ಬೀದರ್: ಕಷ್ಟಪಟ್ಟು ಓದಿ ಕಂಪ್ಯೂಟರ್ ಇಂಜಿನಿಯರಿಂಗ್ ಮುಗಿಸಿದ ಯುವಕನಿಗೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೈತುಂಬಾ ಸಂಬಳದ ಕೆಲಸವೂ ಸಿಕ್ಕಿತು. ಅಲ್ಲಿ ಎಂಟು ವರ್ಷಗಳ ಕಾಲ ಚೆನ್ನಾಗಿ ಕೆಲಸ ಮಾಡಿದ್ದರು. ಆದರೆ ಆತನಿಗೆ ಕೃಷಿ ಎಡೆಗೆ ಆಸಕ್ತಿ ಹೆಚ್ಚುತ್ತಾ ಹೋಯಿತು. ಹೀಗಾಗಿ ದೊಡ್ಡ ಕಂಪನಿಯ ಕೆಲಸಕ್ಕೆ ಗುಡ್ ಬೈ ಹೇಳಿ ಕೃಷಿಯಲ್ಲಿ ತೋಡಗಿಕೊಂಡಿದ್ದಾರೆ. ಈಗ ಸಾಫ್ಟ್ವೇರ್ ಕಂಪನಿಯಲ್ಲಿ ಪಡೆಯುವ ಸಂಬಳಕ್ಕಿಂತಲೂ ಹೆಚ್ಚು ಹಣವನ್ನು ಕೃಷಿಯಲ್ಲಿ ಗಳಿಸುವುದರ ಮೂಲಕ ಸೈ ಎಣಿಸಿಕೊಂಡಿದ್ದಾರೆ.
ಗಡಿ ಜಿಲ್ಲೆ ಬೀದರ್ ಅಂದರೆ ಸಾಕು ಮೊದಲಿಗೆ ನೆನಪಿಗೆ ಬರುವುದು ಬರ. ಸದಾ ಸಂಕಷ್ಟದಲ್ಲಿ ಬದುಕು ಸಾಗಿಸುವ ಇಲ್ಲಿನ ರೈತರ ಗೋಳು ಹೇಳತೀರದು. ಜೊತೆಗೆ ಆಗಾಗ ಸಾಲದ ಬಾಧೆಗೆ ನೇಣಿಗೆ ಕೊರಳು ಕೊಡುವ ಇಲ್ಲಿನ ರೈತರ ಗೋಳು ಮಾತ್ರ ಜನಪ್ರತಿಧಿನಿಧಿಗಳಿಗೆ ಕೇಳಿಸುವುದೇ ಇಲ್ಲ. ಆದರೆ ಇಲ್ಲೋಬ್ಬ ರೈತ ಇಂಥ ಹತ್ತಾರು ಸಮಸ್ಯೆಗಳ ಮಧ್ಯೆ ಅರ್ಧ ಎಕರೆ ಜಮೀನಿನಲ್ಲಿ ನೆರಳು ಪರದೇ ಮೂಲಕ ಜರ್ಬೆರಾ ಹೂ ಬೆಳೇದು, ಈಗ ತಿಂಗಳಿಗೆ ಸಾವಿರಾರು ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಕಂಪ್ಯೂಟರ್ ಇಂಜನಿಯರ್ ಹುದ್ದೆಯ ಸಂಬಳ ಪಡೆದು ನಗರದಲ್ಲಿ ಜೀವನ ನಡೆಸಬೇಕಾಗಿದ್ದ ಜೀವನಕ್ಕೆ ವಿದಾಯ ಹೇಳಿದ ಇವರು. ಸ್ವಾವಲಂಬಿ ಜೀವನ ಸಾಗಿಸಬೇಕು, ಸಂತಸದ ಬದುಕು ಕಟ್ಟಿಕೊಳ್ಳಬೇಕೆಂಬ ನಿರ್ಧಾರದಿಂದ ಕಳೆದೆರಡು ವರ್ಷಗಳಿಂದ ಜರ್ಬೆರಾ ಹೂವು ಬೆಳೆದು ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಯುವ ರೈತ ವಿಜಯ್ ಸೂರ್ಯವಂಶಿ ಬರೀ ಗೋವಿನಜೋಳ, ಜೋಳ, ಕಬ್ಬಿನ ಬೆಳೆಯನ್ನು ನೆಚ್ಚದೇ ಹೊಸ ಬೆಳೆಗಳನ್ನು ಬೆಳೆದು ಯಶಸ್ವಿಯಾಗಬೇಕೆಂಬ ತುಡಿತದಿಂದ ಹೂವು ಬೆಳೆದಿದ್ದಾರೆ.
