್ರೇಮಿಗಳು ಮುಂದಾಗಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