ಸರ್ಕಾರಿ ಭೂಮಿ ಒತ್ತುವರಿ ಆರೋಪ ಪ್ರಕರಣ: ಔರಾದ್ ಬಿಜೆಪಿ ಶಾಸಕ ಪ್ರಭು ಚವ್ಹಾಣ್‌ಗೆ ಸಂಕಷ್ಟ

ಸರ್ಕಾರಿ ಭೂಮಿ ಒತ್ತುವರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಔರಾದ್ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಅವರಿಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ನೋಟಿಸ್ ಜಾರಿ ಮಾಡಿದ್ದು, ಜನವರಿ 19ರೊಳಗೆ ಉತ್ತರಿಸುವಂತೆ ಸೂಚಿಸಿದೆ. ಕೋಳಾರ (ಬಿ) ಗ್ರಾಮದ ಸರ್ವೆ ನಂಬರ್ 102ರಲ್ಲಿರುವ 3 ಎಕರೆ 19 ಗುಂಟೆ ಸರ್ಕಾರಿ ಭೂಮಿಯನ್ನು ದಾಖಲೆಗಳನ್ನು ನಕಲಿ ಸೃಷ್ಟಿಸುವ ಮೂಲಕ ಶಾಸಕರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಸರ್ಕಾರಿ ಭೂಮಿ ಒತ್ತುವರಿ ಆರೋಪ ಪ್ರಕರಣ: ಔರಾದ್ ಬಿಜೆಪಿ ಶಾಸಕ ಪ್ರಭು ಚವ್ಹಾಣ್‌ಗೆ ಸಂಕಷ್ಟ
ಪ್ರಭು ಚವ್ಹಾಣ್‌
Image Credit source: Prabhu B Chavan Facebook Page

Updated on: Nov 26, 2026 | 7:00 AM

ಬೀದರ್​​, ನವೆಂಬರ್​​ 26: ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಸರ್ಕಾರಿ ಭೂಮಿ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಔರಾದ್ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಅವರಿಗೆ ನೋಟಿಸ್ ಜಾರಿ ಮಾಡಿದೆ. 2027ರ ಜನವರಿ 19ರೊಳಗೆ ನೋಟಿಸ್‌ಗೆ ಉತ್ತರ ಸಲ್ಲಿಸುವಂತೆ ನ್ಯಾಯಾಲಯ ಶಾಸಕರಿಗೆ ಸೂಚಿಸಿದೆ. ಕಮಲನಗರ ತಾಲೂಕಿನ ಚಂದೋರಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ದೀಪಕ್ ಪಾಟೀಲ್ ಅವರು 2024ರಲ್ಲಿ ಭೂ ಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ಪ್ರಭು ಚವ್ಹಾಣ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಕೋಳಾರ (ಬಿ) ಗ್ರಾಮದ ಸರ್ವೆ ನಂಬರ್ 102ರಲ್ಲಿರುವ 3 ಎಕರೆ 19 ಗುಂಟೆ ಸರ್ಕಾರಿ ಭೂಮಿಯನ್ನು ದಾಖಲೆಗಳನ್ನು ನಕಲಿ ಸೃಷ್ಟಿಸುವ ಮೂಲಕ ಶಾಸಕರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದರು.

ದೂರುದಾರರ ಆರೋಪವೇನು?

ಗ್ರಾಮ ನಕ್ಷೆ ಮತ್ತು ಕಂದಾಯ ದಾಖಲೆಗಳ ಪ್ರಕಾರ, ವಿವಾದಿತ ಜಮೀನು ಸರ್ಕಾರಿ ಗೋಮಾಳವಾಗಿದ್ದು, ಸರ್ಕಾರಕ್ಕೆ ಸೇರಿದೆ. 2020ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಗೋಮಾಳದ ಮಾಲೀಕತ್ವ ಬದಲಾವಣೆಯಾಗಿರುವುದರ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಅಧಿಕಾರಿಗಳು ಭೂಮಿಯನ್ನು ಮರಳಿ ವಶಕ್ಕೆ ಪಡೆಯಲು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ನಾನು ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದೆ ಎಂದು ದೀಪಕ್ ಪಾಟೀಲ್ ತಿಳಿಸಿದ್ದಾರೆ. ಶಾಸಕರಿಗೆ ಸಂಬಂಧಿಸಿದ ಭೂ ಕಬಳಿಕೆ ಪ್ರಕರಣದ ಕುರಿತು ವರದಿ ಸಲ್ಲಿಸದ ಹಿನ್ನೆಲೆಯಲ್ಲಿ 2025ರ ಮಾರ್ಚ್‌ನಲ್ಲಿ ವಿಶೇಷ ನ್ಯಾಯಾಲಯವು ಜಿಲ್ಲಾಧಿಕಾರಿಗಳ ವಿರುದ್ಧ ಜಾಮೀನು ಸಹಿತ ವಾರಂಟ್ ಜಾರಿ ಮಾಡಿತ್ತು. ಇದಾದ ಬಳಿಕ ನವೆಂಬರ್ 19ರಂದು ಜಿಲ್ಲಾಡಳಿತ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ವಿವಾದಿತ ಜಮೀನು ಸರ್ಕಾರಿ ಭೂಮಿ ಎಂದು ತಿಳಿಸಿದೆ.

Loading...

ಇದನ್ನೂ ಓದಿ: ಕುಸಿಯುತ್ತಿದೆ ಕಾರಂಜಾ ಜಲಾಶಯದ ನೀರಿನ ಮಟ್ಟ: ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಭೀತಿ

ಆದರೆ, ಈ ಜಮೀನಿಗೆ ಸಂಬಂಧಿಸಿದಂತೆ ಪ್ರಭು ಚವ್ಹಾಣ್ ಅವರ ಹೆಸರಿನಲ್ಲಿ ಕ್ರಯಪತ್ರ (Sale Deed) ಮಾಡಲಾಗಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯವು ಔರಾದ್ ಶಾಸಕರಿಗೆ ನೋಟಿಸ್ ಜಾರಿ ಮಾಡಿದೆ ಎಂದು ದೂರುದಾರ ದೀಪಕ್ ಪಾಟೀಲ್ ತಿಳಿಸಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us