ಬೀದರ್: ಬೇಸಿಗೆ ಬಂದರೆ ಸಾಕು ಬೀದರ್ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎಲ್ಲರನ್ನು ಕಾಡುತ್ತದೆ. ಬಾವಿ, ಬೋರ್ ವೆಲ್ನಲ್ಲಿಯೂ ನೀರು ಖಾಲಿಯಾಗಿ ಜನರು, ಪ್ರಾಣಿ-ಪಕ್ಷಿಗಳು ನೀರಿಗಾಗಿ ಹಾಹಾಕಾರ ಪಡುವಂತಾಗುತ್ತದೆ. ಆದರೆ ಬೀದರ್ ಜಿಲ್ಲೆಯ ಗುಪ್ತಲಿಂಗ ದೇವಸ್ಥಾನದ ಬೆಟ್ಟದಲ್ಲಿ ಮಾತ್ರ ನೀರಿನ ಸೇಲೆ ನಿರಂತರವಾಗಿದ್ದು, ಶತಮಾನಗಳಿಂದ ಎಂದೂ ಕೂಡ ಬೆಟ್ಟದಿಂದ ನೀರು ಬರುವುದು ನಿಂತಿಲ್ಲ. ಈ ನೀರಿಗೆ ಔಷಧಿಯ ಗುಣವಿದ್ದು, ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ರೋಗ ವಾಸಿಯಾಗುತ್ತದೆಂಬ ಭಾವನೆ ಇಲ್ಲಿನ ಭಕ್ತರಲ್ಲಿದೆ.
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದ ಬಳಿಯ ಬೆಟ್ಟದಲ್ಲಿ ಸುಕ್ಷೇತ್ರ ಗಾಯಮುಖ ಗುಪ್ತಲಿಂಗೇಶ್ವರ ದೇವಾಲಯವಿದೆ. ಈ ದೇವಾಲಯ ಐದಾರು ಶತಮಾನದಷ್ಟು ಪುರಾತನವಾಗಿದ್ದು, ಈ ಗುಪ್ತಲಿಂಗವಿರುವ ಬೆಟ್ಟ ಹಲವಾರು ವಿಸ್ಮಯಗಳನ್ನೊಳಗೊಂಡಿದೆ. ಪಕ್ಕದ ಆಂದ್ರ, ತೆಲಂಗಾಣ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಇಲ್ಲಿಗೆ ಭಕ್ತರು ಬರುತ್ತಾರೆ.
ಅಮಾವಾಸ್ಯೆ ಹಾಗೂ ಹುಣ್ಣಿಮೆಯಂದು ಸಾಕಷ್ಟು ಪ್ರಮಾಣಲ್ಲಿ ಭಕ್ತರು ಇಲ್ಲಿಗೆ ಬಂದು ದೇವರ ದರ್ಶನ ಪಡೆದು ಹೋಗುತ್ತಾರೆ. ಇನ್ನೂ ಗುಪ್ತಲಿಂಗ ದೇವಸ್ಥಾನದ ಸುತ್ತಮುತ್ತ ಸಾಕಷ್ಟು ಪ್ರಮಾಣದಲ್ಲಿ ಅರಣ್ಯ ಪ್ರದೇಶವಿದ್ದು, ದೇವಸ್ಥಾನದಲ್ಲಿ ನೀರಿನ ಝರಿ ಇದುವರೆಗೂ ಬತ್ತಿರುವ ಉದಾಹರಣೆಗಳೇ ಇಲ್ಲ. ಇಲ್ಲಿಗೆ ಬರುವ ಭಕ್ತರು ಈ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಜತೆಗೆ ನೀರನ್ನು ಔಷಧಿ ರೂಪದಲ್ಲಿಯೂ ಪ್ರತಿನಿತ್ಯ ಕುಡಿಯುತ್ತಾರೆ.
ಈ ನೀರು ಕುಡಿದರೆ ಮತ್ತು ಸ್ನಾನ ಮಾಡಿದರೆ ನಮ್ಮ ದೇಹದಲ್ಲಿರುವ ಕಾಯಿಲೆಗಳು ವಾಸಿಯಾಗುತ್ತದೆ. ಜತೆಗೆ ಇಲ್ಲಿನ ನೀರು ಚರ್ಮರೋಗದ ನಿವಾರಣೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ ಎಂದು ಭಕ್ತರು ನಂಬಿದ್ದಾರೆ. ಇನ್ನೂ ಇಲ್ಲಿಗೆ ಬಂದು ಭಕ್ತಿಯಿಂದ ದೇವರಲ್ಲಿ ಪ್ರಾರ್ಥನೆ ಮಾಡಿದರೆ ಎಲ್ಲವೂ ಒಳ್ಳೆಯದೆ ಆಗುತ್ತದೆಂಬ ಭಾವನೆ ಇಲ್ಲಿನ ಭಕ್ತರಲ್ಲಿ ಮನೆ ಮಾಡಿದೆ ಎಂದು ಭರತ್ ತಪಶೆಟ್ಟಿ ತಿಳಿಸಿದ್ದಾರೆ.
