ಬೀದರ್ ಬ್ರಿಮ್ಸ್ ಆಸ್ಪತ್ರೆಗೇ ತಗುಲಿದೆ ದೊಡ್ಡ ರೋಗ! ಹೆಚ್ಚಿದ ಭ್ರಷ್ಟಾಚಾರ, 4 ತಿಂಗಳಿಂದ ಗುತ್ತಿಗೆ ನೌಕರರಿಗಿಲ್ಲ ವೇತನ
ಬೀದರ್‌ನಲ್ಲಿ ಸರ್ಕಾರ ಹೈಟೆಕ್ ಆಸ್ಪತ್ರೆ ಕಟ್ಟಿಸಿದೆ. 2ಡಿ ಎಕೋ, ಸಿಟಿ ಸ್ಯ್ಕಾನ್, ಅಲ್ಟ್ರಾ ಸೌಂಡ್ ಯಂತ್ರಗಳಿವೆ. ಆದರೆ, ಬಡವರಿಗೆ ಮಾತ್ರ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಭ್ರಷ್ಟಾಚಾರ ಮಿತಿಮೀರಿರುವ ಆರೋಪ ಕೇಳಿಬಂದಿದೆ. ಇದೀಗ, ಜಡ್ಡುಗಟ್ಟಿರುವ ಆಸ್ಪತ್ರೆಗೇ ಚಿಕಿತ್ಸೆ ಕೊಡಲು ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮುಂದಾಗಿದ್ದು, ತಕ್ಷಣದ ಕ್ರಮಕ್ಕೆ ಮನವಿ ಮಾಡಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್‌ಗೆ ಪತ್ರ ಬರೆದಿದ್ದಾರೆ.

ಬೀದರ್, ನವೆಂಬರ್ 3: ಬೀದರ್‌ನ (Bidar) ಬ್ರಿಮ್ಸ್ ಆಸ್ಪತ್ರೆ (BRIMS Hospital) ಬಡ ರೋಗಿಗಳ ಸಂಜೀವಿನಿ ಆಗಬೇಕಿತ್ತು. ಆದರೆ, ಇಲ್ಲಿನ ವ್ಯವಸ್ಥೆಯೇ ರೋಗಪೀಡಿತವಾಗಿದೆ. ಹೊರಗುತ್ತಿಗೆ ನೌಕರರು ಕಳೆದ 4 ತಿಂಗಳಿಂದ ಸಂಬಳ ಇಲ್ಲದೆ ದುಡಿಯುತ್ತಿದ್ದಾರೆ. ದಶಕದಿಂದಲೂ 300ಕ್ಕೂ ಅಧಿಕ ಡಿ ಹಾಗೂ ಸಿ ವೃಂದದ ಮಹಿಳಾ ಹಾಗೂ ಪುರುಷ ನೌಕರರು ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ನೌಕರರಾಗಿದ್ದಾರೆ. ಈಗ ಇವರೆಲ್ಲ ಸಂಬಳ ಕೊಡಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮೊರೆ ಹೋಗಿದ್ದಾರೆ. ವಾರದಲ್ಲಿ ಸಂಬಳವಾಗದಿದ್ದರೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದ್ದಾರೆ. ಅಲ್ಲದೇ, ಬ್ರಿಮ್ಸ್ ವ್ಯವಸ್ಥೆಗೆ ಕಾಯಕಲ್ಪ ನೀಡುವ ಬಗ್ಗೆಯೂ ಸಚಿವರು ಭರವಸೆಯ ಮಾತುಗಳನ್ನಾಡಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವರಿಗೆ ಖಂಡ್ರೆ ಪತ್ರ
ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ತೆಲಂಗಾಣ, ಮಹಾರಾಷ್ಟ್ರದಿಂದ್ಲೂ ರೋಗಿಗಳು ಬರುತ್ತಾರೆ. ಆದರೆ, ಅವರಿಗೆಲ್ಲ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಹಣ ಕೊಡದೆ ಸಿಬ್ಬಂದಿ ಏನೂ ಮಾಡುವುದಿಲ್ಲ ಎಂಬ ಆರೋಪ ಇದೆ. ಬಾಣಂತಿಯರು ಬಿಸಿನೀರನ್ನು ಹಣ ಕೊಟ್ಟು ಹೊರಗಿನಿಂದ ತರುವ ಸ್ಥಿತಿಯಿದೆ. ಇದರ ಜತೆಗೆ ಇನ್ನೂ ಹತ್ತಾರು ಸಮಸ್ಯೆಗಳಿವೆ. ಬ್ರಿಮ್ಸ್ ನಿರ್ದೇಶಕ ಶಿವಕುಮಾರ್ ಶಟಕಾರ್ ಸೇರಿ ಹಲವರ ವಿರುದ್ಧ ಸಾಕಷ್ಟು ಆರೋಪಗಳಿವೆ. ಹಾಗಾಗಿ, ಆಸ್ಪತ್ರೆಗೆ ಕಾಯಕಲ್ಪ ನೀಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್‌ಗೆ ಸಚಿವ ಖಂಡ್ರೆ ಪತ್ರ ಬರೆದಿದ್ದಾರೆ.
ಈಶ್ವರ ಖಂಡ್ರೆ ಪತ್ರದಲ್ಲೇನಿದೆ?
ಬ್ರಿಮ್ಸ್ ಆಸ್ಪತ್ರೆಯಲ್ಲಿ ಔಷಧ ಖರೀದಿಯಲ್ಲೂ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸರ್ಕಾರಿ ಆಸ್ಪತ್ರೆಗಳು ಬಡ ರೋಗಿಗಳ ಪಾಲಿಗೆ ಆಶಾಕಿರಣವಾಗಬೇಕು. ಆದರೆ ಬೀದರ್‌ನ ಬ್ರಿಮ್ಸ್ ನಿರ್ದೇಶಕ ಶಿವಕುಮಾರ್ ಶಟಕಾರ್ ಮತ್ತು ಇತರರ ಮೇಲೆ ಗುರುತರ ಆರೋಪಗಳಿದ್ದು, ಇವರ ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯದಿಂದಾಗಿ ರೋಗಿಗಳು ನರಳುವಂತಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಂಡು, ಆದಷ್ಟು ಶೀಘ್ರದಲ್ಲಿ ಬ್ರಿಮ್ಸ್ ಆಸ್ಪತ್ರೆಗೆ ಸಂಪೂರ್ಣ ಕಾಯಕಲ್ಪ ನೀಡಿ, ಸಮಸ್ಯೆಗಳನ್ನು ಪರಿಹರಿಸಬೇಕು. ಆ ಮೂಲಕ ಶ್ರೀಸಾಮಾನ್ಯರಿಗೆ ಉತ್ತಮ ಮತ್ತು ಗುಣಮಟ್ಟದ ಆರೋಗ್ಯ ಸೇವೆ ದೊರಕುವಂತೆ ಮಾಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್‌ಗೆ ಬರೆದ ಪತ್ರದಲ್ಲಿ ಈಶ್ವರ ಖಂಡ್ರೆ ಕೋರಿದ್ದಾರೆ.
ಇದನ್ನೂ ಓದಿ: ಬೀದರ್‌ನಲ್ಲಿ ಹೃದಯವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ಹಿರಿ ಜೀವಗಳು
ಸರ್ಕಾರಿ ಆಸ್ಪತ್ರೆಗಳಿರುವುದೇ ಬಡವರಿಗಾಗಿ. ಆದರೆ, ಸರ್ಕಾರಿ ಆಸ್ಪತ್ರೆಗೇ ಭ್ರಷ್ಟಾಚಾರದ ರೋಗ ಬಡಿದರೆ, ಅದಕ್ಕೆ ಚಿಕಿತ್ಸೆ ನೀಡಲೇಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



