ಬೀದರ್: ಮೂರು ವರ್ಷಗಳ ಹಿಂದೆ ಜಿಲ್ಲೆಯ ಔರಾದ್ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ ಆ ಕಾಲೇಜಿಗೆ ಹೋಗಲು ಸರಿಯಾದ ರಸ್ತೆ ಇಲ್ಲ. ಹತ್ತಾರು ಸಲ ಸಂಕಷ್ಟ ಹೇಳಿಕೊಂಡ್ರೂ ಪ್ರಯೋಜನವಾಗಿಲ್ಲ. ಹೀಗಾಗಿ, ಅವ್ರೆಲ್ಲ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ದಾರಿಯಲ್ಲಿ ಆಟೋ ಬರಲ್ಲ, ಬಸ್ ಓಡಾಡಲ್ಲ, ಬೈಕ್ನಲ್ಲಿ ಬರೋದು ಕಷ್ಟ, ಹೆಜ್ಜೆ ಇಡೋದಕ್ಕೂ ಕಷ್ಟ. ಕಲ್ಲುಗಳ ನಡುವೆ ಹೆಜ್ಜೆ ಹಾಕುತ್ತಾ, ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ಪರದಾಡ್ತಿದ್ದಾರೆ. ಮಳೆ, ಬಿಸಿಲು ಏನೇ ಇದ್ರೂ, ಹಾಳಾದ ರಸ್ತೆಯಲ್ಲೇ ನಡೆಯುವಂತಾಗಿದೆ.
ವಾರವಲ್ಲ.. ತಿಂಗಳಲ್ಲ.. ಮೂರು ವರ್ಷದಿಂದಲೂ ಇದೇ ರಸ್ತೆಯಲ್ಲಿ ವಿದ್ಯಾರ್ಥಿಗಳು ಕಲ್ಲು ಸವೆಸುತ್ತಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೋಗೋದಕ್ಕೆ ಸರಿಯಾದ ರಸ್ತೆಯಿಲ್ಲ. ರಸ್ತೆ ನಿರ್ಮಾಣಕ್ಕಾಗಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ, ರಸ್ತೆ ಭಾಗ್ಯಕ್ಕಾಗಿ ವಿದ್ಯಾರ್ಥಿಗಳೆಲ್ಲ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಔರಾದ್ ಪಟ್ಟಣದಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಕಾಲೇಜಿದೆ. ಹಳೇ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಕಾಲೇಜು ಸ್ಥಳಾಂತರವಾಗಿ ಮೂರು ವರ್ಷವಾಗಿದ್ದು, ಅಂದಿನಿಂದಲೂ ಇದೇ ರಸ್ತೆಯಲ್ಲಿ ಮಕ್ಕಳು ಹೆಜ್ಜೆ ಹಾಕ್ತಿದ್ದಾರೆ. ಹಳ್ಳ-ದಿಣ್ಣೆ, ಕಲ್ಲು, ಮುಳ್ಳಿನಿಂದ ರಸ್ತೆ ಕೂಡಿದ್ದು, ಆಟೋ, ಬಸ್ ಸೌಲಭ್ಯವಿಲ್ಲ. ಕಾಲೇಜಿನಲ್ಲಿ ಸುಮಾರು 750 ಸ್ಟೂಡೆಂಟ್ಸ್ಗಳಿದ್ದು ಕೆಲ ಯುವಕರು ಬೈಕ್ನಲ್ಲಿ ಬರೋದು ಬಿಟ್ರೆ, ಉಳಿದವ್ರೆಲ್ಲ ನಡೆದುಕೊಂಡೇ ಬರಬೇಕಾಗಿದೆ. ಹೆಣ್ಣು ಮಕ್ಕಳಿಗಂತೂ ಕಾಲೇಜಿಗೆ ಬಂದು ಹೋಗೋದೆ ಸವಾಲಾಗಿದೆ. ಇನ್ನು, ರಸ್ತೆ ಜತೆಗೆ ಲೈಬ್ರರಿ, ಕ್ಲಾಸ್ ರೂಂ, ಆಟದ ಮೈದಾನ ಸೇರಿದಂತೆ ಹತ್ತಾರು ಸಮಸ್ಯೆಗಳನ್ನ ಕಾಲೇಜು ಎದುರಿಸ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಕಾಲೇಜಿಗೆ ಹೆಚ್ಚು ಬರುತ್ತಿದ್ದು, ಬಸ್ ವ್ಯವಸ್ಥೆಗಾಗಿ ಜನಪ್ರತಿನಿಧಿಗಳ ಬಳಿ ಶಿಕ್ಷಕರು ಮೊರೆ ಇಡುತ್ತಿದ್ದಾರೆ.
ಒಟ್ನಲ್ಲಿ, ಕಾಲೇಜಿಗೆ ಹೋಗೋದು ಅಂದ್ರೆ ಗುಡ್ಡ ಹತ್ತಿ ಇಳಿದಂತಹ ಅನುಭವ ಆಗ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಯಾರಿಗೇ ಕಷ್ಟ ಹೇಳ್ಕೊಂಡ್ರೂ ಏನೂ ಪ್ರಯೋಜನವಾಗ್ತಿಲ್ಲ. ಹೀಗಾಗಿ, ವಿದ್ಯಾರ್ಥಿಗಳೆಲ್ಲ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯ ಏನ್ ಹೇಳುತ್ತೆ ನೋಡ್ಬೇಕು.
ವರದಿ: ಸುರೇಶ ನಾಯಕ್, ಟಿವಿ9 ಬೀದರ್
ಇದನ್ನೂ ಓದಿ: Literature : ನೆರೆನಾಡ ನುಡಿಯೊಳಗಾಡಿ: ಹರುಕಿ ಮುರಾಕಾಮಿ ಬರೆದ ಕಥೆ
ಉಕ್ರೇನ್ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಸಿದ್ದರಾಮಯ್ಯ
Published On - 12:53 pm, Fri, 25 February 22