ಗುಹೆಯಲ್ಲಿರುವ ಶಿವಲಿಂಗದ ಮೂಲಕ ನೀರು ಹರಿದು ಬರುವುದು ಕೂಡ ಇಲ್ಲಿನ ವಿಶೇಷವಾಗಿದೆ. ಇಲ್ಲಿನ ನೀರಿನ ಝರಿ ದಿನದ 24 ಗಂಟೆಯೂ ಧುಮ್ಮಿಕ್ಕುತ್ತದೆ. ಬೆಟ್ಟದ ಅಂಚಿನಿಂದ ಬರುವ ನೀರು ನಂದಿ ಬಾಯಿಯಿಂದ ಕಿರು ಕಲ್ಯಾಣಿಗೆ ಬಂದು ಬೀಳುತ್ತದೆ. ನೀರಿನ ಹರಿವು ಸದಾ ಒಂದೇ ಸಮನಾಗಿರುತ್ತದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಇರದ ಕಾಲದಲ್ಲಿ ಹೆಚ್ಚಿನವರು ಇಲ್ಲಿಗೆ ಬಂದು ನೀರು ತುಂಬಿಕೊಂಡು ಹೋಗುತ್ತಿದ್ದರು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.
ಈಗ ಮನೆ ಮನೆಗೆ ನೀರು ಬರುತ್ತಿರುವುದರಿಂದ ದೇವಸ್ಥಾನದಿಂದ ನೀರು ತೆಗೆದುಕೊಂಡು ಹೋಗುವುದು ನಿಂತಿದೆ. ದೇವಸ್ಥಾನಕ್ಕೆ ಬರುವವರು ಮಾತ್ರ ಇಲ್ಲಿಂದ ನೀರು ತೆಗೆದುಕೊಂಡು ಹೋಗುತ್ತಾರೆ. ಪ್ರಾಣಿ-ಪಕ್ಷಿಗಳ ನೀರಿನ ದಾಹ ಕೂಡ ಈ ಸ್ಥಳ ತಣಿಸುತ್ತಿದೆ. ಇನ್ನೂ ಬೇಸಿಗೆ, ಮಳೆಗಾಲ, ಚಳಿಗಾಲ ಯಾವುದೇ ಋತುವಿನಲ್ಲಿಯೂ ಇಲ್ಲಿಗೆ ಬಂದರೆ ಸಾಕು, ಇಲ್ಲಿ ನೀರು ನಿರಂತರವಾಗಿ ಹರಿಯುತ್ತಲೇ ಇದೆ. ಹೀಗಾಗಿ ಈ ದೇವಾಲಯ ಭಕ್ತರನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಸೆಳೆಯುತ್ತಿದೆ. ಪ್ರತಿ ವರ್ಷ ಶಿವರಾತ್ರಿಯಂದು ಇಲ್ಲಿ ಅದ್ದೂರಿಯಾಗಿ ಜಾತ್ರೆ ಮಾಡಲಾಗುತ್ತದೆ ಎಂದು ಅರ್ಚಕರಾದ ಪರಮೇಶ್ವರ ಸ್ವಾಮಿ ಹೇಳಿದ್ದಾರೆ.
ವರದಿ: ಸುರೇಶ್ ನಾಯಕ್
ಇದನ್ನೂ ಓದಿ:
ದುರ್ಗಾಂಬಾ ದೇವಸ್ಥಾನದ ಗಂಟೆಗಳೇ ನ್ಯಾಯ ಪಂಚಾಯಿತಿ ಸಂಕೇತ; ಇಂದಿಗೂ ಪುರಾಣ ಪ್ರಸಿದ್ಧ ಸನ್ನಿವೇಶಗಳು ಜೀವಂತ
ಕುರುಡುಮಲೆ ಗ್ರಾಮದಲ್ಲಿ ಸಿಗುತ್ತೆ ಚಿನ್ನದ ನಾಣ್ಯ; ಮೂರು ಯುಗದ ಇತಿಹಾಸ ಹೇಳುವ ಈ ಸ್ಥಳದಲ್ಲಿದೆ ಒಂದು ವಿಶಿಷ್ಟ ನಂಬಿಕೆ