ಬೀದರ್, ಸೆ.04: ಜಿಲ್ಲೆಯಲ್ಲಿ ಕಳೆದ ಮೂರು ದಿನದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಕಟಾವಿಗೆ ಬಂದಿದ್ದ ಜಿಲ್ಲೆಯ ಪ್ರಮುಖ ಬೆಳೆ ಸೋಯಾ, ಉದ್ದು, ಹೆಸರು ಬೆಳೆ ನೀರಿನಲ್ಲಿ ಮುಳುಗಿ ಬೆಳೆ ಹಾಳಾಗಿದೆ. ಬೀದರ್, ಭಾಲ್ಕಿ, ಔರಾದ್, ಬಸವಕಲ್ಯಾಣ ಹಾಗೂ ಹುಮನಾಬಾದ್(Humnabad) ತಾಲೂಕಿನಲ್ಲಿನ ಬಹುತೇಕ ಬೆಳೆ ನೀರಿನಲ್ಲಿ ಮುಳುಗಿ ನಾಶವಾಗಿದೆ. ಸೋಯಾ, ಉದ್ದು, ಸಂಪೂರ್ಣವಾಗಿ ನೆಲ್ಲಕಚ್ಚಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾ ಸ್ಥಿತಿ ನಿರ್ಮಾಣವಾಗಿದೆ.
ಒಂದು ಎಕರೆಗೆ ಕನಿಷ್ಠ ಅಂದರೂ 3 ರಿಂದ 4 ಸಾವಿರ ರೂಪಾಯಿಯನ್ನು ಖರ್ಚು ಮಾಡಿ ಬಿತ್ತಿದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ನಮಗೆ ಸರಕಾರದಿಂದ ಸಹಾಯವಾದರೆ ನಮ್ಮ ಬದುಕು ಕಷ್ಟದಿಂದ ಮುಕ್ತವಾಗುತ್ತದೆ ಎಂಬುವುದು ರೈತರ ಅಳಲಾಗಿದೆ. ಬೀದರ ಜಿಲ್ಲೆಯಲ್ಲಿ ಪದೇ ಪದೇ ಬರಗಾಲ ಎದುರಾಗುತ್ತದೆ. ಆದರೆ, ಈ ವರ್ಷ ಸಕಾಲಕ್ಕೆ ಉತ್ತಮವಾದ ಮಳೆಯಾಗಿದ್ದು, ರೈತರು ಬಿತ್ತಿದ ಬೆಳೆಯೂ ಕೂಡ ಹುಲುಸಾಗಿ ಬೆಳೆದು ರೈತನ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿತ್ತು. ಆದರೆ, ಕಳೆದ ಮೂರು ದಿನಗಳಿಂದ ಸುರಿದ ಭಾರೀ ಮಳೆಗೆ ಫಸಲೆಲ್ಲವು ಕೊಚ್ಚಿಕೊಂಡು ಹೋಗಿದ್ದು, ರೈತ ಕಂಗಾಲಾಗಿದ್ದಾನೆ.
ಇದನ್ನೂ ಓದಿ:ಕಲಬುರಗಿ ಜಿಲ್ಲೆಯಲ್ಲಿ ನಿಲ್ಲದ ಮಳೆ, ಉಕ್ಕಿದ ಕಾಗಿಣ ನದಿ, ಮಳಖೇಡ ಉತ್ತರಾದಿಮಠ ಜಲಾವೃತ
ಬೀದರ್ ತಾಲೂಕಿನ ಕಾಶೆಂಪುರ ಗ್ರಾಮದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಹೆಕ್ಟರ್ ಪ್ರದೇಶದಲ್ಲಿ ನೀರು ನಿಂತಿದ್ದು, ರೈತರಿಗೆ ಬರಸಿಡಿಲು ಬಡಿದಂತಾಗಿ ನಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ವರ್ಷ ಕೂಡ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮೆಳೆಯಿಂದಾಗಿ ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ನೀರಿನಲ್ಲಿ ಸೋಯಾ ಬೆಳೆ ಮುಳುಗಿದ್ದರಿಂದ ಸೋಯಾ ಬೀನ್ ಕೊಳೆತು ಹೋಗುವ ಆತಂಕ ರೈತರನ್ನ ಕಾಡುತ್ತಿದೆ. ಒಂದು ಎಕರೆಗೆ ಕನಿಷ್ಠ ಅಂದರೂ 3 ರಿಂದ 4 ಸಾವಿರ ರೂಪಾಯಿಯನ್ನು ಖರ್ಚು ಮಾಡಿ ಬಿತ್ತಿದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.
ಈ ಬಾರಿ ಬೀದರ್ ಜಿಲ್ಲೆಯ ರೈತರ ಸ್ಥಿತಿ ಶೋಚನೀಯವಾಗಿದೆ. ಸೋಯಾ, ಅವರೆ, ಉದ್ದು ಬೆಳೆಗಾರರ ಪರಿಸ್ಥಿತಿ ಸಂಪೂರ್ಣವಾಗಿ ಹದೆಗಿಟ್ಟಿದ್ದು, ಮತ್ತೆ ಸಾಲದ ಸುಳಿಯಲ್ಲಿ ಸಿಲುಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಹಲವಾರು ವರ್ಷಗಳಿಂದ ಸೋಯಾ, ಉದ್ದು ಬೆಳೆಯನ್ನೇ ನಂಬಿಕೊಂಡಿದ್ದ ರೈತರಿಗೆ ಬರಸಿಡಿಲಿನಂತೆ ಬಂದ ಮಳೆ, ರೈತರ ಬದುಕನ್ನ ಬರ್ಬಾದ್ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