
ಬೀದರ್, ಸೆಪ್ಟೆಂಬರ್ 10: ಬೀದರ್ನ ಪಶುವೈದ್ಯಕೀಯ ಮೀನುಗಾರಿಕೆ ವಿಜ್ಞಾನಿಗಳ ವಿವಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳಗ್ಗೆ ಏಕಕಾಲದಲ್ಲಿ ಕರ್ನಾಟಕದ 69 ಕಡೆಗಳಲ್ಲಿ ದಾಳಿ (Lokayukta Raid) ನಡೆಸಿದ್ದಾರೆ. ವಿವಿಯ ಅಧಿಕಾರಿಗಳು, ಸಿಬ್ಬಂದಿ ಮನೆಗಳು, ಕಚೇರಿಗಳ ಮೇಲೆ ದಾಳಿ ನಡೆದಿದೆ. ಭ್ರಷ್ಟಾಚಾರ ಆರೋಪ ಸಂಬಂಧ ಬೀದರ್ (Bidar) ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಾಗಿತ್ತು. ಬೆಂಗಳೂರು ಮೂಲದ ವೆಂಕಟ್ ರೆಡ್ಡಿ ಎಂಬುವರು ದೂರು ನೀಡಿದ್ದರು.
2021ರಲ್ಲಿ ವಿವಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಿದ ಅಧಿಕಾರಿಗಳು, ಸಿಬ್ಬಂದಿ ಮನೆಗಳು, ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಲೋಕಾಯುಕ್ತ ಎಡಿಜಿಪಿ ಮನೀಶ್ ಕರ್ಬಿಕರ್, ಐಜಿ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ.
ಬೀದರ್ ಜಿಲ್ಲೆಯ 24 ಕಡೆ, ಬೆಂಗಳೂರಿನ 31 ಕಡೆ, ಕೊಪ್ಪಳ 2 ಕಡೆ, ಚಿಕ್ಕಮಗಳೂರು ಜಿಲ್ಲೆಯ 2 ಕಡೆ, ಹಾಸನ, ರಾಮನಗರ, ಕೋಲಾರ, ಉಡುಪಿ ಸೇರಿದಂತೆ ರಾಜ್ಯಾದ್ಯಂತ 69 ಕಡೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. 2021 ಅಕ್ಟೋಬರ್ 4ರಂದು 35 ಕೋಟಿ ರೂ. ಹಗರಣ ನಡೆದಿದೆ ಎಂದು ದೂರಿನಲ್ಲಿ ದೂರುದಾರರು ಉಲ್ಲೇಖಿಸಿದ್ದರು. ಈ ಸಂಬಂಧ ಲೋಕಾಯುಕ್ತ ನಡೆಸಿದ ತನಿಖೆಯಲ್ಲಿ, 22 ಕೋಟಿ ಹಗರಣ ನಡೆದಿರುವುದು ಪತ್ತೆಯಾಗಿತ್ತು.
ವಿಶ್ವವಿದ್ಯಾಲಯದ ಕಂಟ್ರೋಲರ್ ಸುರೇಶ್ ಸಹೋದರ ಮಲ್ಲಿಕಾರ್ಜುನ್ ಅವರ ಚಿಕ್ಕಮಗಳೂರಿನಲ್ಲಿರುವ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು ನಗರದ ಕಲ್ಯಾಣನಗರದಲ್ಲಿರುವ ಮಲ್ಲಿಕಾರ್ಜುನ್ ನಿವಾಸಕ್ಕೆ ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ಸುರೇಶ್ 2017 ರಲ್ಲಿ ಬೀದರ್ನ ಪಶುವೈದ್ಯಕೀಯ ಮೀನುಗಾರಿಕೆ ವಿಜ್ಞಾನಿಗಳ ವಿವಿಯಲ್ಲಿ ಕಂಟ್ರೋಲರ್ ಆಗಿ ಕಾರ್ಯನಿರ್ವಹಿಸಿದ್ದರು.
ಇದನ್ನೂ ಓದಿ: ಬೀದರ್ನಲ್ಲಿ ಘೋರ ದುರಂತ: ಒಂದೇ ಕುಟುಂಬ ನಾಲ್ವರು ಆತ್ಮಹತ್ಯೆ, ಕಾರಣವೇನು?
Published On - 9:30 am, Wed, 10 September 25