ಕಂಪನಿಯೊಂದರಲ್ಲಿ ಎಂಟು ವರ್ಷ ಕೆಲಸ ಮಾಡಿದ್ದೆ. ನಗರದ ಒತ್ತಡದ ಜೀವನಕ್ಕೆ ಬೈ ಹೇಳಿ, ನನ್ನದೇ ಆದ ಜಮೀನಿನಲ್ಲಿ ಹೂವು ಬೆಳೆಯುತ್ತಿದ್ದೇನೆ. ಇದು ನನ್ನ ಮನಸ್ಸಿಗೆ ಸಂತಸ ಹಾಗೂ ತೃಪ್ತಿ ತಂದಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳೆಲ್ಲರೂ ಸಹಕಾರ ನೀಡಿದ್ದಾರೆ. ತಂದೆಯ ಪ್ರೇರಣೆಯಿಂದ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದು ಯುವ ರೈತ ವಿಜಯ್ ಸೂರ್ಯವಂಶಿ ತಿಳಿಸಿದ್ದಾರೆ.
ಈ ರೈತನ ಬಳಿ ಸುಮಾರು 20 ಎಕರೆಯಷ್ಟು ಕೃಷಿ ಭೂಮಿಯಿದೆ ಅದರ ಫೈಕಿ ಅರ್ಧ ಎಕರೆಯಲ್ಲಿ ಕೃಷಿಭಾಗ್ಯ ಯೋಜನೆಯ ಸೌಲಭ್ಯ ಪಡೆದುಕೊಂಡು ಪಾಲಿಹೌಸ್ ನಿರ್ಮಾಣ ಮಾಡಿದ್ದಾರೆ. ಕೆಂಪು, ಗುಲಾಬಿ, ಬಿಳಿ, ಹಳದಿ ಸುಮಾರು ಆರು ಬಣ್ಣಗಳ ಜರ್ಬೆರಾ ಹೂವುಗಳನ್ನು ಅವರು ಬೆಳೆಯುತ್ತಾರೆ. ಅರ್ಧ ಎಕರೆಯ ಪಾಲಿಹೌಸ್ ಕೃಷಿ ನಿರ್ವಹಣೆ ಮಾಡಲು ಇಬ್ಬರು ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ. ನಿತ್ಯ ಸರಸಾರಿ ಎರಡು ಸಾವಿರದಷ್ಟು ಹೂವುಗಳು ಕೊಯ್ಲಿಗೆ ಸಿಗುತ್ತವೆ. ಇವುಗಳನ್ನು ಬಾಕ್ಸ್‌ಗಳಲ್ಲಿ ತುಂಬಿ ನಗರದಲ್ಲಿ ಮಾರಾಟ ಮಾಡಿ, ಇನ್ನೂಳಿದ ಹೂವುಗಳನ್ನು ಬಸ್‌ನಲ್ಲಿ ಹೈದರಾಬಾದ್ ಹಾಗೂ ತೆಲಂಗಾಣ ಬಸ್‌ಗಳ ಮೂಲಕ ರವಾನೆ ಮಾಡುತ್ತಾರೆ.
ಪುನಾದ ಕಂಪನಿಯೊಂದರ ಮೂಲಕ 26 ರೂಪಾಯಿಗೆ ಒಂದು ಜರ್ಬೆರಾ ಸಸಿ ಪಡೆದು 20 ಗುಂಟೆಯಲ್ಲಿ ಒಟ್ಟು 11,200 ಸಸಿಗಳನ್ನು ಬೆಳೆಸಿದ್ದಾರೆ. 2019 ಆಗಸ್ಟ್‌ನಲ್ಲಿ ಸಸಿಗಳನ್ನು ನಾಟಿ ಮಾಡಿದ್ದು, 2019ರ ನವೆಂಬರ್‌ನಿಂದ ಹೂವುಗಳ ಉತ್ಪಾದನೆ ಆರಂಭವಾಗಿದೆ. ಒಮ್ಮೆ ನಾಟಿ ಮಾಡಿದ ಗಿಡಗಳಿಂದ ಐದು ವರ್ಷಗಳವರಿಗೆ ಉತ್ತಮ ಹೂವಿನ ಇಳುವರಿ ಪಡೆಯಲು ಅವಕಾಶ ಇದೆ. ಸಸಿಗಳ ಪೋಷಣೆಗೆ ನಾನಾ ಔಷಧಗಳನ್ನು ಬಳಕೆ ಮಾಡುತ್ತಾರೆ.
