ಸರಕಾರ ಮತದಾರರಿಗೆ ಕೊಟ್ಟಿದ್ದ ಗ್ಯಾರಂಟಿಗಳನ್ನ ಈಡೇರಿಸಲು ಆದಾಯ ಮೂಲವನ್ನ ಹುಡುಕುತ್ತಿದೆ. ಆದ್ರೆ ಬೀದರ ನಗರಸಭೆ ಮಾತ್ರ ಕೋಟಿಗಟ್ಟಲೆ ತೆರಿಗೆ ಬಾಕಿ ಉಳಿದಿದ್ದರೂ, ವಸೂಲು ಮಾಡದೆ ಕಣ್ಣುಚ್ಚಿ ಕುಳಿತಿದೆ. ಹಾಗಂತ ಇದು ಜನಸ್ನೇಹಿ ಅಂತ ತಿಳ್ಕೋಬೇಡಿ, ಬದಲಾಗಿ ಇಲ್ಲಿನ ಅಧಿಕಾರಿಗಳು ನಿದ್ರಾಸ್ಥಿತಿಯಿಂದ ಎದ್ದಿಲ್ಲ. ಇದು ಸಹಜವಾಗಿಯೇ ಜನರ ಆಕ್ರೋಶ ಹೆಚ್ಚಿಸುವಂತೆ ಮಾಡುತ್ತಿದೆ.
ಕೋಟ್ಯಾಂತರ ರೂಪಾಯಿ ಟ್ಯಾಕ್ಸ್ ಕಟ್ಟದೆ ಬಾಕಿ ಉಳಿಸಿಕೊಂಡ ಬೀದರ್ ಬ್ರಿಮ್ಸ್ ಆಸ್ಪತ್ರೆಯ ನಿರ್ದೇಶಕರು… 7 ಕೋಟಿ ರೂ.ಗೂ ಅಧಿಕ ಟ್ಯಾಕ್ಸ್ ಹಣ ಬಾಕಿ, ಹಣ ಕಟ್ಟುವಂತೆ ನೋಟಿಸ್ ಕೊಟ್ಟರೂ ತುಂಬಿಲ್ಲ ಹಣ… 10 ವರ್ಷದಿಂದ ತೆರಿಗೆ ಕಟ್ಟದ ಬ್ರಿಮ್ಸ್ ಆಸ್ಪತ್ರೆಯ ಅಧಿಕಾರಿಗಳು… ಟ್ಯಾಂಕ್ಸ್ ಕಟ್ಟದೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಮಳಿಗೆಗೆಗಳನ್ನ ಸೀಜ್ ಮಾಡುತ್ತಿರುವ ನಗರ ಸಭೆಯ ಸಿಬ್ಬಂದಿಗಳು… ಬಡವರಿಗೊಂದು ನ್ಯಾಯ ಸರಕಾರಿ ಇಲಾಖೆಗೆ ಒಂದು ನ್ಯಾಯವಾ? ಅಂತಾ ಪ್ರಶ್ನೀಸುತ್ತಿರುವ ಸಾರ್ವಜನಿಕರು.
ಬೀದರ್ ನಗರಸಭೆಗೆ ಪದೇ ಪದೇ ಆಯುಕ್ತರ ವರ್ಗಾವಣೆ, ನಗರಸಭೆಯ ಸಿಬ್ಬಂದಿಯಿಂದ ಕರ ವಸೂಲಿ ಮಾಡಲು ಮೀನಾಮೇಷ ಇತ್ಯಾದಿಗಳಿಂದಾಗಿ ಬೀದರ್ ನಗರ ಸಭೆಗೆ ಬರಬೇಕಾದ ಆಸ್ತಿ ಕರ ಹಾಗೂ ನೀರಿನ ಕರ ವಸೂಲಿ ಮಾಡದೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸುಮ್ಮನೇ ಇದ್ದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಬಾಕಿ ಬರಬೇಕಾದ ಕರ ಹನುಮನ ಬಾಲದ ಹಾಗೆ ಬೆಳೆಯುತ್ತಲೇ ಇದೆ.
ಬೀದರ್ ವೈದ್ಯಕೀಯ ವಿಜ್ಜಾನಗಳ ಸಂಸ್ಥೆ (ಬ್ರಿಮ್ಸ್) 10 ವರ್ಷಗಳಿಂದ ನಗರ ಸಭೆಗೆ ಬರೋಬ್ಬರಿ 7.09 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಇಷ್ಟು ದೊಡ್ಡ ಮೊತ್ತದ ಕರ ಬಾಕಿ ಇದ್ದರೂ ನಗರಸಭೆ ಮಾತ್ರ ಅದನ್ನ ವಸೂಲಿ ಮಾಡಲು ಮುಂದಾಗಿಲ್ಲ. ಹೆಸರಿಗೆ ಕರ ಕಟ್ಟಿ ಇಲ್ಲವೇ ಸೌಲಭ್ಯ ಕಟ್ ಮಾಡುತ್ತೇವೆಂದು ನೋಟಿಸ್ ಕೊಡುತ್ತಿದ್ದಾರೆಯೇ ಹೊರತು ತೆರಿಗೆ ವಸೂಲಿ ಮಾಡಲು ಮುಂದಾಗದಿರುವುದು ಇಲ್ಲಿನ ಜನರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.
