ಬೀದರ್, ಏ.21: ಹತ್ತಾರು ವರ್ಷಗಳಿಂದ ಬೀದರ್(Bidar) ಜಿಲ್ಲೆಯ ನಾನಾ ಗ್ರಾಮಗಳಲ್ಲಿ ರೈತರು ಕಬ್ಬು, ತರಕಾರಿ ಇತರೆ ಬೆಳೆಯನ್ನ ಬೆಳೆಯುತ್ತಿದ್ದರು. ಆದರೆ, ನೀರಿನ ಕೊರತೆ ಹಿನ್ನೆಲೆಯಲ್ಲಿ ಆರೇಳು ವರ್ಷದಿಂದ ಕೆಲವು ಬೆಳೆಗಳನ್ನು ಬದಿಗೊತ್ತಿ ಜಿಲ್ಲೆಯಲ್ಲಿ ಮಾವು ಬೆಳೆಯಲು ರೈತರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು, ಈ ವರ್ಷ ಜಿಲ್ಲೆಯಲ್ಲಿ 2100 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ದೀರ್ಘಾವಧಿ ಮಾವು ಬೆಳೆಯುತ್ತಿದ್ದಾರೆ. ಇನ್ನು ಕಳೆದ ಮೂರು ವರ್ಷದಿಂದ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಮಾವು ಬೆಳೆ ಬಂದಿರಲಿಲ್ಲ. ಆದರೆ, ಈ ವರ್ಷ ಒಂದು ಗಿಡಕ್ಕೆ ನೂರಾರು ಕಾಯಿಗಳು ಬಿಟ್ಟಿದ್ದು, ಮಾವಿನ ಕಾಯಿ ಹೆಚ್ಚಾಗಿ ಗಿಡಗಳು ಬಾಗಿದ್ದವು. ಆದರೆ, ಮೊನ್ನೆ ರಾತ್ರಿ ಸುರಿದ ಗಾಳಿ ಮಳೆಯಿಂದಾಗಿ ಇನ್ನೊಂದು ತಿಂಗಳಲ್ಲಿ ಕಟಾವಿಗೆ ಬರುತ್ತಿದ್ದ ಮಾವು ನೆಲಕ್ಕೆ ಬಿದ್ದಿದೆ. ಹೀಗಾಗಿ ರೈತನಿಗೆ ಇದು ಇಳುವರಿ ಮೇಲೆ ಭಾರಿ ಹೊಡೆತ ಕೊಟ್ಟಂತಾಗಿದೆ.
ಒಂದು ಗಿಡಕ್ಕೆ ಐದು ಕೆ.ಜಿಯಷ್ಟು ಮಾವು ನೆಲಕ್ಕೆ ಬಿದ್ದಿದ್ದನ್ನ ಹಿಡಿದರೂ ಕೂಡ ಕನಿಷ್ಟ ವೆಂದರೂ 35 ಕ್ವಿಂಟಾಲ್ ವರೆಗೆ ಮಾವು ನೆಲ್ಲಕ್ಕೆ ಬಿದ್ದು ಹಾಳಾಗಿದೆ ಇದು ಸಹಜವಾಗಿಯೇ ರೈತರಿಗೆ ನಷ್ಟವನ್ನುಂಟು ಮಾಡಿದೆ. ಒಬ್ಬ ರೈತನಿಗೆ ಕಡಿಮೆ ಎಂದರೂ ಐನ್ನ 500 ರೂ. ರಿಂದ 7 ನೂರರವರೆಗೂ ಮಾವಿನ ಗಿಡಗಳಿವೆ. ಇನ್ನು ಕೆಲವರು ರೈತರಿಂದ ಮಾವಿನ ಹಣ್ಣನ್ನ ಮುಂಗಡ ಹಣ ಕೊಟ್ಟು ಖರೀದಿಸಿದ್ದಾರೆ. ಅವರಿಗೆ ಇದರಿಂದಾಗಿ ಬಾರೀ ನಷ್ಟವಾಗಿದೆ ಎಂದು ಮಾವಿನ ತೋಟವನ್ನ ಲೀಸ್ಗೆ ಪಡೆದವರು ಹೇಳುತ್ತಿದ್ದಾರೆ.
