ಬೀದರ್: ತಾಲೂಕಿನ ಚಿಮಕೋಡ್ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸೇರಿದ ಸುಮಾರು 35 ಎಕರೆಗಳಷ್ಟು ಜಮೀನು ಒತ್ತುವರಿ ಮಾಡಿಕೊಂಡು ಕೆಲವು ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಇನ್ನೂ ಕೆಲವರು ಅರಣ್ಯ ಇಲಾಖೆಗೆ ಸೇರಿದ ಖಾಲಿ ಜಾಗವನ್ನ ತಮ್ಮದೆಂದು ಇಟ್ಟುಕೊಂಡಿದ್ದಾರೆ. ಇದೀಗ ಖಾಲಿ ಬಿಟ್ಟಿರುವ ಜಮೀನಿಗೆ ಅರಣ್ಯ ಇಲಾಖೆ ತಂತಿ ಬೇಲಿ ಹಾಕಲು ಮುಂದಾಗಿದೆ. ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ(ಫೆ.21) ಮೇಲಾಧಿಕಾರಿಗಳ ಆದೇಶದ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ತಮ್ಮ ಇಲಾಖೆಗೆ ಸೇರಿದ ಮನೆ ಕಟ್ಟದೆ ಇರುವ ಖಾಲಿ ಜಾಗದಲ್ಲಿ ತಂತಿ ಬೇಲಿ ಹಾಕಲು ಮುಂದಾಗಿದ್ದರು. ಆದರೆ ಅದಕ್ಕೆ ಗ್ರಾಮಸ್ಥರು ಒಪ್ಪಲಿಲ್ಲ. ಹತ್ತಾರು ವರ್ಷದಿಂದ ಇಲ್ಲೇ ಇದ್ದೇವೆ ಈಗ ಈ ಜಾಗ ಹೇಗೆ ಅರಣ್ಯ ಇಲಾಖೆಗೆ ಸೇರುತ್ತದೆಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನ ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನು ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಕಳೆದ 20 ಮೂವತ್ತು ವರ್ಷದಿಂದ 60 ಕ್ಕೂ ಹೆಚ್ಚು ಮನೆಗಳನ್ನ ಕಟ್ಟಿಕೊಂಡಿದ್ದಾರೆ. ಇಲ್ಲಿ ಕಟ್ಟಿಕೊಂಡಿರುವ ಮನೆಗಳಿಗೆ ಪಂಚಾಯತಿಗೆ ತೆರಿಗೆಯನ್ನೂ ಸಹ ಕಟ್ಟುತ್ತಿದ್ದಾರೆ. ಕೆಲವೂ ಕಡೆಗಳಲ್ಲಿ ಪಂಚಾಯತ್ನವರು ಸಿಸಿ ರಸ್ತೆಯನ್ನ ಸಹ ಮಾಡಿಸಿದ್ದಾರೆ. ಆದರೆ ಈಗ ಏಕಾಏಕಿ ಅರಣ್ಯ ಇಲಾಖೆಯ ಅಧಿಕಾರಿಗಳು ನೀವು ಮನೆಗಳನ್ನ ಕಟ್ಟಿಕೊಂಡಿರುವ ಜಾಗ ಅರಣ್ಯ ಇಲಾಖೆಯದ್ದೆಂದು ಹೇಳುತ್ತಿದ್ದು, ಇಪ್ಪತ್ತು ಮೂವತ್ತು ವರ್ಷದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲಿ ಹೋಗಿದ್ದರು ಎಂದು ಗ್ರಾಮಸ್ಥರು ಪ್ರಶ್ನೆ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಒಂದು ಸಾವಿರಕ್ಕಿಂತಲೂ ಅಧಿಕ ಅರಣ್ಯ ಇಲಾಖೆಯ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಅದೆಲ್ಲವನ್ನ ಬಿಟ್ಟು ಸಾಲ ಸೋಲ ಮಾಡಿ ಕಟ್ಟಿಕೊಂಡಿರುವ ಮನೆಗಳನ್ನ ಕೆಡವಿ ಅರಣ್ಯ ಇಲಾಖೆಯ ಅಧಿಕಾರಿಗಳು ಅಲ್ಲಿ ಗಿಡಗಳನ್ನ ನೇಡುತ್ತಾರಂತೆ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ನೂರಾರು ಎಕರೆಯಷ್ಟೂ ಒತ್ತುವರಿಯಾಗಿರುವ ಜಮೀನು ಅರಣ್ಯ ಇಲಾಖೆ ತಮ್ಮ ವಶಕ್ಕೆ ಪಡೆದುಕೊಂಡು ನಂತರ ನಮ್ಮ ಜಮೀನು ಪಡೆದುಕೊಳ್ಳಲಿ ಶ್ರೀಮಂತರು ಒತ್ತೂವರಿ ಮಾಡಿಕೊಂಡಿರುವ ಜಮೀನು ಬಿಟ್ಟು ದಲಿತರ ಜಮೀನು ಅರಣ್ಯ ಇಲಾಖೆ ತಮ್ಮ ವಶಕ್ಕೆ ಪಡೆದುಕೊಳ್ಳುತ್ತಿರುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತ ಪಡಿಸುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಒತ್ತುವರಿಯಾಗಿರುವ ಜಮೀನು ತೆರವುಗೊಳಿಸಲು ಮುಂದಾಗಿದ್ದು ಸರಿಯಾದ ಬೆಳೆವಣಿಗೆಯಾಗಿದೆ. ಆದರೆ ಒತ್ತೂವರಿಯಾಗಿರುವ ಜಮೀನು ತೆರವುಗೊಳಿಸುವ ಮುನ್ನ ಗ್ರಾಮಸ್ಥರ ಜೊತೆಗೆ ಚರ್ಚೆ ಮಾಡಿ ತಾವು ಮಾಡುತ್ತಿರುವ ಕಾರ್ಯದ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿ ನಂತರ ಒತ್ತೂವರಿ ಮಾಡಬಹುದಿತ್ತು, ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಏಕಾಏಕಿ ಒತ್ತುವರಿ ತೆರವುಗೊಳಿಸಲು ಮುಂದಾದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ: ಸುರೇಶ್ ನಾಯಕ್ ಟಿವಿ9 ಬೀದರ್
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