Buffalo Theft: ಕಳ್ಳತನ ಮಾಡಿದಾಗ ಈತನ ವಯಸ್ಸು ಕೇವಲ 20 ವರ್ಷ, ಈಗ 80ನೇ ವಯಸ್ಸಿನಲ್ಲಿ ಬೀದರ್ ಪೊಲೀಸರಿಗೆ ಸಿಕ್ಕಿಬಿದ್ದ!
Bidar Police: ಸುಮಾರು ವರ್ಷದಿಂದ ಬಾಕಿ ಇರುವ ಪ್ರಕರಣಗಳು, ಆರೋಪಿಗಳು ಕೋರ್ಟ್ ಗೆ ಹಾಜರಾಗದೆ ಇರುವ LPR (ಲಾಂಗ್ ಪೆಂಡಿಗ್ ರಿಪೋರ್ಟ್) ಪ್ರಕರಣ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಈ ತಂಡ ಇದೀಗ 57 ವರ್ಷದ ಬಳಿಕ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಲ್.ಎಸ್. ತಿಳಿಸಿದ್ದಾರೆ.
ಬೀದರ್, ಸೆಪ್ಟೆಂಬರ್ 12: ಎಮ್ಮೆ ಕದ್ದು ತಲೆ ಮರೆಸಿಕೊಂಡಿದ್ದ ಆರೋಪಿಯನ್ನ 57 ವರ್ಷದ ಬಳಿಕ ಬೀದರ್ ಪೊಲೀಸರು ( Bidar Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರ ರಾಜ್ಯದ ಲಾತೂರ್ ಜಿಲ್ಲೆಯ (Latur, Maharashtra) ಟಾಕಳಗಾಂವ್ ಗ್ರಾಮದ ನಿವಾಸಿ ಗಣಪತಿ ವಿಠ್ಠಲ ವಾಗ್ಮೋರೆ ಎಂಬುವರು 1965 ಎಪ್ರಿಲ್ 25 ರಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮೇಹಕರ್ ಗ್ರಾಮದಲ್ಲಿ ಮುರಳಿಧರ್ ಮಾಣಿಕರಾವ್ ಮಾಣಿಕರಾವ್ ಕುಲಕರ್ಣಿ ಎಂಬುವರ ಎರಡು ಎಮ್ಮೆ (Buffalo) ಮತ್ತು ಒಂದು ಎಮ್ಮೆ ಕರುವನ್ನ ಕದ್ದುಕೊಂಡು ಪರಾರಿಯಾಗಿದ್ದ.
ವಿಠ್ಠಲ ವಾಗ್ಮೋರೆ ಕಳ್ಳತನ ಮಾಡಿದಾಗ ಈತನಿಗೆ ವಯಸ್ಸು ಕೇವಲ 20 ವರ್ಷ. ಈಗ 80ನೇ ವಯಸ್ಸಿನಲ್ಲಿ ಸಿಕ್ಕಿಬಿದ್ದಾನೆ! ಇನ್ನು ಎಮ್ಮೆ ಕದ್ದ ವಾರದಲ್ಲಿಯೇ ಈತ ಭಾಲ್ಕಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಪೊಲೀಸರು ಈತನನ್ನ ಬಂಧಿಸಿದ್ದರು. ಆಗ ಜಾಮೀನಿನ ಮೇಲೆ ಹೊರ ಬಂದಿದ್ದ ಗಣಪತಿ ವಿಠ್ಠಲ ವಾಗ್ಮೋರೆ, ಕೋರ್ಟ್ ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. 57 ವರ್ಷದಿಂದ ಪೊಲೀಸರು ಈತನನ್ನ ಹುಡುಕುತ್ತಲೇ ಇದ್ದರು. ಆದರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ಕದ್ದುಮುಚ್ಚಿ ಓಡಾಡುತ್ತಿದ್ದ. ಆದರೆ ಪೊಲೀಸರು ಈತನನ್ನು ಬಂಧಿಸಿ, ಇದೀಗ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಇದನ್ನೂ ಓದಿ: My India My Goal: ಟಿ ನರಸೀಪುರದ ಶಾಲೆಯಲ್ಲಿ ಟಿವಿ9 ನೆಟ್ವರ್ಕ್ ನೆಟ್ಟ ಗಿಡಗಳಿಗೆ ಟ್ರೀ ಗಾರ್ಡ್ ಒದಗಿಸಿದ ರಘುಲಾಲ್ ಸಂಸ್ಥೆ
ಸುಮಾರು ವರ್ಷದಿಂದ ಬಾಕಿ ಇರುವ ಪ್ರಕರಣಗಳು, ಆರೋಪಿಗಳು ಕೋರ್ಟ್ ಗೆ ಹಾಜರಾಗದೆ ಇರುವ LPR (ಲಾಂಗ್ ಪೆಂಡಿಗ್ ರಿಪೋರ್ಟ್) ಪ್ರಕರಣ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಈ ತಂಡ ಇದೀಗ 57 ವರ್ಷದ ಬಳಿಕ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇನ್ನು ಈ ತಂಡದಲ್ಲಿ ಭಾಗಿಯಾಗಿದ್ದ ಎಲ್ಲಾ ಪೊಲೀಸ್ ಸಿಬ್ಬಂದಿಗ ಸೂಕ್ತ ಬಹುಮಾನ ಕೊಡಲಾಗುವುದು ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಲ್.ಎಸ್. ತಿಳಿಸಿದ್ದಾರೆ.
ಔರಾದ ಪೊಲೀಸ್ ರಿಂದ 44 ಲಕ್ಷಕ್ಕೂ ಅಧಿಕ ಮೊತ್ತದ ಅಕ್ರಮ ಗುಟ್ಕಾ ವಶ:
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 161 (ಎ) ವನಮಾರಪಳ್ಳಿ ಗ್ರಾಮದ ಮಾರ್ಗವಾಗಿ ಮಹಾರಾಷ್ಟ್ರ ರಾಜ್ಯಕ್ಕೆ ಲಾರಿಯೊಂದರಲ್ಲಿ ಅಕ್ರಮವಾಗಿ ಮಾನವ ಜೀವಕ್ಕೆ ಹಾನಿಕಾರಕ ಗುಟ್ಕಾ ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ದಾಳಿ ಮಾಡಿ 36 ಲಕ್ಷ ಮೌಲ್ಯದ 2544 ಕೆಜಿಯಷ್ಟು ಮೌಲ್ಯದ ಗುಟ್ಕಾ ವಶಕ್ಕೆ ಪಡೆದಿದ್ದಾರೆ.
ಗುಟ್ಕಾ ಸಾಗಿಸುತ್ತಿದ್ದ 8 ಲಕ್ಷ ರೂಪಾಯಿ ಮೌಲ್ಯದ ಲಾರಿ ಹೀಗೆ ಒಟ್ಟು 44 ಲಕ್ಷ ರೂಪಾಯಿ ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ದ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಅಕ್ರಮವಾಗಿ ಗುಟ್ಕಾ ಸಾಗಾಟ ಪ್ರಕರಣವನ್ನು ಭೇಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನ ಬೀದರ್ ಎಸ್ಪಿ ಚೆನ್ನಬಸವಣ್ಣ ಎಸ್.ಎಲ್. ರವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 11:13 am, Tue, 12 September 23