ಇದನ್ನೂ ಓದಿ:ದಾವಣಗೆರೆ: ಬರಗಾಲದಿಂದ 1.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಾಶ, 119 ಕೋಟಿ ರೂ. ನಷ್ಟ
ಈ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಅತ್ಯಧಿಕ ರುಚಿಯಿರುವ ಮಾವುಗಳಾದ ಬೇನಿಶಾ, ಮಲ್ಲಿಕಾ, ಮಲಗೋವಾ, ರಸಪುರಿ, ನೀಲಂ, ತೋತಾಪುರಿ ಹಾಗೂ ಇತರ ಜಾತಿಯ ಮಾವುಗಳನ್ನು ಹೆಚ್ಚಾಗಿ ಬೆಳೆಸಿದ್ದಾರೆ. ಈ ಬಾರಿ ಉತ್ತಮ ಫಸಲು ಬಂದಿದೆ ಎಂಬುವ ಖುಷಿಯಲ್ಲಿದ್ದ ಮಾವು ಬೆಳೆಗಾರರು ತಮ್ಮ ತೋಟಗಳನ್ನು ನೆರೆಯ ತೆಲಗಾಂಣ ಮಾರಾಟಗಾರರಿಗೆ ನೀಡಿದ್ದರು. ಆದರೆ, ಮಾರಾಟಗಾರರು ಮಾವಿನ ಕಾಯಿಗೆ ಒಳ್ಳೆ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಆಗಿದೆ.
ಹೀಗಾಗಿ ಮುಂಗಡ ಹಣವನ್ನು ವಾಪಸ್ಸು ಕೇಳುವ ದುಸ್ಥಿತಿ ಬಂದೆರಗಿದೆ. ರೋಗ ಬಾಧೆಯ ನಡುವೆಯೂ ಮಾವು ರೈತರ ಬದುಕಿಗೆ ನೆರವಾಗುತ್ತದೆ ಎಂಬ ಭ್ರಮೆಯಲ್ಲಿ ಸಾಲ ಸೋಲ ಮಾಡಿ, ರೋಗ ಬಾಧೆ ತಡೆಗೆ ಔಷಧ ಸಿಂಪಡಿಸಿ ಸಕಾಲಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಮಳೆಯಿಂದ ಹೆಚ್ಚಿನ ತೊಂದರೆ ಅನುಭವಿಸುವಂತ್ತಾಗಿದೆ. ಬೆಳೆಗೆ ಅಕಾಲಿಕ ಮಳೆ ರೈತರ ಆಸೆಗೆ ತಣ್ಣೀರೆರಚಿದೆ. ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ರೈತರು, ಅಳಲನ್ನು ತೋಡಿಕೊಂಡಿದ್ದಾರೆ.
ಕಳೆದ ವರ್ಷ ಕೂಡ ಬೀದರ್ ಜಿಲ್ಲೆಯಾದ್ಯಂತ ಆಲಿಕಲ್ಲು ಮಳೆ ಬಿದ್ದು ಕೋಟ್ಯಾಂತರ ರೂ. ಬೆಳೆ ನಾಶವಾಗಿತ್ತು. ಆಗ ಕೂಡ ಮಳೆ ಮತ್ತು ಬಿರುಗಾಳಿ ರೈತನ ಬಾಳಲ್ಲಿ ಆಟವಾಡಿತ್ತು. ಈಗ ಮತ್ತೆ ಅಕಾಲಿಕ ಮಳೆಯಿಂದಾಗಿ ಮಾವು ಬೆಳೆಗಾರ ಕಂಗಾಲಾಗಿದ್ದು, ಸರಕಾರ ಹೇಗೆ ಸ್ಫಂಧನೆ ಕೊಡುತ್ತದೆ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