ನಗರ ಪ್ರದೇಶದಲ್ಲಿ ಸಭೆ, ಸಮಾರಂಭಗಳಲ್ಲಿ ಶುಭಾಶಯ ಕೋರಲು, ಸನ್ಮಾನ, ಮದುವೆಗಳಲ್ಲಿ ಮಾಡುವ ಹೂವಿನ ಅಲಂಕಾರ, ಧಾರ್ಮಿಕ ಕಾರ್ಯಕ್ರಮ, ಹೀಗೆ ನಾನಾ ಕಾರ್ಯಕ್ರಮಗಳಲ್ಲಿ ಜರ್ಬೆರಾ ಬಳಕೆ ಮಾಡಲಾಗುತ್ತದೆ. ಹೀಗಾಗಿ ಈ ಹೂವಿಗೆ ವರ್ಷದ ಎಲ್ಲ ಕಾಲದಲ್ಲೂ ಬೇಡಿಕೆಯಿದೆ. ಮದುವೆ ಸೀಸನ್‌ನಲ್ಲಿ ಬೇಡಿಕೆ ಹೆಚ್ಚು. ಮದುವೆ ಅವಧಿಯಲ್ಲಿ ಒಂದು ಹೂವಿಗೆ 10 ರಿಂದ 12 ರೂಪಾಯಿ ದರ ಸಿಗುತ್ತದೆ. ಉಳಿದ ಅವಧಿಯಲ್ಲಿ ಸರಾಸರಿ 3 ರೂಪಾಯಿ ದರ ಸಿಗುತ್ತದೆ.
ಕೊಯ್ಲು ಮಾಡಿದ ಒಂದು ದಿನದಲ್ಲಿ ಹೂವುಗಳು ಮಾರುಕಟ್ಟೆಗೆ ತಲುಪುತ್ತವೆ. ಹೂವಿನ ಕಾಂಡವನ್ನು ನೀರಿನಲ್ಲಿ ಇಟ್ಟರೆ 3ರಿಂದ 4 ದಿನಗಳ ವರೆಗೆ ಹೂವು ಚೆನ್ನಾಗಿ ಇರುತ್ತದೆ. ಇನ್ನೂ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜರಬೇರಾ ಹೂವು ಬೆಳೆಯುತ್ತಿರುವುದರಿಂದ ಹೂವು ಮಾರಾಟಗಾರರು ಇದೇ ರೈತನ ಬಳಿಗೆ ಬಂದು ಹೂವು ಖರೀದಿ ಮಾಡಿಕೊಂಡು ಹೋಗುತ್ತಾರೆ. ಇಲ್ಲಿ ಬೆಳೆದ ಹೂ ಚೆನ್ನಾಗಿದೆ. ಹೀಗಾಗಿ ಇಲ್ಲಿ ಖರೀದಿ ಮಾಡುತ್ತೆವೆಂದು ಹೂವು ಮಾರಾಟಗಾರರಾದ ಪ್ರಕಾಶ್ ಹೇಳಿದ್ದಾರೆ.
ವೈಜ್ಞಾನಿಕವಾಗಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಲಕ್ಷ ಲಕ್ಷ ರೂಪಾಯಿ ಆದಾಯವನ್ನು ಹೇಗೇ ಗಳಿಸಬೇಕೆಂದು ಯುವ ರೈತ ತೋರಿಸಿದ್ದು, ಜಿಲ್ಲೆಗೆ ಮಾದರಿ ರೈತನಾಗಿ ನಿಂತಿದ್ದಾರೆ. ಅಷ್ಟೇ ಅಲ್ಲದೆ ಕೇವಲ ಅರ್ಧ ಎಕರೆ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಪಾಲಿಹೌಸ್ನಲ್ಲಿ ಕಡಿಮೆ ನೀರಿನಲ್ಲಿ ಬಂಪರ್ ಹೂವು ಬೆಳೆದು, ವರ್ಷಕ್ಕೆ ಲಕ್ಷ ಲಕ್ಷ ರೂಪಾಯಿ ಗಳಿಸುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
ವರದಿ: ಸುರೇಶ್ ನಾಯಕ್
ಇದನ್ನೂ ಓದಿ:
ತರಕಾರಿ ಬೆಳೆದು ನಷ್ಟ ಅನುಭವಿಸಿದ ರೈತರ ಕೈ ಹಿಡಿಯಿತು ಡ್ರ್ಯಾಗನ್ ಫ್ರೂಟ್; ಲಾಕ್ಡೌನ್ ಇದ್ದರೂ ಆದಾಯಕ್ಕೆ ಮೋಸವಿಲ್ಲ
ಪದವೀಧರರ ಹೈಟೆಕ್ ಕೃಷಿ; ಲಕ್ಷ ಲಕ್ಷ ರೂ. ನಿರೀಕ್ಷೆಯಲ್ಲಿರುವ ಯಾದಗಿರಿ ಯುವ ರೈತರು
Published On - 7:59 am, Tue, 14 September 21