ಬ್ರಿಮ್ಸ್ ಆಸ್ಪತ್ರೆಯೊಂದೆ ಕಳೆದ 10 ವರ್ಷದಿಂದ ಟ್ಯಾಕ್ಸ್ ಬಾಕಿ ಇಟ್ಟುಕೊಂಡಿದ್ದು ನಗರ ಸಭೆಯಿಂದ ಎಷ್ಟೋ ನೋಟಿಸ್ ಕೊಟ್ಟರು ಕೂಡಾ ಬ್ರಿಮ್ಸ್ ಆಸ್ಪತ್ರೆಯ ನಿರ್ದೇಶಕರು ಮಾತ್ರ ನಗರ ಸಭೆಯ ಕಮಿಷನರ್ ಕೊಡುವ ನೋಟಿಸ್ ಗೆ ಕ್ಯಾರೆ ಅನ್ನುತ್ತಿಲ್ಲ. ಇನ್ನು ಆಸ್ಪತ್ರೆಗೆ ಕೊಟ್ಟಿರುವ ಸೌಲಭ್ಯವನ್ನ ಕಟ್ ಮಾಡಬೇಕು ಅಂತಾ ಕಮಿಷನರ್ ನಿರ್ಧರಿಸಿದರೆ ರೋಗಿಗಳಿಗೆ ತೊಂದರೆಯಾಗುತ್ತದೆಂದು ಹಾಗೇ ಸುಮ್ಮನೇ ಇರುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಟ್ಯಾಕ್ಸ್ ಕಟ್ಟದೆ ಮೊಂಡು ವರ್ತನೆ ತೋರುತ್ತಿದ್ದಾರೆ.
ಈ ಬಗ್ಗೆ ನಗರ ಸಭೆಯ ಆಯುಕ್ತರನ್ನ ಕೇಳಿದರೆ ತೆರಿಗೆ ವಸೂಲಿಗೆ ಅಂತಾ ವಿಶೇಷವಾದ ತಂಡ ರಚಿಸಿದ್ದು ಜನರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಜೊತೆಗೆ ಜನರು ಯಾವುದಾರೂ ಕೆಲಸಕ್ಕೆ ನಗರಸಭೆಗೆ ಬಂದರೆ ನೀರಿನ ಕರ ಬಾಕಿ ಇಟ್ಟುಕೊಂಡಿದ್ದರೆ ಆ ಹಣವನ್ನ ಪಾವತಿ ಮಾಡಿದ ಮೇಲೆಯೇ ಅವರಿಗೆ ಅವರ ಕೆಲಸ ಮಾಡಿಕೊಡಲಾಗುತ್ತಿದೆ. ಇದರ ಜೊತೆಗೆ ಮನೆಗಳಿಗೆ ಅಳವಡಿಸಿರುವ ನೀರಿನ ಕನೆಕ್ಷನ್ ಕಟ್ ಮಾಡಿಯಾದರೂ ಆದಷ್ಟು ಬೇಗ ನೀರಿನ ಕರ ವಸೂಲಿ ಮಾಡುತ್ತೇವೆಂದು ಆಯುಕ್ತರು ಹೇಳುತ್ತಿದ್ದಾರೆ.
ನಗರ ಸಭೆಗೆ ತನ್ನ ಆದಾಯ ಮೂಲವೇ ತೆರಿಗೆ ಹಣ. ಆದರೆ ಅದನ್ನೇ ವಸೂಲಿ ಮಾಡದೆ ಹಾಗೇ ಬಿಟ್ಟರೇ ನಗರದ ಅಭಿವೃದ್ಧಿಯಾದರೂ ಹೇಗೆ ಮಾಡಲು ಸಾಧ್ಯ ಎಂದು ಇಲ್ಲಿನ ಜನರು ಪ್ರಶ್ನಿಸುವಂತಾಗಿದೆ. ಪ್ರತಿ ತಿಂಗಳು ಮನೆ ಮನೆಗೆ ಹೋಗಿ ಸ್ವಲ್ಪ ಸ್ವಲ್ಪವೇ ತೆರಿಗೆ ವಸೂಲಿ ಮಾಡಿದ್ದರೇ ಇಷ್ಟೊತ್ತಿಗಾಗಲೇ ತೆರಿಗೆ ಹಣ ನಗರಸಭೆಗೆ ಬರುತ್ತಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ವಸೂಲಾಗದೆ ಹಾಗೆ ಉಳಿದಿದ್ದು ಆ ಹಣ ಜನರಿಂದ ಹೇಗೆ ವಸೂಲಿ ಮಾಡುತ್ತಾರೋ, ಕಾದು ನೋಡಬೇಕಿದೆ.