ಬೀದರ್: ಬೇರೆ ರಾಜ್ಯದ ರಿಜಿಸ್ಟ್ರೇಷನ್ ನಂಬರ್ ಹೊಂದಿರುವ ವಾಹನಗಳು ಕಂಡು ಬರೋದು ರಾಜ್ಯದ ಬೀದರ್ ಜಿಲ್ಲೆಯಲ್ಲಿ. ಎಪಿ, ಎಂಹೆಚ್, ಪುದುಚೇರಿ, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ವಾಹನಗಳ ನೋಂದಣಿ ಮಾಡಿಸಿ ಬೀದರ್‌ನಲ್ಲಿ ಓಡಾಡಿಸುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಐಷಾರಾಮಿ ವಾಹನ ಖರೀದಿಸುವ ಕೆಲವು ಉದ್ಯಮಿಗಳು ಕರ್ನಾಟಕಕ್ಕೆ ತೆರಿಗೆ ವಂಚಿಸುತ್ತಿದ್ದಾರೆ.
ಬೇರೆ ರಾಜ್ಯದಲ್ಲಿ ಐಷಾರಾಮಿ ವಾಹನಗಳ ನೋಂದಣಿ:
ಐಷಾರಾಮಿ ವಾಹನಗಳಿಗೆ ಕರ್ನಾಟಕದಲ್ಲಿ 10ರಿಂದ 15 ಲಕ್ಷದಷ್ಟು ತೆರಿಗೆ ಇದ್ರೆ, ಪುದುಚೇರಿಯಲ್ಲಿ ಕೇವಲ 75 ಸಾವಿರ ರೂಪಾಯಿಗಳು. ಹೀಗೆ ಎಲ್ಲರೂ ಎಲ್ಲಿ ಕಡಿಮೆ ತೆರೆಗೆ ಇದೆಯೊ ಅಲ್ಲಿ ತಮ್ಮ ವಾಹನಗಳ ನೋಂದಣಿ ಮಾಡಿಸುತ್ತಿದ್ದಾರೆ. ಬೀದರ್‌ನಲ್ಲಿ ಹೀಗೆ ತೆರಿಗೆ ವಂಚನೆ ಮಾಡುತ್ತಿದ್ರೆ, ಆರ್‌ಟಿಒ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿಲ್ಲ ಅನ್ನೋದು ಜನರ ಆರೋಪ.
ಜಿಲ್ಲೆಯಲ್ಲಿ ಶೇಕಡಾ 80 ರಷ್ಟು ವಾಹನಗಳು ಅನ್ಯರಾಜ್ಯದಲ್ಲಿಯೇ ನೋಂದಣಿಯಾಗಿವೆ. ಬೇರೆ ರಾಜ್ಯದಲ್ಲಿ ವಾಹನ ನೊಂದಣಿ ಮಾಡಿಸಿ ನಮ್ಮ ರಾಜ್ಯದಲ್ಲಿ ಓಡಾಡಿಸುವುದು ಕಾನೂನು ಬಾಹೀರವಾಗುತ್ತದೆ. ಆದ್ರೆ ಇವರಿಗೆ ಹೇಳುವರಿಲ್ಲ ಕೇಳೋರಿಲ್ಲ. ಕೆಲವರು ಹೈದರಾಬಾದ್-ಪುಣೆ-ಮುಂಬೈನಲ್ಲಿ ವ್ಯಾಪಾರ ವಹಿವಾಟು ಇರುವುದರಿಂದ ಅಲ್ಲಿ ನೋಂದಣಿ ಮಾಡಿಕೊಂಡಿದ್ದೆವೆಂದು ಎಂದು ಹೇಳುತ್ತಿದ್ದಾರೆ.
ಒಟ್ನಲ್ಲಿ ಗಡಿ ಜಿಲ್ಲೆ ಬೀದರ್‌ನ ಜನ ತೆರಿಗೆ ಹಣ ಉಳಿಸುವುದಕ್ಕೆ ಅಡ್ಡದಾರಿ ಹಿಡಿಯುತ್ತಿದ್ದಾರೆ. ಬೇರೆ ರಾಜ್ಯದಲ್ಲಿ ಕಮ್ಮಿ ಟ್ಯಾಕ್ಸ್ ಕಟ್ಟಿ ರಾಜ್ಯಕ್ಕೆ ಮೋಸ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಈಗಲೇ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಅಂದ್ರೆ ಮತ್ತಷ್ಟು ಮೋಸ ಆಗೋದ್ರಲ್ಲಿ ನೋ ಡೌಟ್.