ಮುಸ್ಲಿಂ ಮತದಿಂದ ಮಾತ್ರ ಬೀದರ್​ ಕ್ಷೇತ್ರ ಗೆದ್ದಿದ್ದು: ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡ ಜಮೀರ್

| Updated By: ರಮೇಶ್ ಬಿ. ಜವಳಗೇರಾ

Updated on: Jun 25, 2024 | 3:05 PM

ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ತೆಲಂಗಾಣ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಮೊದಲ ಬಾರಿಗೆ ಕರ್ನಾಟಕದಲ್ಲಿ ಯು.ಟಿ ಖಾದರ್​ ಅವರನ್ನು ವಿಧಾನಸಭಾ ಸ್ಪೀಕರ್​​ ಆಗಿ ನೇಮಿಸಲಾಗಿದೆ. ಮುಸ್ಲಿಂ ಸ್ಪೀಕರ್ ಮುಂದೆ ಬಿಜೆಪಿಯವರು ನಮಸ್ಕಾರ ಸಾಬ್ ಎಂದು ಕೈ ಮುಗಿಯುತ್ತಾರೆ ಎಂದು ಹೇಳಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಜಮೀರ್ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಮುಸ್ಲಿಂ ಮತದಿಂದ ಮಾತ್ರ ಬೀದರ್​ ಕ್ಷೇತ್ರ ಗೆದ್ದಿದ್ದು: ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡ ಜಮೀರ್
ಜಮೀರ್ ಅಹ್ಮದ್ ಖಾನ್
Follow us on

ಬೀದರ್, (ಜೂನ್ 25): ಮುಸ್ಲಿಂಮರ ಕೆಲಸವನ್ನ ಸಚಿವ ಈಶ್ವರ ಖಂಡ್ರೆ (Eshwar Khandre) ತಲೆಬಾಗಿ ಮಾಡಬೇಕಾಗುತ್ತದೆ. ಏಕೆಂದರೆ ಲೋಕಸಭೆ ಚುನಾವಣೆಯಲ್ಲಿ (Loksabha Elections 2024) ಬೀದರ್‌ನಲ್ಲಿ(Bidar)  ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ (Sagar Khandre) ಮುಸ್ಲಿಮರ ಮತಗಳಿಂದ ಗೆದ್ದಿದ್ದಾರೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಸಚಿವ ಜಮೀರ್ ಅಹ್ಮದ್ ಖಾನ್ (zameer ahmed khan ) ವಿವದಾತ್ಮಕ ಹೇಳಿಕೆ ನೀಡಿದ್ದಾರೆ. ತಮ್ಮದೇ ಪಕ್ಷದ ಸಚಿವನ ವಿರುದ್ಧ ಹೇಳಿಕೆ ನೀಡಿದ್ದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಸೋಮವಾರ ಬೀದರ್​ನಲ್ಲಿ ನಡೆದ ವಕ್ಫ್ ಅದಾಲತ್ ನಲ್ಲಿ ಮಾತನಾಡಿದ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್, ಸಿರ್ಪ್‌ ಔರ್ ಸಿರ್ಪ್ ಮುಸ್ಲಿಂ ಓಟ್‌ಸೆ ಸಾಗರ್ ಖಂಡ್ರೆ ಜೀತೆ ಸೋ ಹೈ. (ಕೇವಲ ಅಂದರೆ ಕೇವಲ ಮುಸ್ಲಿಂಮರ ಮತದಿಂದ ಸಾಗರ್ ಖಂಡ್ರೆ ಗೆದ್ದಿದ್ದಾನೆ) ಹಮಾರಾ ಕಾಮ್ ಝಕ್ ಮಾರ್‌ಕೆ ಕರ್ನಾ ಪಡ್ತಾ ಹೈ. (ನಮ್ಮ ಕೆಲಸವನ್ನು ತಲೆ ಬಗ್ಗಿಸಿಕೊಂಡು ಅವನು ಮಾಡಬೇಕು) ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಈ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಸ್ಪೀಕರ್ ಗೆ ಎಲ್ಲರೂ ನಮಸ್ಕಾರ್ ಸಾರ್ ಅನ್ನಬೇಕು ಅಂತ ಹೇಳಿದ್ರಲ್ಲಿ ತಪ್ಪೇನಿದೆ? ಜಮೀರ್ ಅಹ್ಮದ್ ಖಾನ್

ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇರುದ ಸ್ಥಳಗಳಲ್ಲಿ ಸ್ಮಶಾನಕ್ಕೆ ಭೂಮಿ ಇಲ್ಲದಿದ್ದರೆ ಸರ್ಕಾರಿ ಜಾಗವಿದ್ದಲ್ಲಿ ಸ್ಮಶಾನಕ್ಕೆ ಭೂಮಿ ನೀಡುವ ವಿಚಾರವಾಗಿ ಸಾರ್ವಜನಿಕರಿಂದ ಕೇಳಿ ಬಂದ ಅಹವಾಲಿನ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡುವ ವೇಳೆ ಜಮೀರ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದೆ.

ಜನರ ಪ್ರಶ್ನೆಗೆ ಉತ್ತರಿಸುವ ವೇಳೆ ನಿಮ್ಮ ಬೇಡಿಕೆಯ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಜೊತೆಗೆ ಮಾತನಾಡುತ್ತೇನೆ, ಈಶ್ವರ್ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆ ಕೇವಲ ಮುಸ್ಲಿಮರ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಹೀಗಾಗಿ ನಮ್ಮ ಕೆಲಸವನ್ನು ಮಾಡಲೇ ಬೇಕು. ನಾನು ಮಾಡಿಸುತ್ತೇನೆ ಎಂದಿದ್ದಾರೆ. ಇದಕ್ಕೆ ವಿಪಕ್ಷ ಬಿಜೆಪಿ ನಾಯಕರು ಖಂಡಿಸಿದ್ದು, ಜಮೀರ್ ವಿರುದ್ಧ ಮುಗಿಬಿದ್ದಿದ್ದಾರೆ.

ಬಿಜೆಪಿ ನಾಯಕರು ಆಕ್ರೋಶ


ಈ ವಿಚಾರವಾಗಿ ಬಿಜೆಪಿ ನಾಯಕರು ಹೇಳಿಕೆಯನ್ನು ಖಂಡಿಸಿದ್ದು, ಜಮೀರ್  ಅಹಮ್ಮದ್ ಖಾನ್ ವಿರುದ್ಧ ಮುಗಿಬಿದ್ದಿದ್ದಾರೆ. ವಿಪಕ್ಷ ನಾಯಕರಾದ ಆರ್ ಅಶೋಕ್, ಬಸನಗೌಡ ಪಾಟೀಲ್, ಸಿಟಿ ರವಿ ಸೇರಿದಂತೆ ಇತರೆ ಬಿಜೆಪಿ ನಾಯಕರು ಜಮೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವೀಟ್‌ ಮೂಲಕ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಿನ್ನೆ ರಾಹುಲ್ ಗಾಂಧಿ ಅವರು ಸಂವಿಧಾನದ ಪ್ರತಿಯನ್ನು ಹಿಡಿದು, ದೇಶದಲ್ಲಿ ಸಂವಿಧಾನ ಅಪಾಯದಲ್ಲಿದೆ ಎಂದು ಹೇಳುತ್ತಿದ್ದರು. ಆದರೆ, ಇಂದು ಅವರದ್ದೇ ಪಕ್ಷದವರಾದ ಹಾಗೂ ಕರ್ನಾಟಕ ವಕ್ಫ್ ಖಾತೆ ಸಚಿವರಾದ ಜಮೀರ್ ಅಹ್ಮದ್ ಅವರು ಅರಣ್ಯ ಭೂಮಿಯನ್ನು ವಕ್ಫ್ ಗೆ ವರ್ಗಾಯಿಸಿಕೊಂಡು ಅಲ್ಲಿ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತೇವೆ ಎಂದು ಹೇಳುತ್ತಾರೆ. ಇಷ್ಟಕ್ಕೆ ನಿಲ್ಲಿಸದೆ, ನಮ್ಮ ಅರಣ್ಯ ಖಾತೆ ಸಚಿವರಾದ ಈಶ್ವರ್ ಖಂಡ್ರೆ ಮಗ ಸಾಗರ್ ಖಂಡ್ರೆ ಚುನಾವಣೆಯಲ್ಲಿ ಗೆದ್ದಿರುವುದು ನಮ್ಮ ಮುಸಲ್ಮಾನರ ಮತದಿಂದಲೇ ಆಗಿರುವುದರಿಂದ ಅವರು ಮಾಡಲೇ ಕೊಡಬೇಕು ಎಂದು ಹೇಳಿದ್ದಾರೆ. ಅಸಲೀಗೆ, ಸಂವಿಧಾನ ಅಪಾಯದಲ್ಲಿರುವುದು ನಿಮ್ಮ ಕಾಂಗ್ರೆಸ್ ಪಕ್ಷದ ಒಡೆದಾಡುವ ನೀತಿಯಂದಲೇ ಹೊರತು ಬೇರೆಯವರಿಂದಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈ ಹಿಂದೆಯೂ ವಿವಾದ ಸೃಷ್ಟಿಸಿದ್ದ ಜಮೀರ್

ಇತ್ತೀಚೆಗೆ ತೆಲಂಗಾಣ ಚುನಾವಣಾ ವೇಳೆ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್, ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಮಾಡಿದ್ದರು. ಹೈದರಾಬಾದ್​​ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್​​ನಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿರುವ ಸ್ಥಾನಮಾನಗಳ ಬಗ್ಗೆ ಹೇಳುವ ಭರದಲ್ಲಿ ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎನ್ನುತ್ತಾರೆ ಎಂದು ಹೇಳಿದ್ದರು. ಇದು ಕರ್ನಾಟಕದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಜಮೀರ್ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.

ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